ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧವು ಭಾರತದ ಹೊಸ್ತಿಲಿಗೆ ಬಂದು ತಲುಪಿದ್ದರೂ ಪ್ರಧಾನಿ ನರೇಂದ್ರ ಮೋದಿ ಅವರು ಮೌನ ವಹಿಸಿರುವುದು ದೇಶಕ್ಕೆ “ಅಪಾಯಕಾರಿ ಸಂಕೇತ” ಎಂದು ಆಮ್ ಆದ್ಮಿ ಪಕ್ಷದ ನಾಯಕ ಮನೀಶ್ ಸಿಸೋಡಿಯಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಜಾಗತಿಕ ಆತಂಕ ಹೆಚ್ಚಾಗುತ್ತಿರುವ ಈ ಸಮಯದಲ್ಲಿ ಪ್ರಧಾನಿಯ ನಿಲುವು ಭಾರತದ ಇಂಧನ ಸುರಕ್ಷತೆ ಮತ್ತು ರಾಷ್ಟ್ರೀಯ ಹಿತಾಸಕ್ತಿಗಳ ಮೇಲೆ ಪರಿಣಾಮ ಬೀರುತ್ತದೆ. ಒಂದು ತಿಂಗಳ ಹಿಂದೆಯಷ್ಟೇ ಪ್ರಧಾನಿ ಮೋದಿ ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಂಡಿದ್ದರು. ಆ ಒಪ್ಪಂದದಲ್ಲಿ ಅಮೆರಿಕ ಹೇರಿದ ಮುಖ್ಯ ಷರತ್ತನ್ನು ಮೋದಿ ಸ್ವೀಕರಿಸಿದ್ದರು. ಭಾರತ ಇನ್ನು ಮುಂದೆ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವುದಿಲ್ಲ ಎಂಬುದು. ಇದು ಕೇವಲ ರಾಜತಾಂತ್ರಿಕ ನಿರ್ಧಾರವಲ್ಲ; ದೇಶದ ಇಂಧನ ಸುರಕ್ಷತೆಗೆ ನೇರ ದಾಳಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಇದನ್ನು ಓದಿದ್ದೀರಾ? ಮಹಾರಾಷ್ಟ್ರದಲ್ಲಿ 60 ಲಕ್ಷ ರೂ. ಮೌಲ್ಯದ 28 ಟನ್ ಗೋಮಾಂಸ ವಶ: ರಫ್ತು ಜಾಲದ ಹಿಂದೆ ನಿತಿನ್ ಗಡ್ಕರಿ ಪುತ್ರನ ನಂಟು?
ಶ್ರೀಲಂಕಾ ತೀರದ ಬಳಿ ಭಾರತದ ‘ಮಿಲನ್’ ಸೇನಾ ವ್ಯಾಯಾಮದಲ್ಲಿ ಭಾಗವಹಿಸಿ ಮರಳುತ್ತಿದ್ದಾಗ ಅಮೆರಿಕ ಇರಾನ್‌ನ ಯುದ್ಧನೌಕೆಯೊಂದನ್ನು ಮುಳುಗಿಸಿದ ಘಟನೆಯನ್ನು ಉಲ್ಲೇಖಿಸಿ, “ಅಮೆರಿಕ ಈ ಯುದ್ಧವನ್ನು ಭಾರತದ ಹೊಸ್ತಿಲಿಗೆ ತಂದಿದೆ. ಘಟನೆಯ 24 ಗಂಟೆಗಳ ಬಳಿಕವೂ ಪ್ರಧಾನಿಯಿಂದ ಒಂದು ಮಾತೂ ಬಂದಿಲ್ಲ. ಈ ಮೌನ ಯಾರ ಹಿತಕ್ಕೆ ಸಹಾಯಕ?” ಎಂದು ಪ್ರಶ್ನಿಸಿದ್ದಾರೆ.
ಭಾರತದ ಗಡಿಯ ಸಮೀಪ ಇತರ ದೇಶಗಳು ಯುದ್ಧ ನಡೆಸುತ್ತಿರುವಾಗ ಈ ಮೌನವು ಜಗತ್ತಿಗೆ ಯಾವ ಸಂದೇಶ ನೀಡುತ್ತಿದೆ? ರಷ್ಯಾ ತೈಲ ಆಮದು ನಿಲ್ಲಿಸಿ, ಈಗ ಮಧ್ಯಪ್ರಾಚ್ಯದಲ್ಲಿ ಯುದ್ಧ ನಡೆಯುತ್ತಿರುವಾಗ ಭಾರತದ ತೈಲ ಪೂರೈಕೆ ಹೇಗೆ ಸ್ಥಿರವಾಗಿರುತ್ತದೆ? ಇಂಥ ರಾಜತಾಂತ್ರಿಕ ಕ್ರಮಗಳಿಂದ ದೇಶದಲ್ಲಿ ಪೆಟ್ರೋಲ್-ಡೀಸಲ್ ಬೆಲೆಗಳ ಮೇಲೆ ನಿಯಂತ್ರಣ ಕಳೆದುಕೊಳ್ಳುವ ಸಾಧ್ಯತೆ ಇದೆಯೇ? ಎಂದು ಮನೀಶ್ ಸಿಸೋಡಿಯಾ ಪ್ರಶ್ನಿಸಿದ್ದಾರೆ.





