ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ವಂಚನೆ ಪ್ರಕರಣದಲ್ಲಿ ಪರಾರಿಯಾಗಿರುವ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿ ವಿರುದ್ಧದ ತನಿಖೆ ಪ್ರಾರಂಭವಾಗಿ ಸುಮಾರು ಎಂಟು ವರ್ಷಗಳು ಕಳೆದಿವೆ. ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು (ಇಡಿ) ಇದೀಗ, ಚೋಕ್ಸಿ ಅವರ ಮಗ ರೋಹನ್ ಚೋಕ್ಸಿ ಕೂಡ ಅಕ್ರಮ ಹಣ ವರ್ಗಾವಣೆಯಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ ಎಂದು ಹೇಳಿದೆ. ದೆಹಲಿಯ ವಿಚಾರಣಾ ನ್ಯಾಯಮಂಡಳಿ ಎದುರು ಹೇಳಿಕೆ ದಾಖಲಿಸಿದೆ.
ಆದಾಗ್ಯೂ, ರೋಹನ್ ಚೋಕ್ಸಿ ಅವರ ಹೆಸರು ಸಿಬಿಐ ಅಥವಾ ಇಡಿ ನೋಂದಾಯಿಸಿರುವ ಯಾವುದೇ ಎಫ್‌ಐಆರ್‌ನಲ್ಲಿ ಕಾಣಿಸಿಕೊಂಡಿಲ್ಲ. ಅಲ್ಲದೆ, ಯಾವುದೇ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಪ್ರಕರಣದಲ್ಲಿ ಅವರನ್ನು ಆರೋಪಿಯನ್ನಾಗಿ ಉಲ್ಲೇಖಿಸಲಾಗಿಲ್ಲ ಎಂದು ತಿಳಿದುಬಂದಿದೆ.
ನ್ಯಾಯಮಂಡಳಿಯ ಮುಂದೆ ತನ್ನ ಲಿಖಿತ ಹೇಳಿಕೆ ಸಲ್ಲಿಸಿರುವ ಇಡಿ, “ಮೆಹುಲ್ ಚೋಕ್ಸಿ ಕಾಗದದ ಮೇಲೆ ಮಾತ್ರ ಅಸ್ತಿತ್ವದಲ್ಲಿದ್ದ ಹಲವಾರು ಕಂಪನಿಗಳಿಗೆ ನಿರ್ದೇಶಕರಾಗಿದ್ದರು. ಅವರ ಈ ಶೆಲ್ ಕಂಪನಿಗಳನ್ನು ಕಾಲ್ಪನಿಕ ವಹಿವಾಟುಗಳ ತೋರಿಕೆಗಾಗಿ ಮತ್ತು ಅಕ್ರಮ ಆದಾಯವನ್ನು ವರ್ಗಾವಣೆ ಮಾಡುವುದಕ್ಕಾಗಿ ಸ್ಥಾಪಿಸಲಾಗಿದೆ. ಈ ಕಂಪನಿಗಳು ಯಾವುದೇ ನಿಜವಾದ ಖರೀದಿ ಅಥವಾ ಸರಕುಗಳ ಮಾರಾಟ ನಡೆಸಿಲ್ಲ” ಎಂದು ವಿವರಿಸಿದೆ.
“ಮೆಹುಲ್ ಚೋಕ್ಸಿ ನಿರ್ದೇಶಕರಾಗಿರುವ ‘ಲಸ್ಟರ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್’ ಎಂಬ ಮತ್ತೊಂದು ಕಂಪನಿಯಲ್ಲಿ ರೋಹನ್ ಚೋಕ್ಸಿ 99.99%ರಷ್ಟು ಷೇರುಗಳನ್ನು ಹೊಂದಿದ್ದಾರೆ. ಈ ಕಂಪನಿಯನ್ನು ವಿದೇಶಕ್ಕೆ ಹಣವನ್ನು ರವಾನಿಸಲು ಬಳಸಲಾಗಿದೆ” ಎಂದು ತನಿಖೆಯಲ್ಲಿ ತಿಳಿದುಬಂದಿರುವುದಾಗಿ ಹೇಳಿಕೊಂಡಿದೆ.
ED ಪ್ರಕಾರ, ಏಷ್ಯನ್ ಡೈಮಂಡ್ ಆ್ಯಂಡ್ ಜ್ಯುವೆಲ್ಲರಿ ಎಫ್‌ಝಡ್‌ಇನಿಂದ ಸಿಂಗಾಪುರ ಮೂಲದ ಮೆರ್ಲಿನ್ ಲಕ್ಸರಿ ಗ್ರೂಪ್ ಪ್ರೈವೇಟ್ ಲಿಮಿಟೆಡ್‌ಗೆ 1,27,500 ಅಮೆರಿಕನ್ ಡಾಲರ್ (ಸುಮಾರು 91.6 ಲಕ್ಷ ರೂ.) ಮೊತ್ತವನ್ನು ವರ್ಗಾಯಿಸಲಾಗಿದೆ. ಏಷ್ಯನ್ ಡೈಮಂಡ್ ಆ್ಯಂಡ್ ಜ್ಯುವೆಲ್ಲರಿ ಎಫ್‌ಝಡ್‌ಇ ಕಂಪನಿಯಿಂದ ಬಂದ ಅಕ್ರಮ ಆದಾಯವನ್ನು ನೇರವಾಗಿ ಈ ಕಂಪನಿಗೆ ವರ್ಗಾಯಿಸಲಾಗಿದೆ.
ಈ ಲೇಖನ ಓದಿದ್ದೀರಾ?: ಭಾರತದಲ್ಲಿ ದ್ವೇಷವೆಂಬುದು ಹೇಗೆಲ್ಲ ಅಧಿಕಾರಸ್ಥರ ವ್ಯಾಕರಣ ಆಗಿ ಹೋಯಿತು!
“ಸಿಂಗಾಪುರ ಮೂಲದ ಮೆರ್ಲಿನ್ ಲಕ್ಸರಿ ಗ್ರೂಪ್ ಕೂಡ ಮೆಹುಲ್ ಚೋಕ್ಸಿಯ ನಿಯಂತ್ರಣದಲ್ಲಿದೆ. ಅದು ಲಸ್ಟರ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ಮೂಲಕ ಕಾರ್ಯನಿರ್ವಹಿಸುತ್ತಿದೆ. ಅದೇ ಕಂಪನಿಯಲ್ಲಿ ರೋಹನ್ ಚೋಕ್ಸಿ 99.99%ರಷ್ಟು ಪಾಲನ್ನು ಹೊಂದಿರುವುದರಿಂದ, ಅವರು ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಇಡಿ ವಾದಿಸಿದೆ.
ದಾಖಲೆಯಲ್ಲಿರುವ ಎಲ್ಲ ಸಂಗತಿಗಳು ಮತ್ತು ಪುರಾವೆಗಳು ರೋಹನ್ ಚೋಕ್ಸಿ ತನ್ನ ತಂದೆಯೊಂದಿಗೆ ಅಕ್ರಮ ಹಣ ವರ್ಗಾವಣೆಯ ಅಪರಾಧದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ ಎಂದು ಸ್ಪಷ್ಟವಾಗಿ ಸೂಚಿಸುತ್ತದೆ. ಈ ಆಧಾರದ ಮೇಲೆ, ರೋಹನ್ ಚೋಕ್ಸಿಗೆ ಸಂಬಂಧಿಸಿದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು ಎಂದು ತನಿಖಾ ಸಂಸ್ಥೆ ಸಮರ್ಥಿಸಿಕೊಂಡಿದೆ.
ಪಿಎನ್‌ಬಿ ವಂಚನೆ ಪ್ರಕರಣದಲ್ಲಿ ಮೆಹುಲ್ ಚೋಕ್ಸಿ ಮತ್ತು ಅವರ ಸೋದರಳಿಯ ನೀರವ್ ಮೋದಿ ಪ್ರಮುಖ ಆರೋಪಿಗಳಾಗಿದ್ದು, ಅವರ ವಿರುದ್ಧ ಸಿಬಿಐ ಮತ್ತು ಇಡಿ ಎರಡೂ ತನಿಖೆ ನಡೆಸುತ್ತಿವೆ. ಇವರಿಬ್ಬರೂ ಮುಂಬೈನಲ್ಲಿರುವ ಪಿಎನ್‌ಬಿ ಬ್ರಾಡಿ ಹೌಸ್ ಶಾಖೆಯಲ್ಲಿ ಅಧಿಕಾರಿಗಳಿಗೆ ಲಂಚ ನೀಡುವ ಮೂಲಕ ಬ್ಯಾಂಕ್‌ನಿಂದ 13,000 ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ಸಾಲ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಪ್ರಕರಣ ಬೆಳಕಿಗೆ ಬರುವ ಸಮಯದಲ್ಲೇ 2018ರ ಜನವರಿಯಲ್ಲಿ ಚೋಕ್ಸಿ ಭಾರತದಿಂದ ಪಲಾಯನ ಮಾಡಿದ್ದಾರೆ.




