ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಕೃತ್ಯವನ್ನು ಚಿತ್ರೀಕರಿಸಿ, ವಿಡಿಯೋಗಳನ್ನು ‘ಪೋರ್ನ್’ ವೆಬ್‌ಸೈಟ್‌ನಲ್ಲಿ ಹರಿಬಿಟ್ಟಿದ್ದ ವಿಕೃತ ದಂಪತಿಗೆ ನ್ಯಾಯಾಲಯವು ಮರಣದಂಡನೆ ವಿಧಿಸಿದೆ.
ಉತ್ತರ ಪ್ರದೇಶದ ಬಂದಾ ಜಿಲ್ಲೆಯ ವಿಶೇಷ ಪೋಕ್ಸೊ ನ್ಯಾಯಾಲಯವು ಈ ಐತಿಹಾಸಿಕ ತೀರ್ಪು ಘೋಷಿಸಿದೆ.
ಆರು ವರ್ಷಗಳ ಹಿಂದೆ ಚಿತ್ರಕೂಟ ಪ್ರದೇಶದಲ್ಲಿ 33 ಮಕ್ಕಳನ್ನು ಅಪಹರಣ ಮಾಡಿ ದೌರ್ಜನ್ಯ ಎಸಗಿದ್ದ ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಿ, ತೀರ್ಪು ಪ್ರಕಟಿಸಿದೆ. ನೀರಾವರಿ ಇಲಾಖೆಯಲ್ಲಿ ಜೂನಿಯರ್ ಎಂಜಿನಿಯರ್ ಆಗಿದ್ದ ರಾಮ್ ಭವನ್ ಮತ್ತು ಆತನ ಪತ್ನಿ ದುರ್ಗಾವತಿಗೆ ಮರಣದಂಡನೆ ವಿಧಿಸಿದೆ.
ಬಂದಾ, ಚಿತ್ರಕೂಟ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಕ್ಕಳ ಮೇಲೆ ದೌರ್ಜನ್ಯ ಎಸಗಿದ ಪ್ರಕರಣ ಸಂಬಂಧ 2020ರ ಅಕ್ಟೋಬರ್‌ನಲ್ಲಿ ಆಪಾದಿತ ದಂಪತಿಗಳನ್ನು ಕೇಂದ್ರ ತನಿಖಾ ದಳ (ಸಿಬಿಐ) ಬಂಧಿಸಿತ್ತು. ಆರೋಪಿಗಳು 5ರಿಂದ 16 ವರ್ಷದೊಳಗಿನ ಮಕ್ಕಳನ್ನು ಗುರಿಯಾಗಿಸಿಕೊಂಡು, ದೌರ್ಜನ್ಯ ಎಸಗಿದ್ದಾರೆ. ಕೃತ್ಯವನ್ನು ಚಿತ್ರೀಕರಿಸಿ, ಹರಿಬಿಟ್ಟಿದ್ದಾರೆ ಎಂದು ಸಿಬಿಐ ಚಾರ್ಜ್‌ಶೀಟ್ ಸಲ್ಲಿಸಿತ್ತು.
ವಿಚಾರಣೆಯನ್ನು ಪೂರ್ಣಗೊಳಿಸಿರುವ ನ್ಯಾಯಾಲಯವು ವಿಕೃತ ದಂಪತಿಗಳಿಗೆ ಮರಣದಂಡನೆ ವಿಧಿಸಿದೆ. ಅಲ್ಲದೆ, ಸಂತ್ರಸ್ತೆಯ ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿಗಳ ಆರ್ಥಿಕ ಪರಿಹಾರ ನೀಡುವಂತೆ ಸರ್ಕಾರಕ್ಕೆ ಆದೇಶಿಸಿದೆ.




