2016ರಲ್ಲಿ ಅಮಾನ್ಯಗೊಂಡ 500 ರೂ. ಮತ್ತು 1,000 ರೂ. ಮುಖಬೆಲೆಯ ನೋಟುಗಳನ್ನು ಮಾರಾಟ ಮಾಡುತ್ತಿದ್ದ ಜಾಲವನ್ನು ದೆಹಲಿ ಪೊಲೀಸರು ಭೇದಿಸಿದ್ದಾರೆ. ಸುಮಾರು 3.5 ಕೋಟಿ ರೂ. ಮೌಲ್ಯದ ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ.
ದೆಹಲಿಯ ವಝೀರ್‌ಪುರ ಪ್ರದೇಶದಲ್ಲಿ ಅಮಾನ್ಯಗೊಂಡ ನೋಟುಗಳನ್ನು ತುಂಬಿದ್ದ ಹಲವಾರು ಬ್ಯಾಗ್‌ಗಳನ್ನು ದೆಹಲಿ ಕ್ರೈಂ ಬ್ರಾಂಚ್ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಮಾನ್ಯಗೊಂಡ ನೋಟುಗಳನ್ನು ಇಟ್ಟುಕೊಳ್ಳುವುದು ಕಾನೂನಬಾಹಿರ. ಆದರೂ, ಆರೋಪಿಗಳು ತ್ವರಿತವಾಗಿ ಹಣ ಸಂಪಾದಿಸಲು ಹಳೆ ನೋಟುಗಳನ್ನು ಬಳಸಿಕೊಂಡು, ಅಕ್ರಮ ವ್ಯವಹಾರದಲ್ಲಿ ತೊಡಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಹಳೆಯ ನೋಟುಗಳನ್ನು ಅತ್ಯಂತ ಕಡಿಮೆ ಬೆಲೆಗೆ ಖರೀದಿಸಿ, ಅವುಗಳನ್ನು ಬೇರೆಯವರಿಗೆ ಮಾರಾಟ ಮಾಡುತ್ತಿದ್ದರು. ಮಾಹಿತಿ ಪಡೆದು ಕಾರ್ಯಾಚರಣೆ ನಡೆಸಲಾಗಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಂಧಿತರನ್ನು ದೆಹಲಿಯ ಹರ್ಷ್, ಟೀಕ್‌ಚಂದ್, ಲಕ್ಷ್ಯ ಹಾಗೂ ಹಿಮಾಚಲ ಪ್ರದೇಶದ ಜೋಗಿಂದರ್ ನಗರದ ವಿಪಿನ್ ಕುಮಾರ್ ಎಂದು ಹೆಸರಲಿಸಲಾಗಿದೆ. ಈ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಸಾಧ್ಯತೆಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ. ತನಿಖೆ ಮುಂದುವರೆಸಿದ್ದಾರೆ.
ಆರೋಪಿಗಳ ವಿರುದ್ಧ ಬ್ಯಾಂಕ್ ನೋಟುಗಳ ಕಾಯ್ದೆ ಮತ್ತು ಬಿಎನ್‌ಎಸ್ ಕಾಯ್ದೆಯಡಿ ವಂಚನೆ, ಕ್ರಿಮಿನಲ್ ಪಿತೂರಿಗೆ ಸಂಬಂಧಿಸಿದ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.




