ಆಂಧ್ರಪ್ರದೇಶದಲ್ಲಿ ಏಕಕಾಲಕ್ಕೆ ನಡೆದ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯ ಮತದಾನವನ್ನು ಅಪಹರಿಸಿರುವ ನಿಚ್ಚಳ ಅಪಾಯದತ್ತ ಬೆರಳು ತೋರುವ ಆಸ್ಫೋಟಕ ವಿಶ್ಲೇಷಣೆಯಿದು. ಚುನಾವಣಾ ಆಯೋಗದ ಅಧಿಕೃತ ದಾಖಲೆಗಳನ್ನೇ ಆಧರಿಸಿ ನಡೆಸಿರುವ ಪರಾಮರ್ಶೆ. 2024ರ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಮೋಸ ನಡೆದಿದೆ! ವಿಶ್ಲೇಷಕರಾದ ಪರಕಾಲ ಪ್ರಭಾಕರ್ ಅವರು ಖುದ್ದು ಚಂದ್ರಬಾಬು ನಾಯ್ಡು ಅವರಿಗೆ ಅಧಿಕೃತ ಸಲಹೆಗಾರರಾಗಿದ್ದವರು. ಅಂದ ಹಾಗೆ, ಈ ರಾಜನೀತಿಜ್ಞರು ಮೋದಿ ಸರ್ಕಾರದ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಅವರ ಪತಿ!– ಈ ವಿಶ್ಲೇಷಣೆ The wire ನಲ್ಲಿ ಪ್ರಕಟವಾಗಿದ್ದು, ಅವರ ಅನುಮತಿಯೊಂದಿಗೆ ‘ಈದಿನ’ದಲ್ಲಿ ಪ್ರಕಟಿಸುತ್ತಿದ್ದೇವೆ.
2024ರ ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯ ಮತದಾನದ ದತ್ತಾಂಶಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಆಡಳಿತ ಮೈತ್ರಿಕೂಟವು 175 ಸ್ಥಾನಗಳಲ್ಲಿ 164 ಸ್ಥಾನಗಳನ್ನು ಗೆದ್ದ ‘ಸೋಜಿಗ’ದ ಹಿಂದೆ ‘ಕುಚೇಷ್ಟೆ’ ಅಥವಾ ‘ಮೋಸ’ ಇರಬಹುದೆಂದು ವೇದ್ಯವಾಗುತ್ತದೆ.
ಇಲ್ಲಿ ನೀಡಲಾದ ಎಲ್ಲ ಅಂಕಿ-ಅಂಶಗಳನ್ನು ಭಾರತದ ಚುನಾವಣಾ ಆಯೋಗ (ECI), ಆಂಧ್ರಪ್ರದೇಶದ ಮುಖ್ಯ ಚುನಾವಣಾ ಅಧಿಕಾರಿ (CEO), ಅವರ ಅಧಿಕೃತ ಅಧಿಸೂಚನೆಗಳು- ಪತ್ರಿಕಾ ಪ್ರಕಟಣೆಗಳಿಂದ ತೆಗೆದುಕೊಳ್ಳಲಾಗಿದೆ
ಮೇ 13, 2024ರ ಸಂಜೆ, ಆಂಧ್ರಪ್ರದೇಶದ ಮುಖ್ಯಚುನಾವಣಾಧಿಕಾರಿ (CEO) ಮಾಧ್ಯಮಗಳಿಗೆ ಸಂಜೆ 5 ಗಂಟೆಯವರೆಗೆ 68.04% ರಷ್ಟು ಮತದಾನ ನಡೆದಿರುವುದಾಗಿ ಘೋಷಿಸಿದರು. ಇನ್ನೂ ಬಹಳಷ್ಟು ಜನರು ಮತದಾನಕ್ಕಾಗಿ ಕಾಯುತ್ತಿದ್ದು, ಮತದಾನದ ಶೇಕಡಾವಾರು ಪ್ರಮಾಣ ಇನ್ನಷ್ಟು ಹೆಚ್ಚಾಗಬಹುದು ಎಂದರು.

ಭಾರತ ಚುನಾವಣಾ ಆಯೋಗದ 13.05.2024ರ ಪತ್ರಿಕಾ ಪ್ರಕಟಣೆ ಸಂಖ್ಯೆಯ( ECI/PN/82/2024) ಪ್ರಕಾರ, ಅಂದು ರಾತ್ರಿ 8 ಗಂಟೆಯವರೆಗೆ ಶೇ. 68.12% ರಷ್ಟು ಮತದಾನ ನಡೆದಿತ್ತು.

ಅದೇ ದಿನ ಮೇ 13, 2024ರ ರಾತ್ರಿ 11:45ಕ್ಕೆ, ECI ಪತ್ರಿಕಾ ಪ್ರಕಟಣೆ ಸಂಖ್ಯೆ ECI/PN/84/2024 ದಿನಾಂಕ ಮೇ 13, 2024ರ ಪ್ರಕಾರ ಮತದಾನ 76.50%ಕ್ಕೆ ಏರಿತು.

ಮೇ 17, 2024ರಂದು, ECI/PN/89/2024 ಮೂಲಕ ಆಂಧ್ರಪ್ರದೇಶದ ಮತದಾನ ಪ್ರತಿಶತವನ್ನು 80.66%ಕ್ಕೆ ಹೆಚ್ಚಿಸಿ ‘ತಿದ್ದುಪಡಿ’ ಮಾಡಲಾಯಿತು.

ಆಂಧ್ರಪ್ರದೇಶದ ಮುಖ್ಯಚುನಾವಣಾಧಿಕಾರಿಯವರು ಈ ಪ್ರಮಾಣ ಶೇ.81.86 ಎಂದು ಹೇಳಿದರು. ಮತ್ತು ಭಾರತ ಚುನಾವಣಾ ಆಯೋಗದ ವರದಿಯಲ್ಲಿ ಅಖೈರು ಶೇಕಡಾವಾರು ಪ್ರಮಾಣವನ್ನು 81.79% ಎಂದು ನಮೂದಿಸಲಾಗಿದೆ. ಎರಡೂ ಪ್ರಮಾಣಗಳಲ್ಲಿ EVM ಮತಗಳು ಮತ್ತು ಅಂಚೆ ಮತಪತ್ರಗಳನ್ನು ಸೇರಿಸಲಾಗಿದೆ.


ಈ ಸಂಖ್ಯೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ, ಆಂಧ್ರಪ್ರದೇಶದ ‘ಸೋಜಿಗ’ದ ಹಿಂದಿನ ‘ಕುಚೇಷ್ಟೆ’ ಸ್ಪಷ್ಟವಾಗಿ ಕಾಣಿಸುತ್ತದೆ. ಮತದಾನದ ದಿನದಂದು ಸಂಜೆ 5 ಗಂಟೆಯವರೆಗೆ ಶೇ.68.04 (CEO ಪ್ರಕಾರ) ಪ್ರತಿ ಗಂಟೆಗೆ ಸರಾಸರಿ 6.8% ಮತದಾನವನ್ನು ಸೂಚಿಸುತ್ತದೆ. 10 ತಾಸುಗಳ ಮತದಾನ ನಡೆದಿತ್ತು.
ಅದು ರಾತ್ರಿ 8 ಗಂಟೆಯವರೆಗೆ ಈ ಪ್ರಮಾಣ ಶೇ.68.12%ಕ್ಕೆ ಏರಿತು. ಅಂದರೆ, 3 ತಾಸುಗಳಲ್ಲಿ ಕೇವಲ 0.08% ಹೆಚ್ಚಳ ಕಂಡಿತ್ತು. ಆದರೆ, ಅದೇ ದಿನ ರಾತ್ರಿ 11:45ಕ್ಕೆ ಮತದಾನ 76.50%ಕ್ಕೆ ಏರಿತು. ಅಂದರೆ, ಮಧ್ಯಾಹ್ನ 5 ರಿಂದ ರಾತ್ರಿ 11:45ರವರೆಗೆ ಕಂಡು ಬಂದ ಹೆಚ್ಚಳದ ಪ್ರಮಾಣ ಶೇ.8.38 . ಆಂಧ್ರಪ್ರದೇಶದ ಮುಖ್ಯ ಚುನಾವಣಾಧಿಕಾರಿಯವರು (CEO) 3,500 ಮತಗಟ್ಟೆಗಳಲ್ಲಿ ಇನ್ನೂ ಮತದಾನ ನಡೆಯುತ್ತಿದೆ ಎಂದು ಹೇಳಿದ್ದರು.


ಈ 3,500 ಮತಗಟ್ಟೆಗಳಲ್ಲಿ ಮಧ್ಯರಾತ್ರಿಯ ನಂತರ ಚಲಾವಣೆಯಾಗಿರುವ ಮತಗಳು, ಮತದಾನದ ಪ್ರತಿಶತವನ್ನು 4.16%ರಷ್ಟು ಹೆಚ್ಚಿಸಿ 80.66%ಕ್ಕೆ ತಂದು ಮುಟ್ಟಿಸಿವೆ! (ECI/PN/89/2024 ಪ್ರಕಾರ, ಅಂಚೆ ಮತಪತ್ರಗಳನ್ನು ಹೊರತುಪಡಿಸಿ).

ಈ ಪ್ರತಿಶತವನ್ನು ನಿಜವಾದ ಸಂಖ್ಯೆಗೆ ಪರಿವರ್ತಿಸಿದರೆ, 3,500 ಮತಗಟ್ಟೆಗಳಲ್ಲಿ ಮಧ್ಯರಾತ್ರಿಯ ನಂತರ 17,19,482 ಮತಗಳು ಬಂದಿವೆ.
ಅಂದರೆ, ಸರಾಸರಿ ಲೆಕ್ಕ ಹಿಡಿದರೆ ಪ್ರತಿ ಮತಗಟ್ಟೆಗೆ 491ಕ್ಕಿಂತ ತುಸು ಹೆಚ್ಚು ಮತಗಳು ಮಧ್ಯರಾತ್ರಿಯ ನಂತರ ಬಂದಿವೆ. ಸ್ಪಷ್ಟವಾಗಿ, ಪ್ರತಿ ಮತಗಟ್ಟೆಯಲ್ಲಿ ನಿಖರವಾಗಿ 491 ಇರಲಾರದು. ಕೆಲವು ಮತಗಟ್ಟೆಗಳಲ್ಲಿ ಕಡಿಮೆ ಇದ್ದರೆ, ಇನ್ನು ಕೆಲವು ಮತಗಟ್ಟೆಗಳಲ್ಲಿ ಹೆಚ್ಚು ಇರಬೇಕು.
ರಾಜ್ಯದ 46,389 ಮತಗಟ್ಟೆಗಳಲ್ಲಿ ಬೆಳಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ಸರಾಸರಿ ಪ್ರತಿ ಗಂಟೆಗೆ 60.7 ಮತಗಳು ಬಂದಿವೆ. ಇದು ಬಹಳ ವೇಗದ ಮತದಾನ. ಏಕೆಂದರೆ ಪ್ರತಿ ಮತದಾರ ಎರಡು ಮತಗಳನ್ನು ಹಾಕಬೇಕಿತ್ತು – ಒಂದು ಲೋಕಸಭೆಗೆ ಮತ್ತೊಂದು ವಿಧಾನಸಭೆಗೆ.
ಆದರೆ, ರಾತ್ರಿ 11:45ರ ನಂತರ ಈ 3,500 ಮತಗಟ್ಟೆಗಳಲ್ಲಿ ಇಷ್ಟೊಂದು ಮತಗಳು ಬಾಕಿ ಇದ್ದರೆ, ಬೆಳಗ್ಗೆ 7 ರಿಂದ ರಾತ್ರಿ 11:45ರವರೆಗೆ ಆ ಮತಗಟ್ಟೆಗಳಲ್ಲಿ ಮತದಾನ ಅತ್ಯಂತ ಮಂದಗತಿಯಲ್ಲಿ ನಡೆದಿರಬೇಕು – ಅರ್ಥಾತ್ ಪ್ರತಿ ಗಂಟೆಗೆ 24ಕ್ಕಿಂತ ಕಡಿಮೆ ಮತಗಳು.
ರಾಜ್ಯದ ಸರಾಸರಿ ಮತದಾನದ ವೇಗವನ್ನು ಪರಿಗಣಿಸಿದರೆ, ಆ ಮತಗಟ್ಟೆಗಳಲ್ಲಿನ ಮತದಾನ ಮರುದಿನ ಬೆಳಗ್ಗೆ 7 ಅಥವಾ 8 ಗಂಟೆಯವರೆಗೆ ಮುಂದುವರೆಯಬೇಕಿತ್ತು. 491ಕ್ಕಿಂತ ಹೆಚ್ಚು ಮತಗಳಿದ್ದ ಮತಗಟ್ಟೆಗಳಲ್ಲಿ ಮರುದಿನ10 ಅಥವಾ 11 ಗಂಟೆಯವರೆಗೆ ಮುಂದುವರೆಯಬೇಕಿತ್ತು.
ಆದರೆ ಹಾಗೆ ಮರುದಿನ ಮುಂಜಾನೆಯವರೆಗೆ ಮತದಾನ ನಡೆಯಿತೇ? ಖಂಡಿತವಾಗಿ ಇಲ್ಲ.
ಮೇ 14, 2024ರ ಪತ್ರಿಕಾ ಗೋಷ್ಠಿಯಲ್ಲಿ ಆಂಧ್ರಪ್ರದೇಶದ ಮುಖ್ಯಚುನಾವಣಾಧಿಕಾರಿಯವರು (CEO) ಸ್ಪಷ್ಟವಾಗಿ ಹೇಳಿದರು: ಕೊನೆಯ ಮತ ಮೇ 14ರ ಬೆಳಗ್ಗೆ 2 ಗಂಟೆ ಸುಮಾರಿಗೆ ಹಾಕಲಾಯಿತು. ಅಂದರೆ, ಮೇ 13ರ ರಾತ್ರಿ 11:45ರ ನಂತರ 2 ಗಂಟೆ 15 ನಿಮಿಷಗಳಲ್ಲಿ ಮತದಾನ ಮುಕ್ತಾಯವಾಗಿತ್ತು.
ಅಂದರೆ, 2 ಗಂಟೆ 15 ನಿಮಿಷಗಳಲ್ಲಿ 17,19,482 ಮತಗಳನ್ನು ಚಲಾಯಿಸಲಾಗಿದೆ!

ಒಂದು ಮತ ಚಲಾವಣೆಗೆ ಕೇವಲ ಒಂದು ನಿಮಿಷ ತೆಗೆದುಕೊಂಡರೂ, 491 ಮತಗಳಿಗೆ 491 ನಿಮಿಷಗಳು ಬೇಕು – ಸುಮಾರು 8 ಗಂಟೆಗಳು. 2 ನಿಮಿಷಗಳಾದರೆ ಸುಮಾರು 16 ಗಂಟೆಗಳು.
ಈ 17,19,482 ಮತಗಳು ಎಲ್ಲ ಮತಗಟ್ಟೆಗಳಲ್ಲಿ ಸಮವಾಗಿ ಹಂಚಿಕೆಯಾಗಿರಲಿಕ್ಕಿಲ್ಲ.ಕೆಲವು ಮತಗಟ್ಟೆಗಳಲ್ಲಿ 491ಕ್ಕಿಂತ ಕಡಿಮೆ ಇದ್ದರೆ, ಇನ್ನು ಕೆಲವು ಮತಗಟ್ಟೆಗಳಲ್ಲಿ ಹೆಚ್ಚು ಇರಬೇಕು. 491ಮತದಾರರು ಅಥವಾ ಹೆಚ್ಚು ಕಾಯುತ್ತಿದ್ದ ಮತದಾರರಿದ್ದ ಬೂತ್‌ಗಳಲ್ಲಿ ಮತದಾನ ತುಂಬಾ ದೀರ್ಘಕಾಲ ಮುಂದುವರಿಯಬೇಕಿತ್ತು.
ಆದರೆ ಆಂಧ್ರದ ಮುಖ್ಯ ಚುನಾವಣಾಧಿಕಾರಿ (CEO) ಅಧಿಕೃತವಾಗಿ ಹೇಳಿದರು: “ಕೊನೆಯ ಮತ ಮೇ 14ರ ಬೆಳಗ್ಗೆ 2:00ಕ್ಕೆ ಬಿದ್ದಿದೆ.”
ಅಂದರೆ, 491 ಅಥವಾ ಹೆಚ್ಚು ಕಾಯುತ್ತಿದ್ದ ಮತಗಟ್ಟೆಗಳಲ್ಲಿನ ಮತದಾನ ರಾತ್ರಿ 2 ಗಂಟೆಗೆ ಮುಗಿಯಲು ಸಾಧ್ಯವಿರಲಿಲ್ಲ. ಒಂದುಂ ವೇಳೆ ಮುಗಿದಿದ್ದರೆ, ಯಾವುದೇ ಮತಗಟ್ಟೆಯಲ್ಲಿ ಕಾಯುತ್ತಿದ್ದ ಮತದಾರರ ಸಂಖ್ಯೆ 491ಕ್ಕಿಂತ ತುಂಬಾ ಕಡಿಮೆ ಇರಬೇಕು – ಉದಾ. 100 ರಿಂದ 135ರ ನಡುವೆ.
ಆಗ, ಮುಖ್ಯ ಚುನಾವಣಾಧಿಕಾರಿಯವರ (CEO) ಪ್ರಕಾರ 2 ಗಂಟೆಯ ಕಾಲಾವಕಾಶಕ್ಕೂ (11:45 pm ರಿಂದ 2 am ವರೆಗೆ ) 17,19,482 ಮತಗಳ ಚಲಾವಣೆಗೂ ಹೊಂದಿಕೆ ಆಗುವುದಿಲ್ಲ!
2 am ಸಮಯವನ್ನು ತೆಗೆದುಕೊಂಡರೆ, 491 ಮತದಾರರಿದ್ದ ಮತಗಟ್ಟೆಯಲ್ಲಿ ಪ್ರತಿ ನಿಮಿಷಕ್ಕೆ 3.6 ಮತದಾರರು ಮತ ಹಾಕಬೇಕು – ಅಂದರೆ ಪ್ರತಿ 20 ಸೆಕೆಂಡ್‌ಗಳಿಗೆ ಒಬ್ಬ ಮತದಾರನ ಲೆಕ್ಕ. ಆಂಧ್ರಪ್ರದೇಶದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಎರಡಕ್ಕೂ ಏಕಕಾಲದಲ್ಲಿ ಮತದಾನ ನಡೆಯಿತು ಎಂಬುದನ್ನು ಮರೆಯುವಂತಿಲ್ಲ. ಪ್ರತಿ ಮತದಾರನ ಹೆಸರು ಪರಿಶೀಲನೆ, ಸಹಿ/ಅಂಗುಷ್ಠ ಗುರುತು, ಬೆರಳುಗುರುತು, ಎರಡು ಮತಗಳು ಹಾಕಿ ಎರಡು ಕಂಪಾರ್ಟ್‌ಮೆಂಟ್‌ಗಳ ನಡುವೆ ಚಲನೆ – ಇವೆಲ್ಲಾ ಕೇವಲ 20 ಸೆಕೆಂಡ್‌ಗಳಲ್ಲಿ ಹೇಗೆ ಮುಗಿಯುತ್ತದೆ?
VVPAT ಸ್ಲಿಪ್‌ಗೆ ಪ್ರತಿ ಕಂಪಾರ್ಟ್‌ಮೆಂಟ್‌ನಲ್ಲಿ 7 ಸೆಕೆಂಡ್‌ಗಳು ಬೇಕು – ಲೋಕಸಭೆ ಮತ್ತು ವಿಧಾನಸಭೆ ಎರಡನ್ನೂ ಸೇರಿಸಿದರೆ ಒಟ್ಟು 14 ಸೆಕೆಂಡ್‌ಗಳು. ಉಳಿದ 6 ಸೆಕೆಂಡ್‌ಗಳಲ್ಲಿ ಉಳಿದ ಪ್ರಕ್ರಿಯೆಗಳು ಮುಗಿಯಲು ಸಾಧ್ಯವಿಲ್ಲ. ಇದು ಭೌತಿಕವಾಗಿ ಅಸಾಧ್ಯ!
ಈ ಸೋಜಿಗ ಹೇಗೆ ಸಾಧ್ಯವಾಯಿತು ಎಂಬುದನ್ನು ಕೇವಲ ಭಾರತೀಯ ಚುನಾವಣಾ ಆಯೋಗ (ECI) ಮಾತ್ರ ವಿವರಿಸಬಹುದು.
ECI Presiding Officers Handbook 2023 (ವಿಭಾಗ 7.1.1) ಪ್ರಕಾರ, ಮುಗಿಯುವ ಸಮಯಕ್ಕೆ, ಅದಾಗಲೇ ಸರದಿಯಲ್ಲಿ ಸೇರಿದ ಎಲ್ಲ ಮತದಾರರು ಮತ ಹಾಕುವ ಹಕ್ಕುಳ್ಳವರು.
ಆದರೆ, ಮತದಾನ ಕೇಂದ್ರದ ಗೇಟ್ ಮುಚ್ಚಬೇಕು, ಸರದಿಯಲ್ಲಿರುವವರಿಗೆ ಟೋಕನ್‌ಗಳನ್ನು ನೀಡಬೇಕು (ಕೊನೆಯವನಿಗೆ 1, ಮೊದಲಿಗೆ ಕೊನೆಯ ಸಂಖ್ಯೆ), ಈ ಎಲ್ಲ ಟೋಕನ್‌ಗಳನ್ನು ಸಂಗ್ರಹಿಸಿ ಭದ್ರಪಡಿಸಬೇಕು.
ವಿಡಿಯೋಗ್ರಫಿ ಮಾರ್ಗಸೂಚಿಗಳ ಪ್ರಕಾರ, ಮುಕ್ತಾಯದ ಸಮಯದಲ್ಲಿ ಸರದಿಯಲ್ಲಿರುವ ಮತದಾರರನ್ನು ವೀಡಿಯೊ ಮಾಡಬೇಕು – ಮುಖಗಳು ಸ್ಪಷ್ಟವಾಗಿ ಕಾಣುವಂತೆ. ಮತದಾನ ಕೇಂದ್ರದ ಅಧಿಕಾರಿಯ ಡೈರಿಯಲ್ಲಿ ಇದನ್ನು ದಾಖಲಿಸಬೇಕು.
ಭಾರತೀಯ ಚುನಾವಣಾ ಆಯೋಗ (ECI) ಈ ದಾಖಲೆಗಳನ್ನು ತೆರೆದು ಪರಿಶೀಲನೆ ನಡೆಸಲು ಸಿದ್ಧವಿದೆಯೇ? ಏನೂ ಮರೆಮಾಚಿಲ್ಲದಿದ್ದರೆ ಸಿದ್ಧವಿರಲೇಬೇಕು.
ಮತದಾನದ ಹೆಚ್ಚಳದಲ್ಲಿ ಸೋಜಿಗ ಎದ್ದು ಕಾಣುತ್ತದೆ: ಸಂಜೆ 5 ರಿಂದ 8 ಗಂಟೆಗೆ (3 ಗಂಟೆಗಳಲ್ಲಿ) ಕೇವಲ 0.08% ಹೆಚ್ಚಳ (33,064 ಮತಗಳು).
ಆದರೆ 8 pm ರಿಂದ 11:45 pmಗೆ (3 ಗಂಟೆ 45 ನಿಮಿಷಗಳಲ್ಲಿ) 8.38% ಹೆಚ್ಚಳ (34,63,767 ಮತಗಳು) – ಪ್ರತಿ ಮತಗಟ್ಟೆಗೆ ಸರಾಸರಿ 74-75 ಮತಗಳು (ವಿಧಾನಸಭೆ ಮತ್ತು ಲೋಕಸಭೆಗೆ ಪ್ರತಿ ಮತದಾರ ಚಲಾಯಿಸಿದ ಎರಡು ಮತಗಳನ್ನು ಗಣನೆಗೆ ತೆಗೆದುಕೊಂಡರೆ).
ಮೇ 17ರಂದು, ಮತದಾನ ಮುಗಿದ ನಾಲ್ಕು ದಿನಗಳ ನಂತರ ಮತ್ತೊಂದು ಹೆಚ್ಚಳವನ್ನು ಘೋಷಿಸಲಾಗುತ್ತದೆ. ಅದರ ಪ್ರಮಾಣ ಶೇ.4.16. (17,19,482 ಮತಗಳು).

ಒಟ್ಟು ಹೆಚ್ಚಳ– 51,83,249 ಮತಗಳು –ಶೇಕಡಾವಾರು ಲೆಕ್ಕದಲ್ಲಿ 12.54ರಷ್ಟು ಹೆಚ್ಚಳ! ಈ ಹೆಚ್ಚಳವನ್ನು 175 ಕ್ಷೇತ್ರಗಳಲ್ಲಿ ಸಮನಾಗಿ ಹಂಚಿದರೆ ಪ್ರತಿ ಕ್ಷೇತ್ರಕ್ಕೆ 29,618 ಮತಗಳು.
ಆದರೆ ಸಮ ಹಂಚಿಕೆ ಅಸಂಭವ. ನಿರ್ದಿಷ್ಟ ಮತಗಟ್ಟೆಗಳು/ಕ್ಷೇತ್ರಗಳಲ್ಲಿ ಹೆಚ್ಚಳವಿದ್ದರೆ, ಕೆಲವು ಅಭ್ಯರ್ಥಿಗಳಿಗೆ ಭಾರೀ ಪ್ರಯೋಜನವಾದರೆ, ಇನ್ನು ಕೆಲವರಿಗೆ ದೊಡ್ಡ ಸೋಲು ನಿಶ್ಚಿತ. ಈ ಹೆಚ್ಚಳವೇ ಕೆಲವರ ಗೆಲುವು ಮತ್ತು ಇನ್ನು ಕೆಲವರ ಸೋಲಿಗೆ ಕಾರಣ.
ಈ ಸೋಜಿಗವು ECI/CEO ದತ್ತಾಂಶಗಳಲ್ಲಿ ಸ್ಪಷ್ಟವಾಗಿ ಕಾಣುತ್ತದೆ.
ಕಟ್ಟಕಡೆಯಲ್ಲಿ ಮೂಡುವ ದೊಡ್ಡ ಪ್ರಶ್ನೆಗಳು:
(1) ಆಂಧ್ರಪ್ರದೇಶದ ಗೆದ್ದ ಅಭ್ಯರ್ಥಿಗಳು ಈ ‘ಸೋಜಿಗ’ದ ಲಾಭವನ್ನು ತಾವು ಏನೂ ಮಾಡದೆ ಕೇವಲ ನಿಷ್ಕ್ರಿಯವಾಗಿದ್ದು ಪಡೆದವರೇ?
(2) ಸೋತವರು ಈ ಅತಿಶಯ ಮತದಾನ ಹೆಚ್ಚಳದ ನಿರಪರಾಧಿ ಬಲಿಪಶುಗಳೇ?
ಆಂಧ್ರಪ್ರದೇಶದ ಚುನಾವಣಾ ಪ್ರಕ್ರಿಯೆಯ ವಸ್ತುನಿಷ್ಠತೆಯಲ್ಲಿ ಭಾರೀ ರಾಜಿ ಮಾಡಿಕೊಳ್ಳಲಾಗಿದೆ ಎಂಬುದು ಕಾಣುತ್ತದೆ. ಆದರೆ ಈ ಸೋಜಿಗದ ಹೆಚ್ಚಳದಲ್ಲಿ ಯಾರು ಸಹಭಾಗಿಗಳು ಎಂಬುದು ಸ್ಪಷ್ಟವಿಲ್ಲ.
ಆಂಧ್ರಪ್ರದೇಶದ ಈ ಜನಾದೇಶವು ಅತ್ಯಂತ ಸಂದೇಹಾಸ್ಪದ. ಮೇಲೆ ಕಾಣಿಸಲಾಗಿರುವ ಅಗಾಧ ವ್ಯತ್ಯಾಸಗಳು ಏನನ್ನು ಸಾರುತ್ತಿವೆ? ಈ ಮತದಾನವನ್ನು ಅಪಹರಿಸಲಾಗಿದೆ ಅಥವಾ ಕದಿಯಲಾಗಿದೆ ಎಂಬ ಸಂದೇಹಕ್ಕೆ ಆಸ್ಪದ ನೀಡುತ್ತವೆ – ಥೇಟ್ 2024 ಲೋಕಸಭೆ ಚುನಾವಣೆಯಂತೆ!
ಇಲ್ಲಿ ಎತ್ತಿರುವ ವಿಷಯಗಳಿಗೆ ಸರಿಯಾದ ಮತ್ತು ವಿಶ್ವಾಸಾರ್ಹ ಉತ್ತರಗಳು ಬಂದರೆ ಮಾತ್ರ ಈ ಸಂದೇಹಗಳು ತೊಲಗಬಹುದು. ಅಲ್ಲಿಯವರೆಗೆ ಸಂದೇಹಗಳು ಉಳಿದೇ ಉಳಿಯುತ್ತವೆ.
ಕೃಪೆ- The Wire; ಲಿಂಕ್- https://m.thewire.in/article/government/is-there-mischief-behind-the-miracle-of-the-2024-andhra-pradesh-polls
ಈ ವಿಶೇಷ ವಿಶ್ಲೇಷಣೆಯನ್ನು ಕನ್ನಡದಲ್ಲಿ ಪ್ರಕಟಿಸಲು ಅನುಮತಿಸಿದ ಮೂಲ ಲೇಖಕರಾದ ಪರಕಾಲ ಪ್ರಭಾಕರ್ ಅವರಿಗೂ Thewire.in ಸಂಪಾದಕರಿಗೂ ಈದಿನ.ಕಾಮ್ ಕೃತಜ್ಞವಾಗಿದೆ.





