ಐಷಾರಾಮಿ ಫ್ಯಾಷನ್ ಬ್ರ್ಯಾಂಡ್ ಪ್ರಾಡಾ ಭಾರತದಲ್ಲಿ ತಯಾರಿಸಲಾದ ಮತ್ತು ಸಾಂಪ್ರದಾಯಿಕ ಸ್ಥಳೀಯ ಕೊಲ್ಹಾಪುರಿ ಚಪ್ಪಲಿಗಳನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. ಅಥಣಿಯ ಕೊಲ್ಹಾಪುರಿ ಚಪ್ಪಲಿಗಳನ್ನು ‘ಪ್ರಾಡಾ’ ಬ್ರ್ಯಾಂಡ್ ಮಾರುಕಟ್ಟೆಗೆ ತರುತ್ತಿದ್ದು, ಪ್ರತಿ ಜೋಡಿಯ ಬೆಲೆ ಸುಮಾರು ₹84,000 ($930) ಆಗಿದೆ! ಈ ವರ್ಷದ ಆರಂಭದಲ್ಲಿ ಕೊಲ್ಹಾಪುರಿ ಚಪ್ಪಲಿ ವಿಚಾರದಲ್ಲಿ ಸೃಷ್ಟಿಯಾಗಿದ್ದ ವಿವಾದ ಸದ್ಯ ಒಪ್ಪಂದದ ಮೂಲಕ ಅಂತ್ಯ ಕಾಣುತ್ತಿದೆ.
ಪ್ರಾಡಾ ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಎರಡು ರಾಜ್ಯ ಬೆಂಬಲಿತ ಸಂಸ್ಥೆಗಳೊಂದಿಗೆ ಪಾಲುದಾರಿಕೆ ಮೂಲಕ 2,000 ಜೋಡಿಗಳನ್ನು ಉತ್ಪಾದಿಸಲಿದೆ. ಕೊಲ್ಹಾಪುರಿ ಚಪ್ಪಲಿಗಳಿಗೆ ಪ್ರಾಡಾದ ವಿನ್ಯಾಸ ನೀಡಲಾಗುತ್ತಿದೆ. 2026ರ ಫೆಬ್ರವರಿಯಲ್ಲಿ ಈ ಚಪ್ಪಲಿಗಳನ್ನು ಬಿಡುಗಡೆ ಮಾಡಲು ಪ್ರಾಡಾ ಮುಂದಾಗಿದೆ. ಪ್ರಪಂಚದಾದ್ಯಂತದ 40 ಪ್ರಾಡಾ ಅಂಗಡಿಗಳಲ್ಲಿ ಮತ್ತು ಬ್ರ್ಯಾಂಡ್‌ನ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಕೈಬಿಡಲಾಗುತ್ತದೆ.
ಇದನ್ನು ಓದಿದ್ದೀರಾ? ಕೊಲ್ಹಾಪುರಿ ಚಪ್ಪಲಿ ವಿನ್ಯಾಸ ನಕಲು: ಇಟಲಿಯ ಕಂಪನಿ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾದ ಲಿಡ್ಕರ್
ಈ ಬಗ್ಗೆ ಮುಖ್ಯ ಹಿರಿಯ ಅಧಿಕಾರಿ ಲೊರೆಂಜೊ ಬರ್ಟೆಲ್ಲಿ ರಾಯಿಟರ್ಸ್‌ಗೆ ಪ್ರತಿಕ್ರಿಯಿಸಿದ್ದು ಚಪ್ಪಲಿ ಬೆಲೆ, ವಿನ್ಯಾಸ, ಉತ್ಪಾದನೆ ಮೊದಲಾದ ಮಾಹಿತಿಯನ್ನು ನೀಡಿದ್ದಾರೆ. ಪ್ರಸ್ತುತ ಚರ್ಮದ ಚಪ್ಪಲಿಗಳ ತಯಾರಿಕೆಗೆ ಜನಜನಿತವಾದ ಸಂತ ರೋಹಿದಾಸ್ ಲೆದರ್ ಇಂಡಸ್ಟ್ರೀಸ್ ಆಂಡ್ ಚಾರ್ಮಕರ್ ಡೆವಲಪ್‌ಮೆಂಟ್ ಕಾರ್ಪೊರೇಷನ್ (LIDCOM) ಮತ್ತು ಡಾ. ಬಾಬು ಜಗಜೀವನ್ ರಾಮ್ ಲೆದರ್ ಇಂಡಸ್ಟ್ರೀಸ್ ಡೆವಲಪ್‌ಮೆಂಟ್ ಕಾರ್ಪೊರೇಷನ್ (LIDKAR) ಜತೆ ಒಪ್ಪಂದ ಮಾಡಲಾಗಿದೆ. ಮೂರು ವರ್ಷಗಳ ಒಪ್ಪಂದ ಮಾಡಲಾಗಿದ್ದು, ಈ ಅವಧಿಯಲ್ಲಿ ಕೌಶಲ್ಯ-ಉತ್ಪಾದನೆ ಸಂಬಂಧಿತ ಕಾರ್ಯಕ್ರಮಗಳು ಮತ್ತು ಇಟಲಿಯ ಪ್ರಾಡಾ ಅಕಾಡೆಮಿಯಲ್ಲಿ ಅಲ್ಪಾವಧಿಯ ತರಬೇತಿ ಅವಕಾಶಗಳನ್ನು ಕಲ್ಪಿಸಲಾಗುತ್ತದೆ.
ಕೊಲ್ಹಾಪುರಿ ಚಪ್ಪಲಿ ವಿವಾದ
ಈ ವರ್ಷದ ಆರಂಭದಲ್ಲಿ ಪ್ರಾಡಾ ಕೊಲ್ಹಾಪುರಿ ಚಪ್ಪಲಿಗಳು ಮಿಲನ್ ಫ್ಯಾಶನ್ ವೀಕ್‌ನಲ್ಲಿ (ವಸಂತ/ಬೇಸಿಗೆಗಾಲದ ಚಪ್ಪಲಿಗಳ 2026 ಸಂಗ್ರಹ) ಪ್ರದರ್ಶಿಸಿದ್ದು ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಭಾರತದ GI-ಟ್ಯಾಗ್ ಮಾಡಲಾದ ಈ ಚಪ್ಪಲಿಗಳ ಮೂಲ ಕುಶಲಕರ್ಮಿಗಳು ಮತ್ತು ಭಾರತೀಯ ಪರಂಪರೆಗೆ ಯಾವುದೇ ರೀತಿಯಲ್ಲಿ ಮನ್ನಣೆ ನೀಡದಿದ್ದದ್ದು ಟೀಕೆಗೆ ಗುರಿಯಾಗಿತ್ತು. ಕುಶಲಕರ್ಮಿಗಳು, ರಾಜಕೀಯ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದರು.
ಶೀಘ್ರದಲ್ಲೇ ಚಿತ್ರಗಳು ವೈರಲ್ ಆದವು. ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು, “ಮೂಲ ಕುಶಲಕರ್ಮಿಗಳಿಗೆ ಶ್ರೇಯಸ್ಸು ನೀಡುವುದನ್ನು ಕಲಿಯಿರಿ. ಇದು ಕೊಲ್ಹಾಪುರಿ ಚಪ್ಪಲಿ. ಇದು ಪ್ರಾಡಾ ವಿನ್ಯಾಸವಲ್ಲ. ಕೊಲ್ಹಾಪುರಿ ವಿನ್ಯಾಸ” ಎಂದು ನೆಟ್ಟಿಗರು ವಾಗ್ದಾಳಿ ನಡೆಸಿದ್ದರು. ಬಾಲಿವುಡ್ ನಟಿ ಕರೀನಾ ಕಪೂರ್ ಸೇರಿದಂತೆ ಹಲವರು ಟೀಕಿಸಿದರು. ಇದಾದ ನಂತರ ಪ್ರಾಡಾ ಈ ವಿನ್ಯಾಸ ಐತಿಹಾಸಿಕ ಭಾರತೀಯ ಶೈಲಿಯದ್ದು ಎಂದು ಒಪ್ಪಿಕೊಂಡಿತು. ಪ್ರಾಡಾ ಭಾರತಕ್ಕೆ ಭೇಟಿ ನೀಡಿ, ಕೊಲ್ಹಾಪುರಿ ಚಪ್ಪಲಿಗಳಿಂದ ಸ್ಫೂರ್ತಿ ಪಡೆದಿರುವುದನ್ನು ಹೇಳಿ, ಸಹಯೋಗದ ಬಗ್ಗೆ ಮಾತುಕತೆ ನಡೆಸಿತು. ಅಂತಿಮವಾಗಿ ಇದೀಗ ಒಪ್ಪಂದ ನಡೆದಿದ್ದು, ಪ್ರತಿ ಜೋಡಿಯ ಬೆಲೆ ಸುಮಾರು ₹84,000 ಆಗಿದೆ!
ಇದನ್ನು ಓದಿದ್ದೀರಾ? ಬೆಳಗಾವಿ | ಸಂಕಷ್ಟದಲ್ಲಿ ಚರ್ಮ ಕುಶಲಕರ್ಮಿಗಳು; ಅಧಿವೇಶನದಲ್ಲಿ ಚರ್ಚೆಗೆ ಒತ್ತಾಯ
ಕೊಲ್ಹಾಪುರಿ ಚಪ್ಪಲಿಗಳನ್ನು ಎಲ್ಲಿ ತಯಾರಿಸಲಾಗುತ್ತದೆ?
ಜಿಐ ಟ್ಯಾಗ್ ಮಾಡಲಾದ ಕೊಲ್ಹಾಪುರಿ ಚಪ್ಪಲಿಗಳನ್ನು ಮಹಾರಾಷ್ಟ್ರ ಮತ್ತು ಕರ್ನಾಟಕದ ಒಟ್ಟು ಎಂಟು ಜಿಲ್ಲೆಗಳಲ್ಲಿ ತಯಾರಿಸಲಾಗುತ್ತದೆ. ರಾಜ್ಯದ ಬೆಳಗಾವಿ ಜಿಲ್ಲೆಯಲ್ಲಿರುವ ಅಥಣಿ ಕೊಲ್ಹಾಪುರಿ ಚಪ್ಪಲಿಗಳ ಪ್ರಮುಖ ಉತ್ಪಾದನಾ ಕೇಂದ್ರಗಳಲ್ಲಿ ಒಂದಾಗಿದೆ. ಬಾಳಿಕೆ ಮತ್ತು ನೈಸರ್ಗಿಕ ಬಣ್ಣಕ್ಕಾಗಿ ಹೆಸರುವಾಸಿಯಾಗಿರುವ ಈ ಚಪ್ಪಲಿಗಳನ್ನು ಸಾಂಪ್ರಾದಾಯಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದ ಚಮ್ಮಾರ ಸಮುದಾಯದವರು ತಯಾರಿಸುತ್ತಾರೆ.
ಕರ್ನಾಟಕದ ಅಥಣಿ ಸೇರಿದಂತೆ ಬೆಳಗಾವಿ, ಬಾಗಲಕೋಟೆ, ಧಾರವಾಡ, ಮತ್ತು ಬಿಜಾಪುರ ಜಿಲ್ಲೆಗಳ ವ್ಯಾಪ್ತಿಯಲ್ಲಿ, ಮುಖ್ಯವಾಗಿ ಸಾಮಗಾರ (Samagar) ಮತ್ತು ಧೋರ್ ಉಪ-ಸಮುದಾಯಗಳಿಗೆ ಸೇರಿದ ಜನರು ಈ ಚಪ್ಪಲಿಗಳನ್ನು ತಯಾರಿಸುತ್ತಾರೆ. ಮಹಾರಾಷ್ಟ್ರದ ಕೊಲ್ಹಾಪುರಿ ಸಾಂಗ್ಲಿ, ಸತಾರಾ, ಮತ್ತು ಸೊಲ್ಲಾಪುರ ಜಿಲ್ಲೆಗಳಲ್ಲಿ, ಚರ್ಮಕಾರ ಸಮುದಾಯದವರು ಈ ಚಪ್ಪಲಿಯನ್ನು ತಯಾರಿಸುತ್ತಾರೆ. ಆದರೆ ಈ ಸಮುದಾಯಕ್ಕೆ ಮಾನ್ಯತೆ ನೀಡದೆಯೇ ಪ್ರಾಡಾ ತನ್ನದೇ ಆದ ವಿನ್ಯಾಸ ಎಂದು ಬಿಂಬಿಸಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು.





