ಹೆರಿಗೆಗಾಗಿ ತನ್ನ ಗ್ರಾಮದಿಂದ ಆಸ್ಪತ್ರೆಗೆ 6 ಕಿ.ಮೀ ನಡೆದು ಬಂದ ಗರ್ಭಿಣಿಯೊಬ್ಬರು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಬಿಜೆಪಿ ನೇತೃತ್ವದ ಮಹಾಯುತಿ ಆಡಳಿತವಿರುವ ಮಹಾರಾಷ್ಟ್ರದಲ್ಲಿ ನಡೆದಿದೆ. ಆ್ಯಂಬುಲೆನ್ಸ್ ಮತ್ತು ವೈದ್ಯಕೀಯ ಸೌಲಭ್ಯಗಳಿಲ್ಲದೆ, ಆಸ್ಪತ್ರೆಗೆ ತೆರಳವು ಬೇರಾವುದೇ ವಾಹನ ವ್ಯವಸ್ಥೆಯೂ ದೊರೆಯದೆ ಆಕೆ ನಡೆದುಬಂದು, ಬಳಿಕ ಆಸ್ಪತ್ರೆಗೆ ತೆರಳಿದ್ದರು ಎಂದು ವರದಿಯಾಗಿದೆ.
ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯ ಎಟಪಲ್ಲಿ ತಾಲೂಕಿನ ಆಲ್ದಂಡಿ ಟೋಲಾದ ನಿವಾಸಿ ಆಶಾ ಸಂತೋಷ್ ಕಿರಂಗ (24) ಮೃತ ಗರ್ಭಿಣಿ. “ಆಲ್ದಂಡಿ ಟೋಲಾ ಗ್ರಾಮಕ್ಕೆ ಮುಖ್ಯ ರಸ್ತೆಯಿಂದ ಸಂಪರ್ಕ ಕಡಿತಗೊಂಡಿದೆ. ಅಲ್ಲಿ ಯಾವುದೇ ಹೆರಿಗೆ ಸೌಲಭ್ಯಗಳು ಲಭ್ಯವಿಲ್ಲ. ಸಮಯೋಚಿತ ನೆರವಿಗಾಗಿ ಆಶಿಸುತ್ತಾ, ಆಕೆ ತನ್ನ ಪತಿಯೊಂದಿಗೆ ಕಾಡಿನ ಹಾದಿಯಲ್ಲಿ 6 ಕಿ.ಮೀ ನಡೆದು ಪೆಥಾದಲ್ಲಿರುವ ತನ್ನ ಸಹೋದರಿಯ ಮನೆಗೆ ಬಂದಿದ್ದಾರೆ. ಅಲ್ಲಿಂದ ಆಕೆಯನ್ನು ಹೆಡ್ರಿಯಲ್ಲಿರುವ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆಕೆಗೆ ವೈದ್ಯರು ಸಿಸೇರಿಯನ್ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಆದರೆ, ಆ ವೇಳೆಗಾಗಲೇ ಮಗು ಸಾವನ್ನಪ್ಪಿತ್ತು. ರಕ್ತದೊತ್ತಡ ಹೆಚ್ಚಾದ ಕಾರಣ, ಮಹಿಳೆ ಕೂಡ ಸಾವನ್ನಪ್ಪಿದರು” ಎಂದು ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ.
“ಹಠಾತ್ ಹೆರಿಗೆ ನೋವು ಮತ್ತು ಸಮಸ್ಯೆಗಳು ಎದುರಾದ ಕಾರಣ ಸಾವು ಸಂಭವಿಸಿರಬಹುದು. ವೈದ್ಯರು ಆಕೆಯನ್ನು ಉಳಿಸಲು ಪ್ರಯತ್ನಿಸಿದರು, ಆದರೆ ಸಾಧ್ಯವಾಗಲಿಲ್ಲ. ತಾಲೂಕು ಆರೋಗ್ಯ ಅಧಿಕಾರಿಯಿಂದ ವಿವರವಾದ ವರದಿಯನ್ನು ಕೇಳಲಾಗಿದೆ. ಪ್ರಕರಣವನ್ನು ತನಿಖೆ ನಡೆಸಲಾಗುತ್ತದೆ” ಎಂದು ಗಡ್ಚಿರೋಲಿ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಪ್ರತಾಪ್ ಶಿಂಧೆ ಹೇಳಿದ್ದಾರೆ.




