ಮುಂಬೈನ ದೇವಾಲಯವೊಂದರಲ್ಲಿ ಕಾಳಿ ವಿಗ್ರಹವು ಯೇಸುಕ್ರಿಸ್ತನ ತಾಯಿ ಮೇರಿ ವೇಷ-ಭೂಷಣದಲ್ಲಿ ಕಾಳಿ ವಿಗ್ರಹ ಪತ್ತೆಯಾಗಿದ್ದು, ವಿಡಿಯೋ ವೈರಲ್ ಆಗುತ್ತಿದ್ದಂತೆ ಅರ್ಚಕನ ಬಂಧನ ಮಾಡಲಾಗಿದೆ. “ಕನಸಿನಲ್ಲಿ ಬಂದು ಕಾಳಿ ಮಾತೆ ತಿಳಿಸಿದಂತೆ ನಾನು ಮಾಡಿದೆ” ಎಂದು ಅರ್ಚಕ ರಮೇಶ್ ಹೇಳಿಕೊಂಡಿದ್ದಾನೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಚೆಂಬೂರ್ ಉಪನಗರದಲ್ಲಿರುವ ದೇವಾಲಯದಲ್ಲಿ ಕಾಳಿ ಮೂರ್ತಿ ಮೇರಿಯ ವೇಷದಲ್ಲಿರುವ ವಿಡಿಯೋ ವೈರಲ್ ಆಗಿದೆ. ಭಾನುವಾರ ದೇವಾಲಯಕ್ಕೆ ಭೇಟಿ ನೀಡಿದ್ದ ಭಕ್ತರು ಈ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಾದ ಬಳಿಕ ಸ್ಥಳೀಯ ಪೊಲೀಸರನ್ನೂ ಸಂಪರ್ಕಿಸಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಇದನ್ನು ಓದಿದ್ದೀರಾ? ಮಹಿಷ ಚಿತ್ರಕ್ಕೆ ಸಿಎಂ ಫೋಟೊ ಹಾಕಿ ಧಾರ್ಮಿಕ ಭಾವನೆಗೆ ಧಕ್ಕೆ; ಎಫ್‌ಐಆರ್
ಇನ್ನು ಕಾಳಿ ವಿಗ್ರಹಕ್ಕೆ ಮೇರಿ ರೂಪ ನೀಡಿರುವುದೇಕೆ ಎಂದು ಭಕ್ತರು ಪ್ರಶ್ನಿಸಿದಾಗ ಅದಕ್ಕೆ ಪ್ರತಿಕ್ರಿಯಿಸಿರುವ ಅರ್ಚಕ ರಮೇಶ್, “ಕನಸಿನಲ್ಲಿ ಬಂದ ಕಾಳಿ ಮಾತೆ ತನ್ನನ್ನು ತಾಯಿ ಮೇರಿ ರೂಪದಲ್ಲಿ ಅಲಂಕರಿಸುವಂತೆ ಸೂಚನೆ ನೀಡಿದ್ದಾರೆ” ಹೇಳಿಕೊಂಡಿದ್ದಾರೆ.
ಸದ್ಯ ಒಂದು ಒಂದು ಸಮುದಾಯದ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ ಆರೋಪದಲ್ಲಿ ಅರ್ಚಕ ರಮೇಶ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅದಾದ ಬಳಿಕ ಅರ್ಚಕರನ್ನು ಬಂಧಿಸಿ ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು ನ್ಯಾಯಾಲಯ ಎರಡು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಈ ಘಟನೆಯ ಹಿಂದೆ ಯಾವ ಉದ್ದೇಶವಿದೆ ಮತ್ತು ಇದರಲ್ಲಿ ಯಾರದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.





