ಕುಟುಂಬಸ್ಥರಿಗೆ ಫೋನ್ ಕರೆ ಮಾಡಲು ನೀಡಲಾಗುತ್ತಿದ್ದ ಅವಕಾಶವನ್ನು ಹರಿಯಾಣದ ಫರಿದಾಬಾದ್ ಜೈಲಿನಲ್ಲಿ ಕಡಿತಗೊಳಿಸಲಾಗಿದೆ. ಜೈಲು ಅಧಿಕಾರಿಗಳ ಈ ಕ್ರಮವನ್ನು ವಿರೊಧಿಸಿ ನೀಮ್ಕಾ ಕೇಂದ್ರ ಕಾರಾಗೃಹದಲ್ಲಿನ 40ಕ್ಕೂ ಹೆಚ್ಚು ಕೈದಿಗಳು ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಪ್ರತಿಭಟನಾ ನಿರತರಿಗೆ ಜೈಲು ಅಧಿಕಾರಿಗಳು ಬೆದರಿಕೆ ಹಾಕಿದ್ದಾರೆ ಎಂದು ವರದಿಯಾಗಿದೆ.
ಜೈಲು ಅಧಿಕಾರಿಗಳ ಕ್ರಮದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಕೈದಿಗಳು ಬರೆದಿರುವ ಟಿಪ್ಪಣಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಹಿಂದೆ, ವಾರಕ್ಕೆ ಮೂರು ದಿನ ಮನೆಗೆ ಫೋನ್ ಕರೆ ಮಾಡಲು ಅವಕಾಶವಿತ್ತು. ಅದನ್ನು ಇತ್ತೀಚೆಗೆ ಎರಡು ದಿನಗಳಿಗೆ ಇಳಿಸಲಾಗಿತ್ತು. ಇದೀಗ, ವಾರಕ್ಕೆ ಒಂದು ಮಾತ್ರವೇ ಕರೆ ಮಾಡಲು ಅವಕಾಶ ನೀಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಅಲ್ಲದೆ, ಬದಲಾವಣೆಗೆ ಕಾರಣ ಕೇಳಿದ ಕೈದಿಗಳೊಂದಿಗೆ ಅಧಿಕಾರಿಗಳು ದುರ್ವತನೆ ತೋರಿದ್ದಾರೆಂದು ಕೈದಿಗಳು ಆರೋಪಿಸಿದ್ದಾರೆ.
ಜೈಲು ಆಡಳಿತದ ವಿರುದ್ಧ ಧ್ವನಿ ಎತ್ತಿದರೆ ಹೊರಗೆ ಬಿಡುವುದಿಲ್ಲ ಹಾಗೂ ಬ್ಯಾರಕ್‌ಗಳಿಗೆ ಮಾತ್ರ ಸೀಮಿತಗೊಳಿಸಲಾಗುವುದು ಎಂದು ಬೆದಿರಕೆ ಹಾಕಲಾಗಿದೆ ಎಂದು ಕೈದಿಗಳು ಆರೋಪಿಸಿದ್ದಾರೆ.
“ನಮ್ಮೊಂದಿಗೆ ಅಸಭ್ಯವಾಗಿ ವರ್ತಿಸಿ ಜೀವ ಬೆದರಿಕೆ ಹಾಕಲಾಗಿದೆ. ನಮಗೆ ಏನಾದರೂ ಅನಾಹುತವಾದರೆ ಜೈಲು ಆಡಳಿತವೇ ಹೊಣೆ. ಸಿಸಿಟಿವಿ ಕ್ಯಾಮೆರಾ ಆಫ್ ಮಾಡಿದ ನಂತರ ಹಲ್ಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ” ಎಂದು ದೂರಿದ್ದಾರೆ.




