ಹಿಂದೂ-ಮುಸ್ಲಿಂ ಬಗ್ಗೆ ವಿವಾದಾತ್ಮಕ ಮಾತನಾಡಿಲ್ಲ ಎಂದು ಹೇಳುತ್ತಿರುವ ಪ್ರಧಾನಿ ನರೇಂದ್ರ ಮೋದಿ 10 ವರ್ಷಗಳಿಂದ ಎರಡು ಸಮುದಾಯಗಳ ನಡುವೆ ದ್ವೇಷ ಹರಡುವ ಕೆಲಸ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಪ್ರಿಯಾಂಕಾ ಗಾಂಧಿ ವಾಗ್ದಾಳಿ ನಡೆಸಿದರು.
ಉತ್ತರ ಪ್ರದೇಶದ ರಾಯ್‌ಬರೇಲಿಯ ರ್ಯಾಲಿಯಲ್ಲಿ ಅವರು ಮಾತನಾಡಿದರು. ಮೋದಿ ಅವರು ತಾವು ಮಾಡಿದ ಭಾಷಣಗಳನ್ನು ಈಗ ನಿರಾಕರಿಸುತ್ತಿದ್ದಾರೆ. ಇಡೀ ವಿಶ್ವದ ಮುಂದೆ ಭಾಷಣ ಮಾಡಿದ್ದಾರೆ. ಈಗ ಹೇಗೆ ಇದ್ದಕ್ಕಿದ್ದಂತೆ ತಾನು ಮಾತನಾಡಿಲ್ಲ ಎಂದು ಮಾತು ಬದಲಿಸುತ್ತಿದ್ದಾರೆ ಎಂದು ಪ್ರಶ್ನಿಸಿದರು.
“ಕಳೆದ 10 ವರ್ಷಗಳಿಂದ ಬಿಜೆಪಿಯವರು ರಾಯ್‌ಬರೇಲಿ ಕ್ಷೇತ್ರಕ್ಕೆ ಭೇಟಿ ನೀಡಿಲ್ಲ. ಇಲ್ಲಿನ ದೂರದ ಪ್ರದೇಶಗಳಿಗೂ ನಾನು ಭೇಟಿ ನೀಡುತ್ತಿದ್ದೇನೆ. ಮನೆಯಲ್ಲಿರುವ ಹಿರಿಯ ನಾಯಕರು ನಿಮ್ಮ ಅಜ್ಜಿ ಕೂಡ ಭೇಟಿ ಮಾಡಲು ಬರುತ್ತಿದ್ದರು ಎಂದು ಹೇಳುತ್ತಿದ್ದಾರೆ” ಎಂದು ಪ್ರಿಯಾಂಕಾ ಗಾಂಧಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದೇಶ ತನ್ನ ಹಳೆಯ ಲಯಕ್ಕೆ, ಪ್ರಜಾಪ್ರಭುತ್ವಕ್ಕೆ ಹಿಂದಿರುಗುತ್ತಿದೆಯೇ?
“ಇತ್ತೀಚಿನ ವರ್ಷಗಳಲ್ಲಿ ಕ್ಷೇತ್ರಕ್ಕೆ ಯಾವುದೇ ಸೌಲಭ್ಯ ನೀಡುತ್ತಿಲ್ಲ. ನಮ್ಮ ಅಜ್ಜಿ ಗ್ರಾಮಗಳಿಗೆ ಆನೆಯ ಮೂಲಕ ಬರುತ್ತಿದ್ದರು. ಈಗಿನ ಪ್ರಧಾನಿ ಬಡಜನರ ಮನೆಗಳಿಗೆ ಭೇಟಿ ನೀಡದೆ ಅಮೆರಿಕ, ಜಪಾನ್ ಮುಂತಾದ ದೇಶಗಳಿಗೆ ತೆರಳುತ್ತಾರೆ. ಕಳೆದ 55 ವರ್ಷದ ಅವಧಿಯಲ್ಲಿ ನಿರುದ್ಯೋಗ ಸಮಸ್ಯೆ ಅತ್ಯಂತ ಹೆಚ್ಚಾಗಿದೆ. ಬೆಲೆಗಳು ದಿನದಿಂದ ದಿನಕ್ಕೆ ಏರುತ್ತಲೇ ಇವೆ” ಎಂದು ಮೋದಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
“ಪ್ರಧಾನಿ ಮೋದಿ ಬಿಜೆಪಿ ಪಕ್ಷವನ್ನು ಕಳೆದ 10 ವರ್ಷಗಳಲ್ಲಿ ಅತ್ಯಂತ ಶ್ರೀಮಂತ ಪಕ್ಷವನ್ನಾಗಿ ಮಾಡಿದ್ದಾರೆ. ದೇಶವನ್ನು ಮಾರಾಟಕ್ಕಿಟ್ಟು ಅವರು ಶ್ರೀಮಂತರಾಗಿದ್ದಾರೆ. ಇಂದಿನ ದಿನಗಳ ಆಡಳಿತ ಕಾಂಗ್ರೆಸ್ ಆಡಳಿತದಂತೆ ಇಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.





