ದೆಹಲಿಯ ಕೆಂಪು ಕೋಟೆ ಬಳಿ ನಡೆದ ಬಾಂಬ್ ಸ್ಫೋಟದ ಶಂಕಿತ ಆರೋಪಿ ಡಾ. ಉಮರ್ ನಬಿಯ ದಕ್ಷಿಣ ಕಾಶ್ಮೀರದ ಪುಲ್ವಾಮಾದ ಕ್ವಿಲ್ ಗ್ರಾಮದಲ್ಲಿರುವ ಮನೆಯನ್ನು ಭದ್ರತಾ ಪಡೆಗಳು ಧ್ವಂಸಗೊಳಿಸಿದೆ. ಉಗ್ರರ ವಿರುದ್ಧದ ಬಲವಾದ ಸಂದೇಶ ನೀಡಲು ಮನೆಯನ್ನು ಕೆಡವಲಾಗಿದೆ ಎಂದು ಪೊಲೀಸರು ಹೇಳಿಕೊಂಡಿದ್ದಾರೆ. ಇನ್ನು ಮನೆ ಕೆಡವುದಕ್ಕೂ ಮುನ್ನ ಮನೆಯಲ್ಲಿದ್ದ ನಬಿ ಕುಟುಂಬಸ್ಥರನ್ನು ಹೊರಗೆ ಕರೆತರಲಾಗಿದೆ ಎಂದು ವರದಿಯಾಗಿದೆ.
ಸೋಮವಾರ ದೆಹಲಿಯ ಕೆಂಪು ಕೋಟೆಯ ಬಳಿ ಐ20 ಕಾರು ಸ್ಫೋಟಗೊಂಡಿದ್ದು, ಸುಮಾರು 13 ಮಂದಿ ಮೃತಪಟ್ಟಿದ್ದಾರೆ. ನಬಿ ಈ ಬಾಂಬ್ ದಾಳಿಯ ಶಂಕಿತ ಆರೋಪಿ. ಈ ಸ್ಫೋಟದಲ್ಲಿ ನಬಿ ಸಾವನ್ನಪ್ಪಿದ್ದು, ವಶಪಡಿಸಿಕೊಂಡ ದೇಹದ ಭಾಗಗಳೊಂದಿಗೆ ಡಿಎನ್‌ಎ ಹೊಂದಿಕೆಯಾಗಿದೆ ಎನ್ನಲಾಗಿದೆ. ಸದ್ಯ ಉಮರ್ ತಾಯಿ, ತಂದೆ ಮತ್ತು ಇಬ್ಬರು ಸಹೋದರರು ಪೊಲೀಸ್ ವಶದಲ್ಲಿದ್ದಾರೆ.
ಇದನ್ನು ಓದಿದ್ದೀರಾ? ದೆಹಲಿ ಸ್ಫೋಟ ದುರಂತ: ಮುಗಿಲು ಮುಟ್ಟಿದ ಮೃತರ ಕುಟುಂಬಗಳ ರೋದನ
ದೆಹಲಿ ಸ್ಫೋಟಕ್ಕೆ ಸಂಬಂಧಿಸಿದಂತೆ ತನಿಖಾ ಸಂಸ್ಥೆಗಳು ಉತ್ತರ ಪ್ರದೇಶದ ಡಾ. ಅದೀಲ್ ಅಹ್ಮದ್ ರಾಥರ್, ಡಾ. ಶಾಹೀನ್ ಸಯೀದ್, ಡಾ. ಪರ್ವೇಜ್ ಅನ್ಸಾರಿ, ಡಾ. ಫಾರೂಕ್ ಮತ್ತು ಡಾ. ಮೊಹಮ್ಮದ್ ಆರಿಫ್ ಎಂಬ ಐವರು ವೈದ್ಯರನ್ನು ಬಂಧಿಸಿದೆ. ಈ ಹಿನ್ನೆಲೆ ಸದ್ಯ ಜಮ್ಮು ಮತ್ತು ಕಾಶ್ಮೀರ ಪೊಲೀಸರು, ಉತ್ತರ ಪ್ರದೇಶ ಮತ್ತು ಹರಿಯಾಣ ಪೊಲೀಸರು, ಗುಪ್ತಚರ ಸಂಸ್ಥೆಗಳು ‘ವೈಟ್ ಕಾಲರ್ ಉಗ್ರಗಾಮಿ ಜಾಲ’ ಎಂಬ ಬಗ್ಗೆ ತನಿಖೆ ನಡೆಸುತ್ತಿದೆ.
ಇನ್ನು ಈಗಾಗಲೇ ಮಾನವ ಹಕ್ಕುಗಳ ಹೋರಾಟಗಾರರು ಶಂಕಿತ ಉಗ್ರರು ಅಥವಾ ಉಗ್ರರ ಮನೆಯನ್ನು ಧ್ವಂಸಗೊಳಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದೆ. ಉಗ್ರ ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿರದ ಕುಟುಂಬ ಸದಸ್ಯರು, ಸಂಬಂಧಿಕರಿಗೆ ಶಿಕ್ಷೆ ನೀಡುವುದು, ಅವರನ್ನು ಬೀದಿಪಾಲು ಮಾಡುವುದು ಸರಿಯಲ್ಲ. ಇದು ಅಂತಾರಾಷ್ಟ್ರೀಯ ಕಾನೂನಿನಡಿ ನಿಷೇಧಿತ ಎಂದು ಮಾನವ ಹಕ್ಕುಗಳ ಹೋರಾಟಗಾರರು ಹೇಳಿದ್ದಾರೆ. ಈ ರೀತಿ ಮನೆ ಧ್ವಂಸ ಮಾಡುವುದು ವಸತಿ ಹಕ್ಕು, ಘನತೆಯ ಹಕ್ಕು ಮತ್ತು ಕಾನೂನಿನ ಮುಂದೆ ಸಮಾನತೆಯ ಹಕ್ಕು ಸೇರಿದಂತೆ ಮೂಲಭೂತ ಸೇರಿದಂತೆ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಮಾನವ ಹಕ್ಕುಗಳ ಸಂಘಟನೆಗಳು ಪ್ರತಿಪಾದಿಸಿದೆ.





