ಮಹಾರಾಷ್ಟ್ರದಲ್ಲಿ 2023ರಲ್ಲಿ ‘ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ’ವನ್ನು (ಎನ್‌ಸಿಪಿ) ಇಬ್ಭಾಗಿಸಿ, ಅಜಿತ್ ಪವಾರ್ ಅವರು ಬಿಜೆಪಿ ಜೊತೆ ಸೇರಿದ್ದರು. ಈಗ ಎನ್‌ಸಿಪಿ (ಶರದ್ ಬಣ) ಮತ್ತು ಎನ್‌ಸಿಪಿ (ಅಜಿತ್ ಬಣ) ಮತ್ತೆ ಒಗ್ಗೂಡಿವೆ. ಪುಣೆ ಮಹಾನಗರ ಪಾಲಿಕೆ ಚುನಾವಣೆಗೆ ಎರಡೂ ಬಣಗಳು ಮೈತ್ರಿ ಮಾಡಿಕೊಂಡಿವೆ. ಶನಿವಾರ, ಜಂಟಿಯಾಗಿ ಪ್ರಣಾಳಿಕೆ ಬಿಡುಗಡೆ ಮಾಡಿವೆ. ಸಂಚಾರ ದಟ್ಟಣೆ ಪರಿಹಾರ, ಆರೋಗ್ಯ ರಕ್ಷಣೆ, ನೀರು ಸರಬರಾಜು ಹಾಗೂ ಸಾರ್ವಜನಿಕ ಸಾರಿಗೆಗೆ ಹೆಚ್ಚು ಒತ್ತುಕೊಡುವುದಾಗಿ ಭರವಸೆ ನೀಡಿವೆ.
ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ರಾಜಕೀಯ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಪುಣೆಯಲ್ಲಿ ಬಣಗಳು ಒಗ್ಗೂಡಿವೆ. ಜಂಟಿಯಾಗಿ ಅಭಿವೃದ್ಧಿ ಕಾರ್ಯಸೂಚಿ ರಚಿಸಿವೆ ಎಂದು ಪಕ್ಷಗಳು ಹೇಳಿಕೊಂಡಿವೆ.
ಶನಿವಾರ, ಶರದ್ ಬಣದಿಂದ ಸಂಸದೆ ಸುಪ್ರಿಯಾ ಸುಳೆ ಮತ್ತು ಅಜಿತ್ ಬಣದಿಂದ ಸ್ವತಃ ಉಪಮುಖ್ಯಮಂತ್ರಿ ಅಜಿತ್ ಪವಾರ್ ಒಂದೇ ವೇದಿಕೆಯಲ್ಲಿ ಜಂಟಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. “ಪುಣೆಯಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವುದು, ಪ್ರಮುಖ ರಸ್ತೆಗಳ ಅಗಲೀಕರಣ, 33 ರಸ್ತೆ ಸಂಪರ್ಕಗಳನ್ನು ಪುನರ್‌ರಚನೆ, ಯುರೋಪಿಯನ್ ನಗರಗಳ ಮಾದರಿಯಲ್ಲಿ ಬಸ್‌ಗಳು ಮತ್ತು ಮೆಟ್ರೋದಲ್ಲಿ ಉಚಿತ ಪ್ರಯಾಣ, ಸಾರ್ವಜನಿಕ ಸಾರಿಗೆಯನ್ನು ಬಲಪಡಿಸುವುದು ತಮ್ಮ ಆದ್ಯತೆ” ಎಂದು ಪಕ್ಷಗಳು ಹೇಳಿಕೊಂಡಿವೆ.
ಪುಣೆಯಲ್ಲಿ ಸುಮಾರು 30 ಲಕ್ಷ ವಾಹನಗಳು ಇರುವುದರಿಂದ, ಟ್ರಾಫಿಕ್ ಜಾಮ್‌ನಿಂದಾಗಿಯೇ ಪ್ರತಿ ವರ್ಷ 750 ಕೋಟಿ ರೂ. ಮೌಲ್ಯದ ಇಂಧನ ಮತ್ತು ನಾಗರಿಕರ ಸಮಯವು ವ್ಯರ್ಥವಾಗುತ್ತಿದೆ. ಉತ್ತಮ ಸಾರ್ವಜನಿಕ ಸಾರಿಗೆಯು ಈ ಆರ್ಥಿಕ ನಷ್ಟ ಮತ್ತು ಮಾಲಿನ್ಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಎಂದು ಪಕ್ಷಗಳ ನಾಯಕರು ಪ್ರತಿಪಾದಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಕೋಗಿಲು ಲೇಔಟ್‌ನ ಬಡವರಿಗೂ ಬದುಕುವ ಹಕ್ಕಿದೆ!
ಕ್ಯಾನ್ಸರ್ ಆಸ್ಪತ್ರೆ ಮತ್ತು ಸುಟ್ಟಗಾಯಗಳ ವಾರ್ಡ್‌ಗಳನ್ನು ನಿರ್ಮಾಣವು ಆರೋಗ್ಯ ಕ್ಷೇತ್ರವನ್ನು ಬಲಪಡಿಸಲಿವೆ. ವಿದ್ಯುತ್ ವೆಚ್ಚವನ್ನು ಕಡಿಮೆ ಮಾಡಲು ಸೌರಶಕ್ತಿಗೆ ಒತ್ತು ಕೊಡಲಾಗುತ್ತದೆ. ಪುಣೆಯ ನೀರಿನ ಬಿಕ್ಕಟ್ಟಿಗೆ ಪರಿಹಾರ, ಒಳಚರಂಡಿ ವ್ಯವಸ್ಥೆ, ಮೆಟ್ರೋಗೆ ಕೊನೆಯ ಮೈಲಿ ಸಂಪರ್ಕ ಸುಧಾರಣೆಗೆ ಒತ್ತುಕೊಡಲಾಗುತ್ತದೆ ಎಂದಿದ್ದಾರೆ.
ಪಕ್ಷವು ಭರವಸೆಗಳನ್ನು ಮಾತ್ರವಲ್ಲ, ಫಲಿತಾಂಶಗಳನ್ನು ನೀಡುತ್ತದೆ ಎಂದು ಅಜಿತ್ ಪವಾರ್ ಹೇಳಿದ್ದಾರೆ. ಮುಂದಿನ ಮೂರುವರೆ ವರ್ಷಗಳ ಕಾಲ ಯಾವುದೇ ಚುನಾವಣೆಗಳು ಇರುವುದಿಲ್ಲ, ಆಡಳಿತಕ್ಕೆ ಕೆಲಸ ಮಾಡಲು ಸಾಕಷ್ಟು ಸಮಯವಿರುತ್ತದೆ ಎಂದು ತಿಳಿಸಿದ್ದಾರೆ.
ಮಹಾರಾಷ್ಟ್ರದ ರಾಜ್ಯ ಚುನಾವಣಾ ಆಯೋಗವು ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ), ಪುಣೆ ಮುನ್ಸಿಪಲ್ ಕಾರ್ಪೊರೇಷನ್ (ಪಿಎಂಸಿ) ಹಾಗೂ ಪಿಂಪ್ರಿ-ಚಿಂಚ್‌ವಾಡ್ ಮುನ್ಸಿಪಲ್ ಕಾರ್ಪೊರೇಷನ್ (ಪಿಸಿಎಂಸಿ) ಸೇರಿದಂತೆ ರಾಜ್ಯಾದ್ಯಂತ 29 ಮುನ್ಸಿಪಲ್ ಕಾರ್ಪೊರೇಷನ್‌ಗಳಿಗೆ ಚುನಾವಣೆಗಳನ್ನು ಘೋಷಿಸಿದೆ. ಜನವರಿ 15 ರಂದು ಮತದಾನ ನಡೆಯಲಿದ್ದು, ಜನವರಿ 16 ರಂದು ಫಲಿತಾಂಶ ಪ್ರಕಟವಾಗಲಿದೆ.




