ಪ್ರತಿಭಟನಾ ಮೆರವಣಿಗೆ ನಡೆಸಲು ಯತ್ನಿಸಿದ ರೈತರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆದಿದ್ದು, ರೈತರ ಮೇಲೆ ಪೊಲೀಸರು ಅಶ್ರುವಾಯು ಪ್ರಯೋಗಿಸಿರುವ ಘಟನೆ ಪಂಜಾಬ್‌ನ ಬಟಿಂಡಾದ ಜಿಯೋಂಡ್‌ನಲ್ಲಿ ನಡೆದಿದೆ.
ಕಳೆದ ವರ್ಷ ಬಂಧಿಸಲಾಗಿದ್ದ ರೈತ ಮುಖಂಡ ಶಗನ್‌ದೀಪ್ ಸಿಂಗ್ ಜಿಯೋಂಡ್ ಮತ್ತು ಬಲದೇವ್ ಸಿಂಗ್ ಚೌಕೆ ಅವರ ಬಿಡುಗಡೆಗೆ ಆಗ್ರಹಿಸಿ ಭಾರತೀಯ ಕಿಸಾನ್ ಯೂನಿಯನ್ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದರು. ರೈತರನ್ನು ತಡೆಯಲು ಪ್ರಮುಖ ರಸ್ತೆಗಳಲ್ಲಿ ಪೊಲೀಸರು ನಾಕಟಬಂಧಿ ಮಾಡಿದ್ದರು.
ಪೊಲೀಸರ ತಡೆಗೆ ಜಗ್ಗದ ಪೊಲೀಸರು ಜಿಲ್ಲಾಧಿಕಾರಿ ಕಚೇರಿ ಎಡೆಗೆ ಧಾವಿಸಲು ಮುಂದಾಗಿದ್ದಾರೆ. ಈ ವೇಳೆ, ರೈತರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆದಿದೆ. ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ. ಘಟನೆಯಲ್ಲಿ ಹಲವು ರೈತರು ಗಾಯಗೊಂಡಿದ್ದಾರೆ.
ಅಲ್ಲದೆ, ಹಲವಾರು ರೈತರನ್ನು ವಿವಿಧ ಸ್ಥಳಗಳಲ್ಲಿ ಬಂಧಿಸಲಾಗಿದೆ. ಕೆಲವು ರೈತ ಮುಖಂಡರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ ಎಂದು ವರದಿಯಾಗಿದೆ.
ಅಶ್ರುವಾಯು ಪ್ರಯೋಗವನ್ಮು ಸಮರ್ಥಿಸಿಕೊಂಡಿರುವ ಬಟಿಂಡಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (SSP) ಜ್ಯೋತಿ ಯಾದವ್, “ಕೆಲವು ಮನೆಗಳ ಮೇಲ್ಛಾವಣಿ ಹಾಗೂ ಪೊಲೀಸ್ ಸಿಬ್ಬಂದಿ ಮೇಲೆ ಉದ್ರಿಕ್ತ ಗುಂಪು ಕಲ್ಲು ತೂರಾಟ ನಡೆಸಿದೆ. ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ” ಎಂದಿದ್ದಾರೆ.
ಪ್ರತಿಭಟನೆ ನಡೆಸುವುದು ಪ್ರಜಾಸತ್ತಾತ್ಮಕ ಹಕ್ಕು ಎಂದು ಹೇಳಿರುವ ಪ್ರತಿಭಟನಾಕಾರರು, “ಪ್ರತಿಭಟನೆಯ ಕರೆಗೂ ಮುನ್ನ ಪೊಲೀಸರು ರೈತ ಮುಖಂಡರ ನಿವಾಸಗಳ ಮೇಲೆ ದಾಳಿ ನಡೆಸಿ ವಶಕ್ಕೆ ಪಡೆಯುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
ಈ ಮಧ್ಯೆ ಶಗನ್‌ದೀಪ್ ಮತ್ತು ಬಲದೇವ್‌ಗೆ ನ್ಯಾಯಾಲಯ ಜಾಮೀನು ನೀಡಿದೆ.




