ಪಂಜಾಬ್‌ನಲ್ಲಿ ನಡೆದ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಆಡಳಿತಾರೂಢ ಆಮ್ ಆದ್ಮಿ ಒಕ್ಷ (ಎಎಪಿ) ಭರ್ಜರಿ ಗೆಲುವು ಸಾಧಿಸಿದೆ. ಪಂಜಾಬ್‌ನ ಒಟ್ಟು ಜಿಲ್ಲಾ ಪರಿಷತ್‌ಗಳ 63% ವಲಯಗಳು ಮತ್ತು ಪಂಚಾಯತ್ ಸಮಿತಿಗಳಲ್ಲಿ 54% ವಲಯಗಳಲ್ಲಿ ಗೆಲುವು ದಾಖಲಿಸಿದೆ.
ಡಿಸೆಂಬರ್ 14 ರಂದು 22 ಜಿಲ್ಲಾ ಪರಿಷತ್‌ಗಳ 347 ವಲಯಗಳು ಮತ್ತು 153 ಪಂಚಾಯತಿ ಸಮಿತಿಗಳ 2,838 ವಲಯಗಳಿಗೆ ಚುನಾವಣೆ ನಡೆದಿತ್ತು.ಗುರುವಾರ ಫಲಿತಾಂಶ ಪ್ರಕಟವಾಗಿದೆ. ಜಿಲ್ಲಾ ಪರಿಷತ್‌ನಲ್ಲಿ, ಎಎಪಿ 218 ವಲಯಗಳಲ್ಲಿ ಗೆಲುವು ಸಾಧಿಸಿದರೆ, ಕಾಂಗ್ರೆಸ್ 62 ವಲಯಗಳನ್ನು ಗೆದ್ದಿದೆ. ಸುಖ್‌ಬೀರ್ ಸಿಂಗ್ ಬಾದಲ್ ನೇತೃತ್ವದ ಎಸ್‌ಎಡಿ 46 ವಲಯಗಳನ್ನು ಗೆದ್ದರೆ, ಬಿಜೆಪಿ 7, ಬಿಎಸ್‌ಪಿ 3 ಮತ್ತು ಸ್ವತಂತ್ರರು 10 ವಲಯಗಳನ್ನು ಗೆದ್ದಿದ್ದಾರೆ.
ಪಂಚಾಯತ್ ಸಮಿತಿಗಳಲ್ಲಿ, ಎಎಪಿ 1,531 ವಲಯಗಳನ್ನು ಗೆದ್ದರೆ, ಕಾಂಗ್ರೆಸ್ 612 ಮತ್ತು ಎಸ್‌ಎಡಿ 445 ವಲಯಗಳನ್ನು ಗೆದ್ದಿದೆ. ಬಿಜೆಪಿ 73, ಬಿಎಸ್‌ಪಿ 28 ಹಾಗೂ ಸ್ವತಂತ್ರರು 144 ವಲಯಗಳನ್ನು ಗೆದ್ದಿದ್ದಾರೆ.
ಫಲಿತಾಂಶಗಳ ಪ್ರಕಾರ, ಎಎಪಿ ಮೇಲುಗೈ ಸಾಧಿಸಿದ್ದರೆ, ಕಾಂಗ್ರೆಸ್ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಶಿರೋಮಣಿ ಅಕಾಲಿ ದಳ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಬಿಜೆಪಿ ಹೀನಾಯ ಪರಿಸ್ಥಿತಿಯಲ್ಲಿದೆ.
ಚುನಾವಣೆಯಲ್ಲಿ ಎಎಪಿಯ ಪ್ರಬಲ ಪ್ರದರ್ಶನವು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಸೇತೃತ್ವದ ಸರ್ಕಾರದ ಮೇಲೆ ಗ್ರಾಮೀಣ ಭಾಗದ ಜನರು ವಿಶ್ವಾಸ ಇಟ್ಟಿದ್ದಾರೆ ಎಂಬುದನ್ನು ತೋರಿಸುತ್ತದೆ. ರಾಜ್ಯದಲ್ಲಿ ಎಎಪಿ ಪರವಾಗಿ ಅಲೆ ಇದೆ ಎಂದು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
“ಭಗವಂತ್ ಮಾನ್ ನೇತೃತ್ವದಲ್ಲಿ ಎಎಪಿ ಸರ್ಕಾರ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳಿಗೆ ಗ್ರಾಮೀಣ ಪ್ರದೇಶದ ಜನರು ತಮ್ಮ ಅನುಮೋದನೆಯ ಮುದ್ರೆ ಹಾಕಿದ್ದಾರೆ. ಸರ್ಕಾರದ ಮಾದಕ ದ್ರವ್ಯ ವಿರೋಧಿ ಅಭಿಯಾನ, 75 ವರ್ಷಗಳ ನಂತರ ಹೊಲಗಳಿಗೆ ಕಾಲುವೆ ನೀರು, ಉಚಿತ ವಿದ್ಯುತ್ ಹಾಗೂ ಅರ್ಹತೆಯ ಆಧಾರದ ಮೇಲೆ ಸರ್ಕಾರಿ ಉದ್ಯೋಗಗಳನ್ನು ನೀಡಿರುವುದು ಜನರಲ್ಲಿ ಪಕ್ಷದ ಮೇಲೆ ವಿಶ್ವಾಸ ಹೆಚ್ಚಿಸಿದೆ” ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಫಲಿತಾಂಶವು ಗ್ರಾಮೀಣ ಪ್ರದೇಶಗಳಲ್ಲಿ ಆಡಳಿತ ಪಕ್ಷದ ಅದ್ಭುತ ವಿಜಯವನ್ನು ತೋರಿಸಿದೆ. ಮಾತ್ರವಲ್ಲ, ವಿಪಕ್ಷಗಳಾದ ಕಾಂಗ್ರೆಸ್ ಮತ್ತು ಎಸ್‌ಎಡಿ ಕೂಡ ಉತ್ತಮ ಪ್ರದರ್ಶನ ನೀಡಿದ್ದು, ತಮ್ಮ ಅಸ್ತಿತ್ವವನ್ನು ಬಲವಾಗಿ ಸಾಬೀತುಪಡಿಸಿವೆ.
ಎಸ್‌ಬಿಎಸ್ ನಗರ, ರೂಪನಗರ, ಫಿರೋಜ್‌ಪುರ, ಜಲಂಧರ್ ಹಾಗೂ ಲುಧಿಯಾನದಲ್ಲಿ ಎಎಪಿಗೆ ಕಾಂಗ್ರೆಸ್ ಕಠಿಣ ಪೈಪೋಟಿ ನೀಡಿದೆ. ಮುಕ್ತಸರ್, ಫರೀದ್‌ಕೋಟ್ ಹಾಗೂ ಬಟಿಂಡಾದಲ್ಲಿ ಎಸ್‌ಎಡಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ.
ಬಿಜೆಪಿ ಯಥಾಪ್ರಕಾರ ಹಿನಾಯ ಪ್ರದರ್ಶನ ನೀಡಿದ್ದು, ಫಜಿಲ್ಕಾ ಜಿಲ್ಲಾ ಪರಿಷತ್‌ನ ಮೂರು ವಲಯಗಳು ಮತ್ತು ಪಠಾಣ್‌ಕೋಟ್ ಜಿಲ್ಲಾ ಪರಿಷತ್‌ನಲ್ಲಿ ನಾಲ್ಕು ವಲಯಗಳನ್ನು ಗೆದ್ದಿದೆ.
ಈ ಲೇಖನ ಓದಿದ್ದೀರಾ?: ತಿರುವನಂತಪುರಂ ಗೆದ್ದ ಆತ್ಮವಿಶ್ವಾಸ: ಕೇರಳದಲ್ಲಿ 10 ವಿಧಾನಸಭೆ ಗೆಲ್ಲಲು ಬಿಜೆಪಿ ತಯಾರಿ; ಗಂಭೀರ ವಿಚಾರವೇಕೆ?
ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಅವರು ಆಡಳಿತಾರೂಢ ಎಎಪಿ ‘ಚುನಾವಣೆಯನ್ನು ಕದ್ದಿದೆ’ ಎಂದು ಆರೋಪಿಸಿದ್ದಾರೆ. ಸರ್ಕಾರಿ ಯಂತ್ರೋಪಕರಣದ ದುರ್ಬಳಕೆ ನಡೆದಿದೆ ಎಂದು ದೂರಿದ್ದಾರೆ.
ಎಸ್‌ಎಡಿ ನಾಯಕ ಸುಖ್‌ಬೀರ್ ಸಿಂಗ್ ಬಾದಲ್ ಅವರು ತಮ್ಮ ಪಕ್ಷದ ಚೇತರಿಕೆಗೆ ಹರ್ಷ ವ್ಯಕ್ತಪಡಿಸಿದ್ದಾರೆ. 2027 ವಿಧಾನಸಭಾ ಚುನಾವಣೆಯಲ್ಲಿ ಸರ್ಕಾರ ರಚಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪಂಜಾಬ್‌ನ ಈ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು 2027ರ ಪಂಜಾಬ್ ವಿಧಾನಸಭಾ ಚುನಾವಣೆಗೆ ‘ಸೆಮಿ-ಫೈನಲ್’ ಎಂದು ಪರಿಗಣಿಸಲಾಗಿದೆ. AAP ಗೆಲುವು ಭಗವಂತ್ ಮಾನ್ ಸರ್ಕಾರದ ಗ್ರಾಮೀಣ ಅಭಿವೃದ್ಧಿ, ಉಚಿತ ವಿದ್ಯುತ್, ಆರೋಗ್ಯ ಯೋಜನೆಗಳಿಗೆ ಜನರ ಬೆಂಬಲವನ್ನು ತೋರಿಸುತ್ತದೆ. ಕಾಂಗ್ರೆಸ್ ಮತ್ತು SAD ಪ್ರದರ್ಶನವು ಹೊಸ ಉರುವು ಮತ್ತು ವಿಶ್ವಾಸವನ್ನು ಇಮ್ಮಡಿಗೊಳಿಸಿದೆ.




