ದೇಶದಲ್ಲಿ ಭೀಕರ ಸ್ಥಿತಿಯಲ್ಲಿರುವ ಹದಗೆಡುತ್ತಿರುವ ವಾಯು ಮಾಲಿನ್ಯದ ಕುರಿತು ತುರ್ತು ಮತ್ತು ಪಕ್ಷಾತೀತ ಚರ್ಚೆಗೆ ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ. ಅವರ ಒತ್ತಾಯಕ್ಕೆ ಇಡೀ ಸದನ ಒಮ್ಮತ ಸೂಚಿಸಿದ್ದು, ಚರ್ಚೆಗೆ ಸರ್ಕಾರವೂ ಒಪ್ಪಿಕೊಂಡಿದೆ.
ಶುಕ್ರವಾರ, ಲೋಕಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, “ನಮ್ಮ ಪ್ರಮುಖ ನಗರಗಳಲ್ಲಿ ಹೆಚ್ಚಿನ ನಗರಗಳು ವಿಷಕಾರಿ ಗಾಳಿಯಿಂದ ಆವರಿಸಿವೆ. ಈ ನಗರಗಳ ಜನರು ಮಲಿನ ಗಾಳಿಯ ನಡುವೆಯೇ ವಾಸಿಸುತ್ತಿದ್ದಾರೆ. ಲಕ್ಷಾಂತರ ಮಕ್ಕಳು ಶ್ವಾಸಕೋಶದ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಅವರ ಭವಿಷ್ಯ ನಾಶವಾಗುತ್ತಿದೆ. ಜನರು ಕ್ಯಾನ್ಸರ್‌ಗೆ ಬಲಿಯಾಗುತ್ತಿದ್ದಾರೆ. ವೃದ್ಧರೂ ಕೂಡ ಉಸಿರಾಡಲು ಕಷ್ಟಪಡುತ್ತಿದ್ದಾರೆ. ಇದು ತುರ್ತು ವಿಷಯವಾಗಿದೆ” ಎಂದು ಹೇಳಿದ್ದಾರೆ.
“ನಗರಗಳ ವಾಯು ಮಾಲಿನ್ಯ ಪರಸ್ಥಿತಿಯ ಕುರಿತು ಸರ್ಕಾರ ಮತ್ತು ನಮ್ಮ ನಡುವೆ ಒಂದೇ ರೀತಿಯ ಅಭಿಪ್ರಾಯ ಇದೆ ಎಂಬುದಾಗಿ ನಾನು ಭಾವಿಸುತ್ತೇನೆ. ಇದು ಸೈದ್ಧಾಂತಿಕ ವಿಷಯವಲ್ಲ. ವಾಯು ಮಾಲಿನ್ಯವು ನಮ್ಮ ಜನರಿಗೆ ಹೆಚ್ಚು ಹಾನಿ ಮಾಡುತ್ತಿದೆ. ನಾವು ಜನರ ಸಮಸ್ಯೆಗೆ ಸ್ಪಂದಿಸಬೇಕಾದ ವಿಷಯವಿದು. ಇದನ್ನು ಈ ಸದನದಲ್ಲಿರುವ ಪ್ರತಿಯೊಬ್ಬರೂ ಒಪ್ಪುತ್ತಾರೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
“ವಾಯು ಮಾಲಿನ್ಯದ ಕುರಿತು ನಾವು ಹೆಚ್ಚು ಚರ್ಚೆ ನಡೆಸುವುದು ಒಳ್ಳೆಯದೆಂದು ನಾನು ಭಾವಿಸುತ್ತೇನೆ. ಇಲ್ಲಿ ‘ನೀವು ಏನು ಮಾಡಿಲ್ಲ’ವೆಂದು ನೀವು ನಮ್ಮನ್ನು – ನಾವು ನಿಮ್ಮನ್ನು ದೂಷಿಸುವುದರ ಮೇಲೆ ಚರ್ಚೆ ನಡೆಯುವುದಲ್ಲ. ಈಗ ಭಾರತದ ಜನರಿಗಾಗಿ ನಾವು ಏನು ಮಾಡಬೇಕು, ಮಾಡಲಿದ್ದೇವೆ. ತೆಗೆದುಕೊಳ್ಳಬೇಕಾದ ಚರ್ಚೆಗಳೇನು ಎಂಬುದರ ಕುರಿತು ಚರ್ಚೆಯಾಗಬೇಕು. ಎಲ್ಲರೂ ಒಪ್ಪಬಹುದಾದ ಒಂದು ವಿಷಯದ ಬಗ್ಗೆ ಮಾತನಾಡಲು ಪ್ರಯತ್ನಿಸಬಹುದೇ ಎಂಬುದನ್ನು ನೋಡಲು ಇದೊಂದು ಆದ್ಯತೆಯ ಪ್ರಯೋಗವೂ ಆಗಿದೆ” ಎಂದಿದ್ದಾರೆ.
“ಜನರ ಉಸಿರಾಟದ ಸಮಸ್ಯೆಯ ಬಗ್ಗೆ ಚರ್ಚಿಸಲು ಯಾವುದೇ ಭಿನ್ನಾಭಿಪ್ರಾಯವಿಲ್ಲ. ಮಾತನಾಡೋಣ, ಆಲಿಸೋಣ, ಭಾರತದ ಜನರ ಭವಿಷ್ಯದ ಬಗ್ಗೆ ಚರ್ಚಿಸೋಣ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ರಾಹುಲ್ ಮಾತಿಗೆ ಧ್ವನಿಗೂಡಿಸಿದ ಸಂಸದೆ ಪ್ರಿಯಾಂಕಾ ಗಾಂಧಿ, “ರಾಹುಲ್ ಅವರ ಮಾತನ್ನು ನಾನು ಸಂಪೂರ್ಣವಾಗಿ ಒಪ್ಪುತ್ತೇನೆ. ಎಲ್ಲರೂ ಒಪ್ಪುತ್ತಾರೆ ಎಂದು ನಾನು ಭಾವಿಸುತ್ತೇನೆ. ನಾವೆಲ್ಲರೂ ಇದನ್ನು ಚರ್ಚಿಸಿ ಕ್ರಿಯಾ ಯೋಜನೆಯನ್ನು ರಚಿಸಬೇಕು. ಈ ಸಮಸ್ಯೆ ತುಂಬಾ ದಿನಗಳಿಂದ ಮುಂದುವರೆದಿದೆ. ಪ್ರತಿ ವರ್ಷ ಪರಿಸ್ಥಿತಿ ಹದಗೆಡುತ್ತಿದೆ” ಎಂದು ಹೇಳಿದ್ದಾರೆ.
ರಾಹುಲ್ ಮಾತಿಗೆ ಪ್ರತಿಕ್ರಿಯಿಸಿದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, “ಸರ್ಕಾರವು ಈ ವಿಷಯದ ಬಗ್ಗೆ ಚರ್ಚೆ ನಡೆಸಲು ಸಿದ್ಧವಾಗಿದೆ. ಲೋಕಸಭೆಯ ವ್ಯವಹಾರ ಸಲಹಾ ಸಮಿತಿಯು ಈ ಚರ್ಚೆಗಾಗಿ ಸಮಯ ನಿಗದಿ ಮಾಡಲಿದೆ” ಎಂದಿದ್ದಾರೆ.
ಈ ಲೇಖನ ಓದಿದ್ದೀರಾ?: ಪಶ್ಚಿಮ ಬಂಗಾಳ | ಮುಸ್ಲಿಮರ ಓಲೈಕೆಗೆ ಬಿಜೆಪಿ ತಂತ್ರ-ಕುತಂತ್ರ
ಲೋಕಸಭೆಯಲ್ಲಿ ಮಾತನಾಡಿದ ಬಳಿಕ, ‘ಎಕ್ಸ್’ನಲ್ಲಿ ಪೋಸ್ಟ್ ಹಾಕಿರುವ ರಾಹುಲ್ ಗಾಂಧಿ, ವಾಯು ಮಾಲಿನ್ಯವನ್ನು ‘ರಾಷ್ಟ್ರೀಯ ವಿಪತ್ತು’ ಎಂದು ಕರೆದಿದ್ದಾರೆ. ಇದನ್ನು ‘ರಾಜಕೀಯ ಸಮಸ್ಯೆ’ಯಾಗಿ ನೋಡುವುದಕ್ಕಿಂತ ‘ದ್ವಿಪಕ್ಷೀಯ ಜವಾಬ್ದಾರಿ’ಯಾಗಿ ಕಾಣಬೇಕು ಎಂದಿದ್ದಾರೆ.
“ವಾಯು ಮಾಲಿನ್ಯವು ಸಮಗ್ರ ಮತ್ತು ತಕ್ಷಣದ ರಾಷ್ಟ್ರೀಯ ಕ್ರಿಯಾ ಯೋಜನೆಯನ್ನು ಬೇಡುವ ರಾಷ್ಟ್ರೀಯ ವಿಪತ್ತಾಗಿ ಮಾರ್ಪಟ್ಟಿದೆ. ಇದು ರಾಜಕೀಯ ಸಮಸ್ಯೆಯಲ್ಲ. ಬದಲಾಗಿ ಉಭಯ ಪಕ್ಷಗಳ ಜವಾಬ್ದಾರಿಯಾಗಿದೆ. ವಾಯು ಮಾಲಿನ್ಯವನ್ನು ಎದುರಿಸಲು, ಪರಿಹರಿಸಲು ಹಾಗೂ ನಮ್ಮ ಜನರ ಭವಿಷ್ಯವನ್ನು ರಕ್ಷಿಸಲು ನಾವು ಪ್ರಧಾನಿಯೊಂದಿಗೆ ಸೇರಿ ಕೆಲಸ ಮಾಡಲು ಸಿದ್ದರಿದ್ದೇವೆ” ಎಂದು ಹೇಳಿದ್ದಾರೆ.
ದೆಹಲಿಯು ತೀವ್ರ ವಾಯು ಮಾಲಿನ್ಯವನ್ನು ಎದುರಿಸುತ್ತಲೇ ಇದೆ. ಶುಕ್ರವಾರ ನಗರದಲ್ಲಿ ದಟ್ಟ ಹೊಗೆ ಆವರಿಸಿದೆ. ವಾಯು ಗುಣಮಟ್ಟ ಸೂಚ್ಯಂಕವು (AQI) 332ಕ್ಕೆ ಏರಿಕೆಯಾಗಿದೆ. ಇದು ‘ತುಂಬಾ ಕಳಪೆ’ ಗುಣಮಟ್ಟವನ್ನು ಸೂಚಿಸುತ್ತದೆ.




