ರಾಹುಲ್ ಗಾಂಧಿ ಅವರ ಲೋಕಸಭಾ ಸ್ಥಾನದ ಆಯ್ಕೆಯ ಮೇಲಿನ ನಿಗೂಢತೆಯನ್ನು ಕಾಂಗ್ರೆಸ್ ಕೊನೆಗೂ ಕೊನೆಗೊಳಿಸಿದೆ. ಸೋಮವಾರ ಕಾಂಗ್ರೆಸ್ ಪಕ್ಷವು ಇಂದು ಎರಡು ಪ್ರಮುಖ ಪ್ರಕಟಣೆಗಳನ್ನು ಹೊರಡಿಸಿದ್ದು, ರಾಹುಲ್ ಗಾಂಧಿ ಕೇರಳದಲ್ಲಿನ ವಯನಾಡ್ ಲೋಕಸಭಾ ಕ್ಷೇತ್ರವನ್ನು ತೆರವುಗೊಳಿಸಲಿದ್ದು, ಉತ್ತರ ಪ್ರದೇಶದಲ್ಲಿನ ತಮ್ಮ ಕುಟುಂಬದ ಭದ್ರಕೋಟೆಯಾದ ರಾಯ್‌ಬರೇಲಿಯನ್ನು ಉಳಿಸಿಕೊಳ್ಳಲಿದ್ದಾರೆ.
ರಾಹುಲ್ ಗಾಂಧಿ ತೆರವುಗೊಳಿಸಲಿರುವ ವಯನಾಡ್ ಲೋಕಸಭಾ ಕ್ಷೇತ್ರದಿಂದ ಅವರ ಸಹೋದರಿಯಾದ ಪ್ರಿಯಾಂಕಾ ಗಾಂಧಿ ವಾದ್ರಾ ಸ್ಪರ್ಧಿಸಲಿದ್ದಾರೆ. ಈ ಮೂಲಕ ಅವರು ಕೊನೆಗೂ ಚುನಾವಣಾ ರಾಜಕಾರಣಕ್ಕೆ ಪ್ರವೇಶ ಮಾಡಲಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ನೀಟಾಗಿಲ್ಲ ಎನ್ನುವುದು ಗೊತ್ತಿದ್ದೂ ಭಂಡತನ ಮೆರೆದ ಬಿಜೆಪಿ
ನಿಯಮಗಳ ಪ್ರಕಾರ, ಜೂನ್ 4 ರಂದು ಹೊರಬಿದ್ದ ಲೋಕಸಭೆಯ ಫಲಿತಾಂಶದ 14 ದಿನಗಳಲ್ಲಿ ರಾಹುಲ್ ಗಾಂಧಿ ಒಂದು ಸ್ಥಾನವನ್ನು ಖಾಲಿ ಮಾಡಬೇಕಾಗಿತ್ತು. ಇದೀಗ ರಾಹುಲ್ ಗಾಂಧಿ ರಾಯ್‌ಬರೇಲಿಯಲ್ಲಿ ಉಳಿಯಲು ಆಯ್ಕೆ ಮಾಡಿಕೊಂಡಿರುವುದರಿಂದ, ಅವರ ಸಹೋದರಿ ಪ್ರಿಯಾಂಕಾ ಅವರು ತೆರವಾದ ವಯನಾಡಿನ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, “ರಾಹುಲ್ ಗಾಂಧಿ ಅವರು ಎರಡು ಲೋಕಸಭಾ ಸ್ಥಾನಗಳಿಂದ ಗೆಲುವು ಸಾಧಿಸಿದ್ದಾರೆ. ಆದರೆ ಕಾನೂನಿನ ಪ್ರಕಾರ ಅವರು ಒಂದನ್ನು ತೆರವು ಮಾಡಬೇಕು. ರಾಹುಲ್ ಗಾಂಧಿ ರಾಯ್ ಬರೇಲಿಯನ್ನು ಉಳಿಸಿಕೊಳ್ಳಲಿದ್ದು, ಪ್ರಿಯಾಂಕಾ ಅವರು ವಯನಾಡಿನಿಂದ ಸ್ಪರ್ಧಿಸಲು ನಿರ್ಧರಿಸಿದ್ದಾರೆ” ಎಂದು ಹೇಳಿದರು.





