ಹರಿಯಾಣದ ಗಾರ್ಮೆಂಟ್ ಕಾರ್ಖಾನೆಗೆ ಲೋಕಸಭೆ ವಿಪಕ್ಷ ನಾಯಕ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಭೇಟಿ ನೀಡಿದ್ದರು. ಭಾರತದ ಮೇಲೆ ಅಮೆರಿಕ ಹೇರಿರುವ 50% ಸುಂಕಗಳ ಕುರಿತು ಮಾತನಾಡಿದ ಅವರು, ಅಮೆರಿಕದ ಸುಂಕಗಳು ಭಾರತದ ಜವಳಿ ಕ್ಷೇತ್ರದಲ್ಲಿನ ರಫ್ತು, ಉದ್ಯೋಗಗಳು ಹಾಗೂ ವ್ಯವಹಾರಗಳಿಗೆ ಹೇಗೆ ಬೆದರಿಕೆ ಹಾಕುತ್ತವೆ ಎಂಬುದನ್ನು ವಿವರಿಸಿದ್ದಾರೆ.
ತಮ್ಮ ಭೇಟಿ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, “ಅಮೆರಿಕದ 50% ಸುಂಕಗಳು ಮತ್ತು ಅನಿಶ್ಚಿತತೆಯು ಭಾರತದ ಜವಳಿ ರಫ್ತುದಾರರಿಗೆ ಭೀರಕ ಹಾನಿ ಮಾಡುತ್ತಿದೆ. ಉದ್ಯೋಗ ನಷ್ಟಗಳು, ಕಾರ್ಖಾನೆ ಮುಚ್ಚುವಿಕೆಗಳು ಹಾಗೂ ಕಡಿಮೆ ಉತ್ಪಾದನೆಯು ನಮ್ಮ ‘ಸತ್ತ ಆರ್ಥಿಕತೆ’ಯ ವಾಸ್ತವವನ್ನು ಬಿಚ್ಚಿಡುತ್ತದೆ. ಜವಳಿ ಕ್ಷೇತ್ರದ 4.5 ಕೋಟಿ ಉದ್ಯೋಗಗಳು ಮತ್ತು ಲಕ್ಷಾಂತರ ವ್ಯವಹಾರಗಳು ಸ್ಥಗಿತಗೊಂಡಿದ್ದರೂ, ಪ್ರಧಾನಿ ಮೋದಿ ಅವರು ಯಾವುದೇ ಪರಿಹಾರ ಅಥವಾ ಪ್ರತಿಕ್ರಿಯೆ ನೀಡುವುದಿಲ್ಲ. ಮೋದಿ ಜಿ, ನೀವು ಜವಾಬ್ದಾರರು – ದಯವಿಟ್ಟು ಇದನ್ನು ಪರಿಹರಿಸಿ!” ಎಂದಿದ್ದಾರೆ.
ಕಾರ್ಖಾನೆಯ ಮಾಲೀಕರು ಮತ್ತು ವ್ಯವಸ್ಥಾಪಕರ ಹೆಸರುಗಳನ್ನು ಬಹಿರಂಗಪಡಿಸದ ರಾಹುಲ್, “ಸುಮಾರು 500 ಕಾರ್ಮಿಕರು (ಹೆಚ್ಚಾಗಿ ಉತ್ತರ ಪ್ರದೇಶ ಮತ್ತು ಬಿಹಾರದಿಂದ ವಲಸೆ ಬಂದವರು) ಮೂರು ಘಟಕಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಚೀನೀ ಯಂತ್ರಗಳಲ್ಲಿ ಕಾರ್ಡುರಾಯ್, ಡೆನಿಮ್ ಹಾಗೂ ಹತ್ತಿಯನ್ನು ಉತ್ಪಾದಿಸುತ್ತಾರೆ. ಎಲ್ಲರೂ ಕೈಜೋಡಿಸಿ ಕೆಲಸ ಮಾಡುತ್ತಿದ್ದಾರೆ. ಆದರೆ, ಸುಂಕಗಳು ಹೆಚ್ಚಾಗುತ್ತವೆಯೇ ಅಥವಾ ಕಡಿಮೆಯಾಗುತ್ತವೆಯೇ ಹಾಗೂ ತಮ್ಮ ಉದ್ಯೋಗಗಳ ಪರಿಸ್ಥಿತಿ ಏನಾಗುತ್ತದೆ ಎಂಬುದರ ಬಗ್ಗೆ ತುಂಬಾ ಅನಿಶ್ಚಿತತೆ ಹೊಂದಿದ್ದಾರೆ” ಎಂದು ಹೇಳಿದ್ದಾರೆ.
50% US tariffs and uncertainty are badly hurting India’s textile exporters. Job losses, factory shutdowns and reduced orders are a reality of our ‘Dead Economy’.
— Rahul Gandhi (@RahulGandhi) January 23, 2026
Mr. Modi has offered no relief or even spoken about tariffs, even though more than 4.5 crore jobs and lakhs of… pic.twitter.com/5BcG3AZibg
“ಕಡಿಮೆ ಸುಂಕಗಳನ್ನು ಹೊಂದಿರುವ ಬಾಂಗ್ಲಾದೇಶವು ತನ್ನ ಮಹಿಳಾ ಕಾರ್ಯಪಡೆಯನ್ನು ತೊಡಗಿಸಿಕೊಂಡು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಆ ರಾಷ್ಟ್ರಕ್ಕೆ ಹೋಲಿಸಿದರೆ ಜವಳಿ ರಫ್ತಿನ ಮೇಲಿನ 50% ಸುಂಕಗಳು ಇಲ್ಲಿನ ಜವಳಿ ಉದ್ದಿಮೆದಾರರನ್ನು ನಷ್ಟಕ್ಕೆ ದೂಡುತ್ತವೆ. ಮುಂದಿನ ಐದು ವರ್ಷಗಳಲ್ಲಿ ಜವಳಿ ಉದ್ಯಮವು ಸ್ಥಗಿತಗೊಳ್ಳಬಹುದು ಮತ್ತು ಉದ್ಯೋಗ ನಷ್ಟವನ್ನು ಎದುರಿಸಬಹುದು ಎಂಬ ಆತಂಕದಲ್ಲಿ ಇಲ್ಲಿನ ಕಾರ್ಮಿಕರಿದ್ದಾರೆ” ಎಂದು ಹೇಳಿದ್ದಾರೆ.
ಈ ಲೇಖನ ಓದಿದ್ದೀರಾ?: ಪ್ರಾದೇಶಿಕ ಪಕ್ಷಗಳನ್ನು ನುಂಗುವ ಬಿಜೆಪಿ ತಂತ್ರ ಅರಿಯಲು ಜೆಡಿಎಸ್‌ಗೆ ಸಕಾಲ!
ರಾಹುಲ್ ಗಾಂಧಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕೇಂದ್ರ ಜವಳಿ ಸಚಿವ ಗಿರಿರಾಜ್ ಸಿಂಗ್, “ಭಾರತದ ಜವಳಿ ರಫ್ತುಗಳು ವಿಕಸನಗೊಳ್ಳುತ್ತಿವೆ. ಭೌಗೋಳಿಕ ರಾಜಕೀಯ ಮತ್ತು ವ್ಯಾಪಾರ ಚಲನಶೀಲತೆಯ ನಡುವೆ ರಚನಾತ್ಮಕ ಶಕ್ತಿಯನ್ನು ಪ್ರದರ್ಶಿಸಿವೆ. ಮಾನವ ನಿರ್ಮಿತ ನೂಲು, ಬಟ್ಟೆ ಮತ್ತು ತಯಾರಿಸಿದ ವಸ್ತುಗಳು 4% ಹೆಚ್ಚಳವನ್ನು ದಾಖಲಿಸಿದರೆ, ಸಿದ್ಧ ಉಡುಪುಗಳು ಸುಮಾರು 7% ರಷ್ಟು ಬೆಳವಣಿಗೆಯನ್ನು ದಾಖಲಿಸಿವೆ” ಎಂದು ಹೇಳಿದ್ದಾರೆ.
ಕೆಲವು ವರದಿಗಳ ಪ್ರಕಾರ, ಅಮೆರಿಕದ ಸುಂಕ ಹೇರಿಕೆಯಿಂದಾಗಿ ಭಾರತದ ಜವಳಿ ರಫ್ತುಗಳು ಕಡಿಮೆಯಾಗಿವೆ. ಕಾಟನ್ ಫ್ಯಾಬ್ರಿಕ್ ಎಕ್ಸ್‌ಪೋರ್ಟ್ 30% ಕಡಿಮೆಯಾಗಿದೆ. ಪರಿಣಾಮ, ಜವಳಿ ಉದ್ಯಮದಲ್ಲಿನ 4.5 ಕೋಟಿ ಉದ್ಯೋಗಗಳು ಅಪಾಯದಲ್ಲಿವೆ.




