ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಗೆ ನಿಯೋಜಿಸಲಾಗಿದ್ದ ಬಿಎಲ್‌ಒ ಒಬ್ಬರು ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಅವರು ಎಸ್‌ಐಆರ್ ಕೆಲಸದ ಒತ್ತಡದಿಂದ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಲಾಗಿದೆ.
ರಾಜಸ್ಥಾನದ ಕೋಟ್‌ಪುಟ್ಲಿ-ಬೆಹ್ರೋರ್ ಜಿಲ್ಲೆಯ ವಿಜಯ್ ಗುರ್ಜರ್ ಮೃತ ಬಿಎಲ್‌ಒ ಎಂದು ತಿಳಿದುಬಂದಿದೆ. ವಿಜಯ್ ಅವರು ಕೋಟ್‌ಪುಟ್ಲಿಯ ಸರ್ಕಾರಿ ಸರ್ದಾರ್ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಇತ್ತೀಚೆಗೆ ಆರಂಭವಾದ ಎಸ್‌ಐಆರ್ ಕಾರ್ಯಕ್ಕೆ ಅವರನ್ನು ನಿಯೋಜಿಸಲಾಗಿತ್ತು. ಆದರೆ, ಅವರು ತೀವ್ರ ಕೆಲಸದ ಒತ್ತಡಕ್ಕೆ ಸಿಲುಕಿದ್ದರು ಎಂದು ಹೇಳಲಾಗಿದೆ.
ಗುರುವಾರ ರಾತ್ರಿ ಮನೆಗೆ ಮರಳುವಾಗ ಅವರು ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷಾ ವರದಿ ಬಂದ ಬಳಿಕವೇ ಅವರ ಸಾವಿಗೆ ನಿಖರ ಕಾರಣವೇನು ಎಂಬುದು ಗೊತ್ತಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ (SDM) ರಾಮಾವತಾರ್ ಮೀನಾ, ತಹಶೀಲ್ದಾರ್ ರಾಮಧನ್ ಗುರ್ಜರ್ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಆಸ್ಪತ್ರೆಗೆ ತೆರಳಿದ್ದು, ಪರಿಶೀಲನೆ ನಡೆಸಿದ್ದಾರೆ. ಕೋಟ್‌ಪುಟ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗುರ್ಜರ್ ಕುಸಿದು ಬಿದ್ದಿರುವುದಕ್ಕೆ ಕಾರಣ ಸ್ಪಷ್ಟವಾಗಿಲ್ಲ. ವೈದ್ಯಕೀಯ ವರದಿಯ ನಂತರವೇ ಕಾರಣವನ್ನು ನಿರ್ಧರಿಸಲಾಗುವುದು ಎಂದು ಕೋಟ್‌ಪುಟ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‌ಪಿ) ರಾಜೇಂದ್ರ ಕುಮಾರ್ ಹೇಳಿದ್ದಾರೆ.
“ವಿಜಯ್ ಅವರ ಎಸ್‌ಐಆರ್ ಕೆಲಸವು ಡಿಸೆಂಬರ್ 4ರಂದೇ ಪೂರ್ಣಗೊಂಡಿತ್ತು. ಅವರ ಮೇಲೆ ಯಾವುದೇ ಒತ್ತಡ ಇರಲಿಲ್ಲ. ಅವರಿಗೆ ಯಾವುದೇ ನೋಟಿಸ್ ನೀಡಲಾಗಿಲ್ಲ” ಎಂದು ಎಸ್‌ಡಿಎಂ ಮೀನಾ ಹೇಳಿದ್ದಾರೆ.




