ರೈಲ್ವೇ ಹಳಿ ದಾಟುತ್ತಿದ್ದ ಆನೆಗಳ ಹಿಂಡಿಗೆ ರಾಜಧಾನಿ ಎಕ್ಸ್‌ಪ್ರೆಸ್ ರೈಲು ಡಿಕ್ಕಿ ಹೊಡೆದು 7 ಆನೆಗಳು ಮೃತಪಟ್ಟಿರುವ ಘಟನೆ ಅಸ್ಸಾಂನ ಎನ್.ಎಫ್. ರೈಲ್ವೆಯ ಲುಮ್ಡಿಂಗ್ ವಿಭಾಗದಲ್ಲಿ ಶನಿವಾರ ಮುಂಜಾನೆ ನಡೆದಿದೆ. ಜಮುನಾಮುಖ್-ಕಂಪುರ ರೈಲ್ವೇ ಮಾರ್ಗದಲ್ಲಿ ದುರ್ಘಟನೆ ಸಂಭವಿಸಿದೆ. ರೈಲಿನ ಎಂಜಿನ್ ಮತ್ತು ಐದು ಬೋಗಿಗಳು ಹಳಿತಪ್ಪಿವೆ. ಪ್ರಯಾಣಿಕರಲ್ಲಿ ಯಾವುದೇ ಪ್ರಾಣಾಪಾಯಗಳಾಗಿಲ್ಲ.
ಜಮುನಾಮುಖ್-ಕಂಪುರ ರೈಲ್ವೇ ಮಾರ್ಗದಲ್ಲಿ ಮುಂಜಾನೆ 6:11ರ ಸುಮಾರಿಗೆ ಸೈರಂಗ್-ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್ ತೆರಳುತ್ತಿತ್ತು. ಇದೇ ಸಮಯದಲ್ಲಿ, ಆನೆಗಳು ಹಿಂಡು ಹಳಿ ದಾಟುತ್ತಿತ್ತು. ಈ ವೇಳೆ, ಆನೆಗಳಿಗೆ ರೈಲು ಡಿಕ್ಕಿ ಹೊಡೆದಿದೆ. 7 ಆನೆಗಳು ಮೃತಪಟ್ಟಿವೆ.
ಈವರೆಗೆ ಯಾವುದೇ ಪ್ರಾಣಿಕರ ಸಾವು-ನೋವು ಸಂಭವಿಸಿಲ್ಲ. ಎನ್.ಎಫ್ ರೈಲ್ವೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಅಪಘಾತ ಪರಿಹಾರ ರೈಲುಗಳು ಕೂಡ ಸ್ಥಳಕ್ಕೆ ತಲುಪಿವೆ. ಗುವಾಹಟಿ ರೈಲ್ವೆ ನಿಲ್ದಾಣದಲ್ಲಿ ಸಹಾಯವಾಣಿ ಸಂಖ್ಯೆಗಳನ್ನು ಈಗಾಗಲೇ ಸಕ್ರಿಯಗೊಳಿಸಲಾಗಿದೆ: 0361-2731621 / 2731622 / 2731623.
ಈ ಲೇಖನ ಓದಿದ್ದೀರಾ?: ದೇಶದ ಮುಸ್ಲಿಮರ ಮೇಲೆ ಇಲ್ಲದ ಪ್ರೀತಿ, ವಿದೇಶಿ ಮುಸ್ಲಿಮರ ಮೇಲ್ಯಾಕೆ ಮೋದೀಜಿ?
ಹಳಿತಪ್ಪಿದ ರೈಲು ಗುವಾಹಟಿಗೆ ತೆರಳಿದೆ. ಘಟನೆಯಲ್ಲಿ ಹಾನಿಗೊಳಗಾಗಿದ್ದ ಬೋಗಿಗಳನ್ನು ತೆರವುಗೊಳಿಸಿ, ಹೊಸ ಬೋಗಿಗಳನ್ನು ಸೇರಿಸಲಾಗಿದೆ. ರೈಲು ತನ್ನ ಪ್ರಯಾಣವನ್ನು ಪುನರಾರಂಭಿಸಲಿದೆ.
“ಘಟನೆಯು ‘ಆನೆ ಕಾರಿಡಾರ್ ಎಂದು ಘೋಷಿಸಲಾಗದ ಸ್ಥಳದಲ್ಲಿ ನಡೆದಿದೆ. ಆನೆಗಳ ಹಿಂಡನ್ನು ಗಮನಿಸಿದ ಲೋಕೋ ಪೈಲಟ್ ತುರ್ತು ಬ್ರೇಕ್ ಹಾಕಿದ್ದಾರೆ. ಆದಾಗ್ಯೂ, ಆನೆಗಳಿಗೆ ರೈಲು ಡಿಕ್ಕಿ ಹೊಡೆದಿದೆ” ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.
ಅಸ್ಸಾಂನಲ್ಲಿ ಇಂತಹ ಘಟನೆ ಇದೇ ಮೊದಲಲ್ಲ. ರೈಲು ಡಿಕ್ಕಿ ಹೊಡೆದು ಆನೆಗಳು ಸಾವನ್ನಪ್ಪಿದ ಹಲವಾರು ಘಟನೆಗಳು ನಡೆದಿವೆ. ಕಳೆದ ಕೆಲವು ವರ್ಷಗಳಲ್ಲಿ, ದೇಶಾದ್ಯಂತ 81ಕ್ಕೂ ಹೆಚ್ಚು ಆನೆಗಳು ರೈಲು ಡಿಕ್ಕಿ ಹೊಡೆದು ಸಾವನ್ನಪ್ಪಿವೆ.




