ರಾಜ್ಯಸಭೆಯ ಚಳಿಗಾಲದ ಅಧಿವೇಶನದ ಎರಡನೇ ದಿನವಾದ ಇಂದು (ಡಿ.2) ಆಡಳಿತ ಪಕ್ಷ ಮತ್ತು ವಿಪಕ್ಷಗಳ ನಡುವೆ ತೀವ್ರ ವಾಗ್ವಾದ ನಡೆಯಿತು. ‘ವಂದೇ ಮಾತರಂ’ ಕುರಿತ ಚರ್ಚೆಗಿಂತ ಚುನಾವಣಾ ಸುಧಾರಣೆಗಳ ಕುರಿತ ಚರ್ಚೆಗೆ ಆದ್ಯತೆ ನೀಡಬೇಕೆಂದು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸದನದಲ್ಲಿ ಆಗ್ರಹಿಸಿದರು.
ವಂದೇ ಮಾತರಂ ನಮ್ಮ ಕೊಡುಗೆ
ಕೇಂದ್ರ ಸರ್ಕಾರವು ‘ವಂದೇ ಮಾತರಂ’ ಗೀತೆಯ 150ನೇ ವಾರ್ಷಿಕೋತ್ಸವದ ಚರ್ಚೆಗೆ ಆದ್ಯತೆ ನೀಡಲು ಮುಂದಾದಾಗ, ಖರ್ಗೆ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. “ವಂದೇ ಮಾತರಂ ಬಂದಿರುವುದು ನಮ್ಮಿಂದಲೇ (ಕಾಂಗ್ರೆಸ್) ಹೊರತು ಅವರಿಂದಲ್ಲ (ಬಿಜೆಪಿ/ಸರ್ಕಾರ). ಈ ಗೀತೆಯೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಐತಿಹಾಸಿಕ ನಂಟಿದೆ” ಎಂದು ಖರ್ಗೆ ಪ್ರತಿಪಾದಿಸಿದರು. ತುರ್ತು ಸಮಸ್ಯೆಗಳನ್ನು ಬಿಟ್ಟು ಸರ್ಕಾರ ಒಂದೇ ವಿಷಯವನ್ನು ಪುನರಾವರ್ತಿಸುತ್ತಿದೆ ಎಂದು ಅವರು ಟೀಕಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಭಾಪತಿಗಳು, “ವಂದೇ ಮಾತರಂ ಎಲ್ಲರಿಗೂ ಸೇರಿದ್ದು,” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ವರ್ತಮಾನದ ತಲ್ಲಣಗಳಿಗೆ ನಾರಾಯಣ ಗುರು – ಗಾಂಧಿಯೇ ಉತ್ತರ
ನಿಯಮ 267ರ ಅಡಿ ಚರ್ಚೆಗೆ ಪಟ್ಟು
ಎಸ್‌ಐಆರ್ ಮತ್ತು ಚುನಾವಣಾ ಅಕ್ರಮಗಳ ಬಗ್ಗೆ ನಿಯಮ 267ರ (Rule 267) ಅಡಿ ತುರ್ತು ಚರ್ಚೆ ನಡೆಸಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದರು. “ನಿಯಮ 267ರ ಪ್ರಕಾರ, ಸದನದ ಇತರ ಎಲ್ಲ ಕೆಲಸಗಳನ್ನು ಬದಿಗಿಟ್ಟು, ದೇಶದ ತುರ್ತು ಸಮಸ್ಯೆಗಳಿಗೆ ಮೊದಲ ಆದ್ಯತೆ ನೀಡಬೇಕು. ಇಲ್ಲದಿದ್ದರೆ ಈ ನಿಯಮಕ್ಕೆ ಅರ್ಥವೇ ಇರುವುದಿಲ್ಲ,” ಎಂದು ಅವರು ಹೇಳಿದರು.
ವಿಪಕ್ಷಗಳ ಸಭಾತ್ಯಾಗ
ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು, “ನಾವು ಚರ್ಚೆಗೆ ಸಿದ್ಧರಿದ್ದೇವೆ, ಆದರೆ ಮೊದಲು ವಂದೇ ಮಾತರಂ ಬಗ್ಗೆ ಚರ್ಚೆ ನಡೆಯಬೇಕು,” ಎಂದು ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡರು. ಚುನಾವಣಾ ಸುಧಾರಣೆಯ ಚರ್ಚೆಗೆ ಸರ್ಕಾರ ನಿರ್ದಿಷ್ಟ ಸಮಯ ನಿಗದಿಪಡಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ, ಕಾಂಗ್ರೆಸ್, ಟಿಎಂಸಿ, ಡಿಎಂಕೆ ಸೇರಿದಂತೆ ವಿಪಕ್ಷಗಳು ಘೋಷಣೆಗಳನ್ನು ಕೂಗುತ್ತಾ ಸಭಾತ್ಯಾಗ ಮಾಡಿದವು.





