ಎರಡು ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದ ಕಡತಗಳು ಉತ್ತರ ಪ್ರದೇಶದ ರಾಯ್‌ಬರೇಲಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಿಂದ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಕಡತಗಳ ನಾಪತ್ತೆ ಕುರಿತು ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಕಡತಗಳನ್ನು ಉದ್ದೇಶಪೂರ್ವಕವಾಗಿ ಸಿಗದಂತೆ ಮಾಡಲಾಗಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಸೂಚನೆ ನೀಡಿದೆ.
ಆಸಿಡ್ ದಾಳಿ ಮತ್ತು ಸಾಮೂಹಿಕ ಅತ್ಯಾಚಾರ ಪ್ರಕರಣಗಳಲ್ಲಿ ಪೊಲೀಸರು ಮುಕ್ತಾಯ ವರದಿಗಳನ್ನು ಸಲ್ಲಿಸಿದ್ದರೂ, ಆ ದಾಖಲೆಗಳನ್ನು ಸಂತ್ರಸ್ತರಿಗೆ ನೀಡಲಾಗಿಲ್ಲವೆಂದು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. 2025ರ ನವೆಂಬರ್‌ನಲ್ಲಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ದೀಪಂಕರ್ ದತ್ತ ಮತ್ತು ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಅವರ ಪೀಠವು, ಕಡತಗಳು ನಾಪತ್ತೆಯಾಗಿವೆ ಎಂಬುದನ್ನು ಗಮನಿಸಿತ್ತು. ದಾಖಲೆಗಳ ಕುರಿತು ವಿಚಾರಣಾ ನ್ಯಾಯಾಲಯದಿಂದ ಸೂಕ್ತ ವರದಿ ಪಡೆಯುವಂತೆ ಮತ್ತು ದಾಖಲೆಗಳನ್ನು ಪುನರ್ನಿರ್ಮಿಸುವಂತೆ ಆದೇಶಿಸಿತ್ತು.
ಇದೀಗ, ಸುಪ್ರೀಂ ಕೋರ್ಟ್‌ಗೆ ವರದಿ ನೀಡಿರುವ ಉತ್ತರ ಪ್ರದೇಶ ಸರ್ಕಾರದ ಪರ ವಕೀಲರು, ‘ನಾಪತ್ತೆಯಾಗಿದೆ ಎನ್ನಲಾದ ಕಡತಗಳು ಪತ್ತೆಯಾಗಿವೆ ಎಂದು ತಿಳಿಸಿದ್ದಾರೆ. ಇದನ್ನು ಗಮನಿಸಿದ ಸುಪ್ರೀಂ ಕೋರ್ಟ್, “ನ್ಯಾಯಾಲಯದ ಮಧ್ಯಪ್ರವೇಶದ ನಂತರ ಹಠಾತ್ ದಾಖಲೆಗಳು ಹೇಗೆ ಪತ್ತೆಯಾದವು? ಇಷ್ಟು ವರ್ಷಗಳ ಕಾಲ ಸಂತ್ರಸ್ತರು ಆ ದಾಖಲೆಗಳಿಗಾಗಿ ನಮವಿ ಮಾಡಿದರೂ, ಅವುಗಳ ದೊರೆತಿರಲಿಲ್ಲ. ಈಗ ಹೇಗೆ ದೊರಕಿವೆ. ಈ ಬಗ್ಗೆ ತನಿಖೆ ನಡೆಸಬೇಕು” ಎಂದು ಆದೇಶಿಸಿದೆ.




