ಗಣರಾಜ್ಯೋತ್ಸವವು ಮಕ್ಕಳಿಗೆ ಘನತೆ, ಸಮಾನತೆ ಹಾಗೂ ಸಂವಿಧಾನದ ಬಗ್ಗೆ ಹಿರಿಮೆಯನ್ನು ಕಲಿಸುತ್ತದೆ. ಆದರೆ, ಮಧ್ಯಪ್ರದೇಶದ ಮೈಹಾರ್ ಜಿಲ್ಲೆಯಲ್ಲಿ, ಗಣರಾಜ್ಯೋತ್ಸವದ ಪಾಠವನ್ನು ಹರಿದ ನೋಟ್‌ಬುಕ್ ಪುಟಗಳಲ್ಲಿ ನೀಡಲಾಗಿದೆ. ಭಟ್ಗವಾನ್ ಗ್ರಾಮದ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಗಣರಾಜ್ಯೋತ್ಸವದ ವಿಶೇಷ ಊಟವನ್ನು ತಟ್ಟೆಗಳ ಬದಲಾಗಿ, ಹಳೆಯ ನೋಟ್‌ಬುಕ್‌ಗಳು ಮತ್ತು ಪುಸ್ತಕಗಳಿಂದ ಹರಿದ ಕಾಗದದ ಹಾಳೆಗಳಲ್ಲಿ ಬಡಿಸಲಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಆಕ್ರೋಶ ವ್ಯಕ್ತವಾಗಿದೆ.
ಜನವರಿ 26ರಂದು ಮಧ್ಯಪ್ರದೇಶ ಸರ್ಕಾರದ ಸೂಚನೆಯಂತೆ ಶಾಲೆಯಲ್ಲಿ, ಪೂರಿ ಮತ್ತು ಹಲ್ವಾ ಅಡುಗೆ ಮಾಡಲಾಗಿತ್ತು. ಮಕ್ಕಳನ್ನು ನೆಲದ ಮೇಲೆ ಕೂರಿಸಿ, ತಟ್ಟೆ ಅಥವಾ ಎಲೆಗಳ ಬದಲಿಗೆ ಹಳೆಯ ಪುಸ್ತಕಗಳ ಹಾಳೆಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗಿದೆ. ಅದರ ಮೇಲೆ ಆಹಾರವನ್ನು ಬಡಿಸಲಾಗಿದೆ. ಊಟ ಬಡಿಸಿದ ಆ ಹಾಳೆಗಳಲ್ಲಿ ಶಾಯಿ (ಇಂಕ್), ಧೂಳು ಹಾಗೂ ಕೊಳಕು ತುಂಬಿತ್ತೆಂದು ಆರೋಪಿಸಲಾಗಿದೆ.
ಗಂಭೀರ ಅಂಶವೆಂದರೆ, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಬಳಸಿ-ಬಿಸಾಡಬಹುದಾದ ತಟ್ಟೆಗಳನ್ನು ಖರೀದಿಸಲು ಈಗಾಗಲೇ ಸರ್ಕಾರವು ಹಣವನ್ನು ಬಿಡುಗಡೆ ಮಾಡಲಾಗಿದೆ. ಆದರೂ, ಗಣರಾಜ್ಯೋತ್ಸವದಂದು, ಆ ಶಾಲೆಯಲ್ಲಿ ಒಂದೇ ಒಂದು ತಟ್ಟೆಯೂ ಕಾಣಿಸಲಿಲ್ಲ ಎಂದು ವರದಿಯಾಗಿದೆ.
पिछले साल श्योपुर अब गणतंत्र दिवस के दिन मैहर से तस्वीर आई है… बच्चों को हलवा-पूरी परोसा गया लेकिन किताब-कॉपी के फटे पन्नों में..
— Anurag Dwary (@Anurag_Dwary) January 27, 2026
गणतंत्र दिवस बच्चों को सम्मान, समानता और संविधान पर गर्व सिखाने का दिन है!
नेताजी मेहमान होते तो ये सम्मान थाली में परोसा जाता… pic.twitter.com/KWOyGzXdma
ಮುದ್ರಿತ ಅಥವಾ ಬರೆಯಲ್ಪಟ್ಟ ಕಾಗದದ ಮೇಲೆ ಆಹಾರವನ್ನು ಬಡಿಸುವುದು ಆರೋಗ್ಯಕ್ಕೆ ಅಪಾಯಕಾರಿ ಎಂದು ತಜ್ಞರು ಎಚ್ಚರಿಸಿದ್ದಾರೆ. ಮುದ್ರಣ ಶಾಯಿಯಲ್ಲಿ ಸೀಸ ಮತ್ತು ಇತರ ಹಾನಿಕಾರಕ ರಾಸಾಯನಿಕಗಳು ಇರುತ್ತವೆ. ಇದು ಬಿಸಿ ಆಹಾರಕ್ಕೆ ಸೇರಿ, ಮಕ್ಕಳಲ್ಲಿ ಗಂಭೀರ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಹೇಳಿದ್ದಾರೆ.
ವಿಡಿಯೋಗಳು ವೈರಲ್ ಆದ ಬಳಿಕ, ಪೋಷಕರು ಮತ್ತು ಗ್ರಾಮಸ್ಥರು ಶಾಲಾ ಶಿಕ್ಷಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಹಿರಿಯ ಅಧಿಕಾರಿ ವಿಷ್ಣು ತ್ರಿಪಾಠಿ, “ವಿಡಿಯೋವನ್ನು ಗಮನಿಸಿದ್ದೇವೆ. ಶಾಲೆಗೆ ಭೇಟಿ ನೀಡಿ ತನಿಖೆ ನಡೆಸುವಂತೆ ಬ್ಲಾಕ್ ಸಂಪನ್ಮೂಲ ಸಂಯೋಜಕರಿಗೆ (ಬಿಆರ್‌ಸಿ) ನಿರ್ದೇಶಿಸಿದ್ದೇನೆ. ತನಿಖಾ ವರದಿಯ ಆಧಾರದ ಮೇಲೆ ಜವಾಬ್ದಾರಿಯುತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದ್ದಾರೆ.
ಮಧ್ಯಪ್ರದೇಶದ ಆಡಳಿತಾರೂಢ ಬಿಜೆಪಿ ತನ್ನ 2023ರ ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಮಧ್ಯಾಹ್ನದ ಊಟದ ಗುಣಮಟ್ಟವನ್ನು ಸುಧಾರಿಸುವ ಭರವಸೆ ನೀಡಿತ್ತು. ಪಂಚಾಯತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಶಾಲಾ ಶಿಕ್ಷಣದಂತಹ ಇಲಾಖೆಗಳೊಂದಿಗೆ ಮಧ್ಯಾಹ್ನದ ಊಟದ ಜೊತೆಗೆ ಸಮತೋಲಿತ ಪೋಷಣೆ ಮತ್ತು ಟೆಟ್ರಾ-ಪ್ಯಾಕ್ಡ್ ಹಾಲನ್ನು ಒದಗಿಸುವ ಪ್ರಸ್ತಾಪಗಳನ್ನೂ ಚರ್ಚಿಸಲಾಗಿತ್ತು. ಆದರೆ, ಮೈಹಾರ್ ಜಿಲ್ಲೆಯ ಈ ವಿಡಿಯೋಗಳು ಬಿಜೆಪಿ ಭರವಸೆಗಳಿಗೆ ತೀವ್ರವಾಗಿ ವ್ಯತಿರಿಕ್ತವಾಗಿವೆ.




