ಭಾರತದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಿಗೊಳಸಬೇಕೆಂದು ಆಗ್ರಹಿಸಿ ವಿಪಕ್ಷಗಳು ನಿರ್ಣಯ ಮಂಡಿಸಲು ಮುಂದಾಗಿವೆ. ನಿರ್ಣಯ ಮಂಡನೆಗೆ ಒತ್ತಾಯಿಸಿರುವ ನೋಟಿಸ್‌ಗೆ 130 ಲೋಕಸಭಾ ಸದಸ್ಯರು ಮತ್ತು 63 ರಾಜ್ಯಸಭಾ ಸದಸ್ಯರು ಸಹಿ ಹಾಕಿದ್ದಾರೆ ಎಂದು ವರದಿಯಾಗಿದೆ.
ಮೂಲಗಳ ಪ್ರಕಾರ, ಶುಕ್ರವಾರ (ಇಂದು) ಲೋಕಸಭೆ ಅಥವಾ ಲೋಕಸಭೆಯಲ್ಲಿ ನೋಟಿಸ್ ಸಲ್ಲಿಸುವ ಸಾಧ್ಯತೆಯಿದೆ. ಜ್ಞಾನೇಶ್ ಅವರನ್ನು ಪದಚ್ಯುತಿಗೊಳಿಸಬೇಕೆಂದು ಹಲವಾರು ಸಂಸದರು ಒತ್ತಾಯಿಸಿದ್ದಾರೆ. ನಿರ್ಣಯ ಮಂಡನೆಗೆ ಅಗತ್ಯವಿರುವ ಸಂಸದರ ಬೆಂಬಲದ ಸಂಖ್ಯೆಗಳನ್ನು ಈಗಾಗಲೇ ಪಡೆಯಲಾಗಿದೆ. ಇನ್ನೂ, ಹಲವರು ನೋಟಿಸ್‌ಗೆ ಸಹಿ ಹಾಕಲು ಮುಂದೆ ಬಂದಿದ್ದಾರೆ. ಇಂಡಿಯಾ ಮೈತ್ರಿಕೂಟದಿಂದ ಹೊರಗಿರುವ ಎಎಪಿ ಕೂಡ ನೋಟಿಸ್‌ಗೆ ಸಹಿ ಹಾಕಿದೆ ಎಂದು ವಿಪಕ್ಷಗಳು ಹೇಳಿರುವುದಾಗಿ ತಿಳಿದುಬಂದಿದೆ.
ನಿಯಮಗಳ ಪ್ರಕಾರ, ಲೋಕಸಭೆಯಲ್ಲಿ ಸಿಇಸಿಯನ್ನು ಪದಚ್ಯುತಗೊಳಿಸುವಂತೆ ಕೋರಿ ಸಲ್ಲಿಸುವ ನೋಟಿಸ್‌ಗೆ ಕನಿಷ್ಠ 100 ಸಂಸದರು ಸಹಿ ಹಾಕಬೇಕು ಮತ್ತು ರಾಜ್ಯಸಭೆಯಲ್ಲಿ 50 ಸದಸ್ಯರು ಸಹಿ ಹಾಕಬೇಕಾಗುತ್ತದೆ. ಈಗಾಗಲೇ, ನೋಟಿಸ್‌ಗೆ 200ಕ್ಕೂ ಹೆಚ್ಚು ಸಂಸದರು ಸಹಿ ಹಾಕಿದ್ದಾರೆ.
ನೋಟಿಸ್‌ನಲ್ಲಿ ಸಿಇಸಿ ವಿರುದ್ಧ ಏಳು ಆರೋಪಗಳನ್ನು ಪಟ್ಟಿ ಮಾಡಲಾಗಿದೆ. ಅವುಗಳಲ್ಲಿ ‘ಪಕ್ಷಪಾತ ಮತ್ತು ತಾರತಮ್ಯದ ನಡವಳಿಕೆ’, ‘ಚುನಾವಣಾ ವಂಚನೆಯ ತನಿಖೆಗೆ ಉದ್ದೇಶಪೂರ್ವಕ ಅಡಚಣೆ’ ಹಾಗೂ ‘ಸಾಮೂಹಿಕ ಮತದಾನದ ಹಕ್ಕು ನಿರಾಕರಣೆ’ ಆರೋಪಗಳು ಪ್ರಮುಖವಾದವು ಎಂದು ವರದಿಯಾಗಿದೆ.
ಜ್ಞಾನೇಶ್ ಕುಮಾರ್ ಹಲವಾರು ಸಂದರ್ಭಗಳಲ್ಲಿ ಆಡಳಿತಾರೂಢ ಬಿಜೆಪಿಗೆ ಸಹಾಯ ಮಾಡಿದ್ದಾರೆ. ವಿಶೇಷವಾಗಿ ಈಗ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಮೂಲಕ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷಕ್ಕೆ ಸಹಾಯ ಮಾಡುವ ಗುರಿಯನ್ನು ಹೊಂದಿದೆ ಎಂದು ವಿಪಕ್ಷಗಳು ಆರೋಪಿಸಿವೆ.




