ದೇಶದ ಅತ್ಯಂತ ಶ್ರೀಮಂತ ಸ್ಥಳೀಯ ಸಂಸ್ಥೆಯಾದ ಬೃಹನ್‌ಮುಂಬೈ ಮಹಾನಗರ ಪಾಲಿಕೆಯ (ಬಿಎಂಸಿ) ಮೇಯರ್ ಮತ್ತು ಉಪಮೇಯರ್ ಸ್ಥಾನಗಳಿಗೆ ಮಹಾಯುತಿ ಮೈತ್ರಿಕೂಟವು ಶನಿವಾರ ತನ್ನ ಅಭ್ಯರ್ಥಿಗಳನ್ನು ಅಧಿಕೃತವಾಗಿ ಪ್ರಕಟಿಸಿದೆ.
ಮೇಯರ್ ಸ್ಥಾನಕ್ಕೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ಹಿರಿಯ ಕಾರ್ಪೊರೇಟರ್ ರಿತು ತಾವಡೆ ಅವರನ್ನು ಆಯ್ಕೆ ಮಾಡಲಾಗಿದ್ದು, ಉಪಮೇಯರ್ ಸ್ಥಾನಕ್ಕೆ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯ ಸಂಜಯ್ ಘಾಡಿ ಅವರನ್ನು ಕಣಕ್ಕಿಳಿಸಲಾಗಿದೆ. ಈ ಮೂಲಕ ಕಳೆದ 25 ವರ್ಷಗಳಿಂದ ಬಿಎಂಸಿಯಲ್ಲಿ ಅಧಿಕಾರ ಹೊಂದಿದ್ದ ಉದ್ಧವ್ ಠಾಕ್ರೆ ಬಣದ ಹಿಡಿತವನ್ನು ಮುರಿಯಲು ಮೈತ್ರಿಕೂಟ ಸಜ್ಜಾಗಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಜನಪ್ರತಿನಿಧಿಗಳ ಘನತೆ ಇಲ್ಲದ ಮಾತಿಗೆ ಲಗಾಮು ಬೀಳಬೇಕು
ಘಾಟ್‌ಕೋಪರ್ ಪ್ರದೇಶದ ವಾರ್ಡ್ ಸಂಖ್ಯೆ 132ರ ಕಾರ್ಪೊರೇಟರ್ ಆಗಿರುವ ರಿತು ತಾವಡೆ ಅವರು ಈ ಹಿಂದೆ ಬಿಎಂಸಿ ಶಿಕ್ಷಣ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಇತ್ತ ಉಪಮೇಯರ್ ಸ್ಥಾನಕ್ಕೆ ಸ್ಪರ್ಧಿಸಲಿರುವ ಸಂಜಯ್ ಘಾಡಿ ಅವರು ವಾರ್ಡ್ ಸಂಖ್ಯೆ 5ರಿಂದ ಆಯ್ಕೆಯಾದ ಶಿವಸೇನಾ ಕಾರ್ಪೊರೇಟರ್ ಆಗಿದ್ದಾರೆ. ಮೇಯರ್ ಹುದ್ದೆಯು ಸಾಮಾನ್ಯ ವರ್ಗದ ಮಹಿಳಿಗೆ ಮೀಸಲಾಗಿದ್ದು, ಫೆಬ್ರವರಿ 11ರಂದು ಮೇಯರ್ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಮಹಾಯುತಿ ಒಕ್ಕೂಟವು ಪಾಲಿಕೆಯಲ್ಲಿ ಸ್ಪಷ್ಟ ಬಹುಮತ ಹೊಂದಿರುವುದರಿಂದ ಈ ಇಬ್ಬರೂ ಅಭ್ಯರ್ಥಿಗಳ ಆಯ್ಕೆ ಬಹುತೇಕ ಖಚಿತವಾಗಿದೆ.
ಇತ್ತೀಚೆಗೆ ನಡೆದ 227 ಸದಸ್ಯ ಬಲದ ಬಿಎಂಸಿ ಚುನಾವಣೆಯಲ್ಲಿ ಮಹಾಯುತಿ ಒಕ್ಕೂಟವು ಬಹುಮತ ಪಡೆದಿತ್ತು. ಬಿಜೆಪಿಯು 89 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೆ ಅದರ ಮೈತ್ರಿ ಪಕ್ಷವಾದ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯು 29 ಸ್ಥಾನಗಳಲ್ಲಿ ಜಯಗಳಿಸಿದೆ. ಈ ಮೂಲಕ ಮೈತ್ರಿಕೂಟದ ಒಟ್ಟು ಬಲ 121ಕ್ಕೆ ಏರಿಕೆಯಾಗಿ ಪಾಲಿಕೆಯ ಅಧಿಕಾರದ ಚುಕ್ಕಾಣಿ ಹಿಡಿಯಲು ಬೇಕಾದ ಮ್ಯಾಜಿಕ್ ಸಂಖ್ಯೆ 114 ಅನ್ನು ದಾಟಿತ್ತು.
ಇನ್ನೊಂದೆಡೆ ವಿರೋಧ ಪಕ್ಷಗಳ ಸಾಲಿನಲ್ಲಿ, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ (ಯುಬಿಟಿ) 65 ಸ್ಥಾನಗಳಿಗೆ ಸೀಮಿತಗೊಂಡರೆ, ಕಾಂಗ್ರೆಸ್ 24 ಸ್ಥಾನಗಳನ್ನು ಗೆದ್ದಿದೆ. ಉಳಿದಂತೆ ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ 8 ಸ್ಥಾನಗಳನ್ನು, ರಾಜ್ ಠಾಕ್ರೆ ಅವರ ಎಂಎನ್‌ಎಸ್ 6 ಸ್ಥಾನಗಳನ್ನು ಮತ್ತು ಸಮಾಜವಾದಿ ಪಕ್ಷವು 2 ಸ್ಥಾನಗಳನ್ನು ಗೆದ್ದುಕೊಂಡಿವೆ.





