ಗ್ರೇಟರ್ ನೊಯ್ಡಾದಲ್ಲಿ ನಿರ್ಮಾಣ ಹಂತದ ಪ್ರದೇಶದ ಬಳಿ ಕಾರು ಹೊಂಡಕ್ಕೆ ಬಿದ್ದು ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರು ದಾರುಣವಾಗಿ ಮೃತಪಟ್ಟ ಘಟನೆಯನ್ನು ಮುಂದಿಟ್ಟುಕೊಂಡು, ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ದುರಂತಕ್ಕೆ ಹಣದ ಕೊರತೆ ಕಾರಣವಲ್ಲ, ಬದಲಾಗಿ ವ್ಯವಸ್ಥೆಯ ‘ಉತ್ತರದಾಯಿತ್ವದ ಕೊರತೆ’ ಕಾರಣ ಎಂದು ಅವರು ಕಿಡಿಕಾರಿದ್ದಾರೆ.
ಈ ಕುರಿತು ಮಂಗಳವಾರ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ಸರ್ಕಾರದ ವೈಫಲ್ಯವನ್ನು ಟೀಕಿಸಲು “TINA” (There Is No Accountability – ಉತ್ತರದಾಯಿತ್ವವೇ ಇಲ್ಲ) ಎಂಬ ಪದವನ್ನು ಬಳಸಿದ್ದಾರೆ. “ಭಾರತದ ನಗರಗಳ ಕುಸಿತಕ್ಕೆ ಅಥವಾ ಇಂತಹ ಅವಘಡಗಳಿಗೆ ಹಣ, ತಂತ್ರಜ್ಞಾನ ಅಥವಾ ಪರಿಹಾರಗಳ ಕೊರತೆ ಕಾರಣವಲ್ಲ. ಇದಕ್ಕೆ ಪ್ರಮುಖ ಕಾರಣ ಉತ್ತರದಾಯಿತ್ವ ಇಲ್ಲದಿರುವುದು. ರಸ್ತೆಗಳು ಕೊಲ್ಲುತ್ತಿವೆ, ಸೇತುವೆಗಳು ಕೊಲ್ಲುತ್ತಿವೆ, ಬೆಂಕಿ ಅವಘಡಗಳು ಕೊಲ್ಲುತ್ತಿವೆ,” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ರಾತ್ರಿ ದಟ್ಟ ಮಂಜಿನ ನಡುವೆ ಪ್ರಯಾಣಿಸುತ್ತಿದ್ದ 27 ವರ್ಷದ ಎಂಜಿನಿಯರ್ ಯುವರಾಜ್ ಮೆಹ್ತಾ ಅವರ ಕಾರು, ಗ್ರೇಟರ್ ನೊಯ್ಡಾದ ಸೆಕ್ಟರ್ 150ರ ಪ್ರದೇಶದಲ್ಲಿ ರಸ್ತೆಯಿಂದ ಜಾರಿ ಸುಮಾರು 20 ಅಡಿ ಆಳದ ನೀರು ತುಂಬಿದ್ದ ಗುಂಡಿಗೆ ಬಿದ್ದಿತ್ತು. ಪರಿಣಾಮವಾಗಿ ಯುವರಾಜ್ ಮೃತಪಟ್ಟಿದ್ದರು. ಈ ಸ್ಥಳವು ಅಪಘಾತ ವಲಯವಾಗಿದ್ದು, ಬ್ಯಾರಿಕೇಡ್‌ಗಳು ಮತ್ತು ರೇಡಿಯಂ ರಿಫ್ಲೆಕ್ಟರ್‌ಗಳನ್ನು ಅಳವಡಿಸುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಅಧಿಕಾರಿಗಳು ಮತ್ತು ಬಿಲ್ಡರ್‌ಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಮೃತ ಯುವಕನ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಕೇಂದ್ರದ ತಾರತಮ್ಯ ನೀತಿಯನ್ನು ಪ್ರಶ್ನಿಸುವುದು ತಪ್ಪಲ್ಲ
ಪೊಲೀಸರ ನಿರ್ಲಕ್ಷ್ಯದ ಆರೋಪ
ಮೃತ ಯುವರಾಜ್ ಅವರ ತಂದೆ ಪೊಲೀಸರು ಮತ್ತು ರಕ್ಷಣಾ ಸಂಸ್ಥೆಗಳ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. “ಘಟನಾ ಸ್ಥಳಕ್ಕೆ ಪೊಲೀಸರು ಬಂದಾಗ ನನ್ನ ಮಗ ಇನ್ನೂ ಬದುಕಿದ್ದ ಮತ್ತು ಸಹಾಯಕ್ಕಾಗಿ ಕೂಗುತ್ತಿದ್ದ. ಆತ ಈಜಲು ಬಾರದೆ ಕಾರನ್ನು ಹಿಡಿದುಕೊಂಡು ಪ್ರಾಣ ಉಳಿಸಿಕೊಳ್ಳಲು ಹೋರಾಡುತ್ತಿದ್ದ. ಆದರೆ, ಸ್ಥಳದಲ್ಲಿದ್ದ ಪೊಲೀಸರಿಗೆ ಈಜಲು ಬರುತ್ತಿರಲಿಲ್ಲವಾದ್ದರಿಂದ ಅವರು ನೀರಿಗಿಳಿಯಲಿಲ್ಲ. ಕಣ್ಣೆದುರೇ ನನ್ನ ಮಗ ಮುಳುಗಿ ಹೋದ,” ಎಂದು ಅವರು ಕಣ್ಣೀರು ಹಾಕಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, “ಪೊಲೀಸ್ ಹುದ್ದೆಗೆ ಸೇರುವವರಿಗೆ ಈಜು ಬರುವುದು ಕಡ್ಡಾಯವೇನಲ್ಲ,” ಎಂದು ಬೇಜವಾಬ್ದಾರಿ ಹೇಳಿಕೆ ನೀಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.





