ಜನನ ದರ ಕುಸಿಯುತ್ತಿರುವುದನ್ನು ಹೆಚ್ಚಿಸಲು ಎರಡು ಅಥವಾ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೆರುವ ದಂಪತಿಗಳಿಗೆ 25,000 ರೂ. ಹೆರಿಗೆ ಪ್ರೋತ್ಸಾಹ ಧನ ನೀಡುವುದಾಗಿ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ದು ಹೇಳಿದ್ದಾರೆ. ಈ ಬಗ್ಗೆ, ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ತಿಳಿಸಿದ್ದಾರೆ.
ವಿಧಾನಸಭೆಯನ್ನುದ್ದೇಶಿಸಿ ಮಾತನಾಡಿದ ನಾಯ್ಡು, “ಆಂಧ್ರಪ್ರದೇಶದ ಒಟ್ಟು ಫಲವತ್ತತೆ ದರವು (ಟಿಎಫ್‌ಆರ್) ಪ್ರಸ್ತುತ 1.5 ಇದೆ. ಇದನ್ನು 2.1ಕ್ಕೆ ಹೆಚ್ಚಿಸುವ ಗುರಿ ಸರ್ಕಾರಕ್ಕಿದೆ” ಎಂದು ಹೇಳಿದ್ದಾರೆ.
“ನಾವು ಒಂದು ಹೊಸ ಕಾರ್ಯಕ್ರಮದ ಕುರಿತು ಚಿಂತಿಸುತ್ತಿದ್ದೇವೆ. ಎರಡನೇ ಮಗು ಅಥವಾ ಅದಕ್ಕಿಂತ ಹೆಚ್ಚಿನ ಮಗುವನ್ನು ಹೊಂದುವ ಪೋಷಕರಿಗೆ ಹೆರಿಗೆ ಸಮಯದಲ್ಲಿ ನಾವು 25,000 ರೂ. ಪ್ರೋತ್ಸಾಹ ಧನ ನೀಡುತ್ತೇವೆ. ಇದು ದೊಡ್ಡ ಬದಲಾವಣೆ ತರುತ್ತದೆ. ನಾವು ಅದನ್ನು ಮಾಡಲು ಸಾಧ್ಯವಾದರೆ, ಅದು ತುಂಬಾ ಉಪಯುಕ್ತವಾಗಿರುತ್ತದೆ” ಎಂದು ನಾಯ್ಡು ಹೇಳಿಕೊಂಡಿದ್ದಾರೆ.
ಜನಸಂಖ್ಯಾ ನಿರ್ವಹಣೆ ಕುರಿತು ಮಾತನಾಡಿದ ನಾಯ್ಡು, ವಯಸ್ಸಾದ ಜನಸಂಖ್ಯೆಯಿಂದಾಗಿ ಹಲವಾರು ದೇಶಗಳು ಸವಾಲುಗಳನ್ನು ಎದುರಿಸುತ್ತಿವೆ ಎಂದಿದ್ದಾರೆ.
ಮಾರ್ಚ್ ಅಂತ್ಯದ ವೇಳೆಗೆ ಜನಸಂಖ್ಯಾ ನಿರ್ವಹಣೆಯ ಕುರಿತು ನೀತಿಯನ್ನು ಹೊರತರಲು ಮತ್ತು ಏಪ್ರಿಲ್‌ನಿಂದ ಅದನ್ನು ಜಾರಿಗೆ ತರಲು ಸರ್ಕಾರ ಯೋಜಿಸಿದೆ ಎಂದು ವಿವರಿಸಿದ್ದಾರೆ.




