ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖಂಡನನ್ನು ಕೇರಳದ ಮುಕ್ಕಂ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಕೇರಳದ ಕೋಝಿಕ್ಕೋಡ್ ಜಿಲ್ಲೆಯ ಮುಕ್ಕಂ ತೇಚಿಯಾಡ್ ಮುರಿಯನ್ ನಿವಾಸಿ ಬಾಬುರಾಜನ್ (50) ಬಂಧಿತ ಆರೋಪಿ. ಬಾಬುರಾಜನ್ ವಿರುದ್ಧ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗೆ, ಬಾಲಕಿಯ ನಡವಳಿಕೆಯಲ್ಲಿ ತೀವ್ರ ಬದಲಾವಣೆಗಳಾಗಿದ್ದವು. ಅದನ್ನು ಗಮನಿಸಿದ ಶಿಕ್ಷಕರು ಶಾಲೆಯಲ್ಲಿ ಕೌನ್ಸೆಲಿಂಗ್ ನಡೆಸಿದ್ದರು. ಆಗ, ಬಾಲಕಿ ತನ್ನ ಮೇಲಾದ ದೌರ್ಜನ್ಯದ ಬಗ್ಗೆ ಹೇಳಿಕೊಂಡಿದ್ದಾಳೆ. ಬಳಿಕ, ಶಿಕ್ಷಕರು ಆರೋಪಿ ಬಾಬುರಾಜನ್ ವಿರುದ್ಧ ದೂರು ದಾಖಲಿಸಿದ್ದಾರೆ.
ತನಿಖೆಯ ವೇಳೆ ಬಾಲಕಿ ಕೆಲವು ದಿನಗಳ ಹಿಂದೆ ಹಲವು ಬಾರಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾಳೆ. ಆರೋಪಿ ಬಾಬುರಾಜನ್ ವಿದ್ಯಾರ್ಥಿನಿಯ ಕುಟುಂಬಕ್ಕೆ ಆಪ್ತನಾಗಿದ್ದ. ಈ ಆಪ್ತತೆಯನ್ನು ದುರುಪಯೋಗ ಮಾಡಿಕೊಂಡು ಬಾಲಕಿ ಮೇಲೆ ದೌರ್ಜನ್ಯ ಎಸಗಿದ್ದಾನೆ ಎಂಬುದು ತಿಳಿದುಬಂದಿದೆ.
ಆರೋಪಿ ಬಾಬುರಾಜನ್ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನಲ್ಲಿ ಸಕ್ರಿಯ ಕಾರ್ಯಕರ್ತನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.





