ಆರ್‌ಎಸ್‌ಎಸ್ – ತಾಲಿಬಾನ್: ಒಂದೇ ನಾಣ್ಯದ ಎರಡು ಮುಖಗಳಲ್ಲವೇ?

Date:

ಆರ್‌ಎಸ್‌ಎಸ್‌ ಮತ್ತು ತಾಲಿಬಾನ್- ಈ ಎರಡೂ ಸಂಘಟನೆಗಳು ತಮ್ಮ ರಾಷ್ಟ್ರಗಳಲ್ಲಿ ಅಲ್ಪಸಂಖ್ಯಾತರನ್ನು ಎರಡನೇ ದರ್ಜೆಯ ನಾಗರಿಕರು ಎಂದು ನಂಬಿವೆ, ವಾದಿಸುತ್ತವೆ, ಹೊರಹಾಕಲು ಹವಣಿಸುತ್ತವೆ.

ಸಾರ್ವಜನಿಕ ಸ್ಥಳಗಳಲ್ಲಿ ಜೋಡಿಗಳು (ಸಂಗಾತಿಗಳು) ಕೈ ಹಿಡಿದುಕೊಂಡು ನಡೆಯುವಂತಿಲ್ಲವೆಂದು ಬೆದರಿಸುವುದು, ಪಾಶ್ಚಿಮಾತ್ಯ ದೇಶಗಳಂತೆ ಮದ್ಯಪಾನ, ಪಾರ್ಟಿ ಹಾಗೂ ನೃತ್ಯಗಳಲ್ಲಿ ಭಾಗಿಯಾಗುವ ಕಾರಣಕ್ಕೆ ಹಿಂಸಾತ್ಮಕ ಹಲ್ಲೆ ನಡೆಸುವುದು, ಉದ್ಯಾನವನಗಳಲ್ಲಿ ಸಿಕ್ಕಿಬಿದ್ದ ಪ್ರೇಮಿಗಳು/ಸ್ನೇಹಿತರ ಕೂದಲು ಕತ್ತರಿಸಿ ಮುಖಕ್ಕೆ ಕಪ್ಪು ಬಣ್ಣ ಬಳಿಯುವುದು, ಪ್ರೇಮಿಗಳ ದಿನ ಅಶ್ಲೀಲ ಕೃತ್ಯಗಳನ್ನು ಪ್ರೋತ್ಸಾಹಿಸುತ್ತದೆ ಎಂದು ವಾದಿಸುವುದು, ಅಂದು ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಂಡ ಜೋಡಿಗಳಿಗೆ ಬಲವಂತವಾಗಿ ಮದುವೆ ಮಾಡಿಸುವುದು– ಇವು ಅನೈತಿಕ ಪೊಲೀಸ್‌ಗಿರಿಯ ಕೆಲವು ಸ್ಯಾಂಪಲ್‌ಗಳು.

ಇದೆಲ್ಲವೂ ನಡೆಯುವುದು, ನಡೆಯುತ್ತಿರುವುದು ಪ್ರಸ್ತುತ ಭಾರತದ ಪ್ರವಾಸದಲ್ಲಿರುವ ತಾಲಿಬಾನ್ ಸಚಿವರ ತವರು ತಾಲಿಬಾನ್ ಆಡಳಿತ ಇರುವ ಅಫ್ಘಾನಿಸ್ತಾನದಲ್ಲಲ್ಲ, ಭಾರತದಲ್ಲಿ. ದೇಶಾದ್ಯಂತ ವ್ಯಾಪಿಸಿರುವ ಹಿಂದುತ್ವ ಸಂಘಟನೆಗಳು, ಉಪಸಂಘಟನೆಗಳು ಇಂತಹ ಕ್ರೌರ್ಯಗಳನ್ನು ಎಸಗುತ್ತಿವೆ. ಭಾರತೀಯತೆ, ಸಂಸ್ಕೃತಿ ರಕ್ಷಣೆಯ ಹೆಸರಿನಲ್ಲಿ ಜನರನ್ನು ಹಿಂಸಿಸುತ್ತಿವೆ, ಕೊಲ್ಲುತ್ತಿವೆ.

2021ರಲ್ಲಿ ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡಾಗ, ಅವರು ಷರಿಯಾ (ಧಾರ್ಮಿಕ ಜೀವನ ಸಂಹಿತೆ) ಕಾನೂನನ್ನು ದೇಶದ ಸರ್ವೋಚ್ಚ ಕಾನೂನಾಗಿ ಅಫ್ಘನ್‌ ಮೇಲೆ ಹೇರಿದರು. ತಾಲಿಬಾನ್‌ ಸರ್ಕಾರವು ಷರಿಯಾ ಕಾನೂನಿನ ಕಠಿಣ ಕ್ರಮಗಳನ್ನು ಜಾರಿಗೊಳಿಸಿದೆ. ಇದು ಉಡುಗೆ ತೊಡುಗೆ, ಆಹಾರ, ಮದುವೆ ಹಾಗೂ ಮಹಿಳೆಯರಿಗೆ ಇತರ ವಿಷಯಗಳಿಗೆ ಕಟ್ಟುನಿಟ್ಟಿನ ನಿಯಮಗಳನ್ನು ವಿಧಿಸುತ್ತದೆ ಮತ್ತು ನಿಯಂತ್ರಿಸುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಭಾರತದಲ್ಲಿ, ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಮತ್ತು ಅದರ ಅಸಂಖ್ಯಾತ ಹಿಂದುತ್ವವಾದಿ ಗುಂಪುಗಳು ಹಿಂದು ಸಂಸ್ಕೃತಿಯ ನೆಪದಲ್ಲಿ ಹಿಂದು ಸಮುದಾಯವನ್ನು ಒಗ್ಗೂಡಿಸುತ್ತೇವೆ, ಬಲಪಡಿಸುತ್ತೇವೆ, ಬೆಳೆಸುತ್ತೇವೆ, ಹಿಂದುರಾಷ್ಟ್ರ ಸ್ಥಾಪಿಸುತ್ತೇವೆಂದು ಹೇಳಿಕೊಳ್ಳುತ್ತಿವೆ. ಮುಸ್ಲಿಮರು, ಕ್ರಿಶ್ಚಿಯನ್ನರನ್ನು ಅನ್ಯರು ಎಂದು ಕರೆದು, ಅವರ ಮೇಲೆ ದ್ವೇಷಾಸೂಯೆ ಹುಟ್ಟುವಂತೆ ಮಾಡುತ್ತಿದ್ದಾರೆ. ಜನರ ಮನದಲ್ಲಿ ಕೋಮುದ್ವೇಷದ ವಿಷ ಬಿತ್ತುತ್ತಿದ್ದಾರೆ.

ಆರ್‌ಎಸ್‌ಎಸ್‌ ಮತ್ತು ತಾಲಿಬಾನ್- ಈ ಎರಡೂ ಸಂಘಟನೆಗಳು ತಮ್ಮ ರಾಷ್ಟ್ರಗಳಲ್ಲಿ ಅಲ್ಪಸಂಖ್ಯಾತರನ್ನು ಎರಡನೇ ದರ್ಜೆಯ ನಾಗರಿಕರು ಎಂದು ನಂಬಿವೆ, ವಾದಿಸುತ್ತವೆ, ಹೊರಹಾಕಲು ಹವಣಿಸುತ್ತವೆ.

ಹಾಗಾಗಿಯೇ ಆರ್‌ಎಸ್‌ಎಸ್ ಮತ್ತು ತಾಲಿಬಾನ್ ಸಂಘಟನೆಗಳನ್ನು ಒಂದೇ ನಾಣ್ಯದ ಎರಡು ಮುಖಗಳಂತೆ ಕಾಣುವುದು. ಆರ್‌ಎಸ್‌ಎಸ್- ಪಶ್ಚಿಮದ ಅಫ್ಘಾನಿಸ್ತಾನದಿಂದ ಪೂರ್ವದ ಮ್ಯಾನ್ಮಾರ್‌ವರೆಗೆ ಅಖಂಡ ಭಾರತ ಅಥವಾ ಅವಿಭಜಿತ ಭಾರತದ ಕನಸು ಕಾಣುತ್ತಿದೆ. ಅಂತೆಯೇ, ತಾಲಿಬಾನ್ ಅಫ್ಘಾನಿಸ್ತಾನದ ಇಸ್ಲಾಮಿಕ್ ಎಮಿರೇಟ್ಸ್‌ ಸ್ಥಾಪನೆಯ ಕನಸು ಕಾಣುತ್ತಿದೆ. ಅದಕ್ಕಾಗಿ, ಪೂರ್ಣ ಅಫ್ಘಾನಿಸ್ತಾನದ ಜೊತೆಗೆ ಪಾಕ್‌ ಮತ್ತು ಇರಾನ್‌ನ ಕೆಲವು ಭಾಗಗಳನ್ನು ಗುರುತು ಹಾಕಿಕೊಂಡಿದೆ.

ಸಂವಿಧಾನದ ಮೇಲೆ ನಿರ್ಬಂಧ

ಅಫ್ಘಾನಿಸ್ತಾನದಲ್ಲಿ 2004ರಿಂದ ಜಾರಿಯಲ್ಲಿದ್ದ ‘ಇಸ್ಲಾಮಿಕ್ ಗಣರಾಜ್ಯದ ಸಂವಿಧಾನ’ವನ್ನು 2021ರಲ್ಲಿ ಅಧಿಕಾರಕ್ಕೆ ಬಂದ ತಾಲಿಬಾನ್, ಕೇವಲ ಒಂದು ವರ್ಷದೊಳಗೆ ರದ್ದುಗೊಳಿಸಿತು. ಈಗ ಅಲಿಖಿತ ಸಂವಿಧಾನವಾಗಿ ಕಾರ್ಯನಿರ್ವಹಿಸುವುದು ಕುರಾನ್ ಎಂದು ಅಧಿಕೃತವಾಗಿ ಘೋಷಿಸಿತು. ಷರಿಯಾ ಕಾನೂನನ್ನು ಹೇರಿತು.

ಕಾರ್ಯಾಂಗ, ಶಾಸಕಾಂಗ ಹಾಗೂ ನ್ಯಾಯಾಂಗದ ಅಧಿಕಾರವನ್ನು ಸುಪ್ರೀಂ ಲೀಡರ್ ಮತ್ತು ಅವರ ಮೌಲ್ವಿಗಳ ಗುಂಪಿಗೆ ನೀಡಲಾಗಿದೆ. ಈ ಗುಂಪು ಕುರಾನ್‌ ವ್ಯಾಖ್ಯಾನದ ಆಧಾರದ ಮೇಲೆ ನಿರಂಕುಶವಾಗಿ ಶಾಸನಗಳು ಮತ್ತು ತೀರ್ಪುಗಳನ್ನು ಘೋಷಿಸುತ್ತದೆ. ಈ ಸರ್ವಾಧಿಕಾರಿ ಮತ್ತು ಹೊಣೆಗಾರಿಕೆಯಿಲ್ಲದ ಆಳ್ವಿಕೆಯು ಮಾನವ ಹಕ್ಕುಗಳ ಉಲ್ಲಂಘನೆಗೆ ಕಾರಣವೂ ಆಗಿದೆ. ಅದಕ್ಕಾಗಿ, ಜಾಗತಿಕ ಖಂಡನೆಗೂ ಗುರಿಯಾಗಿದೆ.

ಆರ್‌ಎಸ್‌ಎಸ್ ಕೂಡ ಭಾರತೀಯ ಸಂವಿಧಾನವನ್ನು ಆರಂಭದಿಂದಲೂ ಟೀಕಿಸುತ್ತಲೇ ಬಂದಿದೆ. ‘ಭಾರತದ ಸಂವಿಧಾನವು ವಿವಿಧ ವಿದೇಶಗಳಿಂದ ಎರವಲು ಪಡೆದ ಪಾಶ್ಚಿಮಾತ್ಯ ಪರಿಕಲ್ಪನೆಗಳನ್ನು ಆಧರಿಸಿದೆ. ಮನುಸ್ಮೃತಿಯಂತಹ ಪ್ರಾಚೀನ ಭಾರತೀಯ ಕಾನೂನುಗಳನ್ನು ಆಧರಿಸಿಲ್ಲ’ ಎಂದು ಆರ್‌ಎಸ್‌ಎಸ್‌ ತನ್ನ ಮುಖವಾಣಿ ‘ಆರ್ಗನೈಸರ್’ನಲ್ಲಿ 1949ರಲ್ಲಿ ಟೀಕಿಸಿತ್ತು.

ಮನುಸ್ಮೃತಿಯೇ ತಮ್ಮ ಸಂವಿಧಾನವೆಂದು ಬಿಜೆಪಿ-ಆರ್‌ಎಸ್‌ಎಸ್‌ ಹೇಳಿಕೊಳ್ಳುತ್ತವೆ. ಅದರ ಜಾರಿಯೇ ತಮ್ಮ ಪರಮ ಗುರಿಯನ್ನಾಗಿ ಮಾಡಿಕೊಂಡಿವೆ. ಈ ಮನುಸ್ಮೃತಿಯು ‘ಸಮಾಜದಲ್ಲಿ ವರ್ಣಾಶ್ರಮಗಳು ಜಾರಿಯಲ್ಲಿರಬೇಕು. ಶೂದ್ರರು-ಅಸ್ಪೃಶ್ಯರು ಮುಟ್ಟಲು ಅರ್ಹರಲ್ಲದವರು. ಮಹಿಳೆಯರು 2ನೇ ದರ್ಜೆಯ ಪ್ರಜೆಗಳು, ಗಂಡಿನ ಅಧೀನದಲ್ಲಿರಬೇಕು. ಮಹಿಳೆಯರು ಗಂಡಿನ ಭೋಗಕ್ಕಾಗಿಯೇ ಇರುವ ಜೀವಿಗಳು, ಅವರು ಸ್ವಾತಂತ್ರ್ಯ ಮತ್ತು ಹಕ್ಕುಗಳಿಗೆ ಅನರ್ಹರು’ ಎಂಬ ಧೋರಣೆಯನ್ನು ಒಳಗೊಂಡಿದೆ. ಅಲ್ಲದೆ, ವಿಷ್ಣುವಿನ ತಲೆಯಲ್ಲಿ ಬ್ರಾಹ್ಮಣರು, ಭುಜದಲ್ಲಿ ಕ್ಷತ್ರಿಯರು, ಸೊಂಟದಲ್ಲಿ ವೈಶ್ಯರು ಹಾಗೂ ಪಾದದಲ್ಲಿ ಶೂದ್ರರು ಜನಿಸಿದರು. ಈ ಶ್ರೇಣೀಕೃತ ತಾರತಮ್ಯ ಹೀಗೆಯೇ ಇರಬೇಕು ಎಂದು ವಾದಿಸುತ್ತದೆ. ಆ ಕಾರಣಕ್ಕಾಗಿಯೇ, ಸಂವಿಧಾನವನ್ನು ವಿರೋಧಿಸಲಾಗಿದೆ.

ಇದೇ ವರ್ಷದ (2025) ಜೂನ್‌ನಲ್ಲಿ, ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ಸಂವಿಧಾನದ ಪೀಠಿಕೆಯಿಂದ ‘ಜಾತ್ಯತೀತ’ ಮತ್ತು ‘ಸಮಾಜವಾದಿ’ ಪದಗಳನ್ನು 1975ರಲ್ಲಿ ಬಲವಂತವಾಗಿ ಸಂವಿಧಾನಕ್ಕೆ ಸೇರಿಸಲಾಗಿದೆ. ಆ ಪದಗಳನ್ನು ತೆಗೆದುಹಾಕಬೇಕು. ಅದಕ್ಕಾಗಿ, ಸಾರ್ವಜನಿಕ ಚರ್ಚೆಗಳನ್ನು ನಡೆಸಬೇಕು ಎಂದು ಒತ್ತಾಯಿಸಿದರು. ಅವರ ವಾದವು ಭಾರತದ ಬಹುತ್ವದ ತತ್ವಕ್ಕೆ ವಿರುದ್ಧವಾಗಿತ್ತು. ಆ ಕಾರಣಕ್ಕಾಗಿಯೇ, ಅವರನ್ನು ವಿಪಕ್ಷಗಳು ಮತ್ತು ಸಂವಿಧಾನವಾದಿಗಳು ಟೀಕಿಸಿದರು.

ಮಹಿಳೆಯರು ಸ್ವಾತಂತ್ರ್ಯಕ್ಕೆ ಅನರ್ಹರು

ದೆಹಲಿಯಲ್ಲಿ ತಾಲಿಬಾನ್ ಸಚಿವ ಮುತ್ತಕಿ ಅವರು ನಡೆಸಿದ ಮೊದಲ ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಪತ್ರಕರ್ತರಿಗೆ ನಿರ್ಬಂಧ ಹೇರಲಾಗಿತ್ತು. ಮೋದಿ ಸರ್ಕಾರವು ಸಾಂವಿಧಾನಿಕವಾಗಿ ಚುನಾಯಿತ ಪ್ರಜಾಪ್ರಭುತ್ವ ದೇಶದಲ್ಲಿ ಮಹಿಳಾ ಪತ್ರಕರ್ತರ ಮೇಲಿನ ನಿಷೇಧವನ್ನು ಅನುಮತಿಸಿತ್ತು. ಬಿಜೆಪಿ ಮತ್ತು ತಾಲಿಬಾನ್‌ಗಳ ಈ ಧೋರಣೆ ಆಶ್ವರ್ಯವೇನೂ ಅಲ್ಲ.

‘ಮಹಿಳೆಯರು ಎಲ್ಲ ದುಷ್ಟತನಕ್ಕೆ ಮೂಲವಾಗಿದ್ದಾರೆ. ಸಮಾಜದ ಒಳಿತಿಗಾಗಿ ಅವರನ್ನು ನಿಯಂತ್ರಿಸಬೇಕು’ ಎಂಬ ಧೋರಣೆ ತಾಲಿಬಾನ್‌ನದ್ದು. ಅದಕ್ಕಾಗಿಯೇ, ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಸರ್ಕಾರವು ‘ಸದ್ಗುಣ ಪ್ರಚಾರ ಮತ್ತು ದುರ್ಗುಣ ತಡೆಗಟ್ಟುವಿಕೆ ಸಚಿವಾಲಯ’ವನ್ನು (‘Ministry of Propagation of Virtue and Prevention of Vice’) ರಚಿಸಿದೆ. ಅಫ್ಘನ್‌ನಲ್ಲಿ ಸರ್ಕಾರಿ ಮತ್ತು ಎನ್‌ಜಿಒ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆಯರು ಉದ್ಯೋಗ ಪಡೆಯುವುದನ್ನು ನಿಷೇಧಿಸಿದೆ. 13 ವರ್ಷ ವಯಸ್ಸು ದಾಟಿದ ಹೆಣ್ಣುಮಕ್ಕಳು ಮಸೀದಿಗಳು ಮತ್ತು ಶಾಲೆಗಳಿಗೆ ಹೋಗದಂತೆ ನಿರ್ಬಂಧಿಸಲಾಗಿದೆ. ಮಾರುಕಟ್ಟೆಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಮದುವೆಗಳಂತಹ ಖಾಸಗಿ ಆಚರಣೆಗಳಲ್ಲಿಯೂ ಮಹಿಳೆಯರ ನಡವಳಿಕೆಗಳ ಮೇಲೆ ನಿಗಾ ಇರಿಸಲಾಗುತ್ತದೆ. ಮನೆಯಿಂದ ಹೊರಬರುವ ಮಹಿಳೆಯರು ತಮ್ಮ ಕಣ್ಣುಗಳನ್ನು ಹೊರತುಪಡಿಸಿ ದೇಹದ ಉಳಿದೆಲ್ಲ ಭಾಗಗಳು ಮುಚ್ಚುವಂತೆ ಪೂರ್ಣ ಬುರ್ಖಾ ಧರಿಸಬೇಕು. ಮಾತ್ರವಲ್ಲದೆ, ಮಹಿಳೆಯರು ತಾವೊಬ್ಬರೇ ಆಸ್ಪತ್ರೆಗಳಿಗೂ ಹೋಗುವಂತಿಲ್ಲ ಎಂಬ ನಿಯಮವನ್ನು ಹೇರಲಾಗಿದೆ.

ಈ ನೀತಿ-ನಿಯಮಗಳನ್ನು ಪಾಲಿಸದಿದ್ದರೆ, ಶಿಕ್ಷೆ, ಸಾರ್ವಜನಿಕವಾಗಿ ಥಳಿತ, ದಂಡ ಹಾಗೂ ಜೈಲು ಶಿಕ್ಷೆಗೆ ಗುರಿ ಮಾಡಲಾಗುತ್ತದೆ. ಮಹಿಳೆಯರು ನಿಮಯಗಳನ್ನು ಪಾಲಿಸುವುದನ್ನು ಖಚಿತಪಡಿಸಿಕೊಳ್ಳುವಲ್ಲಿ ಪುರುಷರು ವಿಫಲವಾದರೆ, ಅವರು ತಮ್ಮ ಉದ್ಯೋಗವನ್ನು ಕಳೆದುಕೊಳ್ಳಬೇಕಾಗುತ್ತದೆ.

ಈ ನಿಮಯಗಳು ಭಾರತಕ್ಕೂ ಪರಿಚಿತವಲ್ಲವೇ? 2020ರಲ್ಲಿ ಉತ್ತರ ಪ್ರದೇಶದಲ್ಲಿ ‘ಕಾನೂನುಬಾಹಿರ ಧಾರ್ಮಿಕ ಮತಾಂತರ ನಿಷೇಧ ಸುಗ್ರೀವಾಜ್ಞೆ’ಯನ್ನು ಜಾರಿಗೊಳಿಸಿ, ಅಲ್ಲಿನ ಜನರ ಮೇಲೆ ಹೇರಲಾಯಿತು. ಬಳಿಕ, ಬಿಜೆಪಿ ಆಡಳಿತದ ಇತರ 7 ರಾಜ್ಯಗಳು ಈ ಕಾನೂನನ್ನು ಜಾರಿಗೆ ತಂದವು. ಈ ಸುಗ್ರೀವಾಜ್ಞೆ-ಕಾನೂನುಗಳು ಕೇಂದ್ರದ ಮೋದಿ ಸರ್ಕಾರದ ಅಣತಿಯಲ್ಲಿಯೇ ಜಾರಿಗೊಂಡವು.

ಅಂತರ್-ಜಾತಿ ಮತ್ತು ಅಂತರ-ಧರ್ಮೀಯ ವಿವಾಹಗಳಿಗೆ ‘ಲವ್ ಜಿಹಾದ್’ ಹಣೆಪಟ್ಟಿ ಕಟ್ಟಿ, ಕ್ರಿಮಿನಲ್ ಅಪರಾಧವೆಂದು ಪರಿಗಣಿಸಿ ಶಿಕ್ಷೆಗೆ ಗುರಿಯಾಗಿಸುವುದು ಈ ಕಾನೂನುಗಳ ಉದ್ದೇಶ. ಈ ಕಾನೂನುಗಳು ಬಜರಂಗದಳದಂತಹ ಹಿಂದುತ್ವ ಕೋಮುವಾದಿ ಸಂಘಟನೆಗಳಿಗೆ ಜೋಡಿಗಳ ಮೇಲೆ ದಾಳಿ ನಡೆಸಲು, ಹಿಂಸಾತ್ಮಕ ಕ್ರೌರ್ಯ ಎಸಗಲು ಅಘೋಷಿತ ಪರವಾನಗಿ ನೀಡಿದವು.

ಶ್ರೀರಾಮ ಸೇನೆಯಿಂದ ಹಿಂದೂ ಜಾಗರಣ್ ಮಂಚ್‌ವರೆಗಿನ ಹಲವಾರು ಹಿಂದುತ್ವ ಕೋಮುವಾದಿ ಗುಂಪುಗಳು ತಾವು ‘ಭಾರತೀಯ ಸಂಸ್ಕೃತಿಯ ರಕ್ಷಕ’ರೆಂದು ಹೇಳಿಕೊಂಡು ಪಬ್‌ಗಳು, ಫ್ಯಾಷನ್ ಶೋಗಳು ಹಾಗೂ ಪ್ರೇಮಿಗಳ ದಿನದ ಪಾರ್ಟಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿವೆ. ವಿಧ್ವಂಸಕ ಕೃತ್ಯಗಳನ್ನು ಎಸಗಿವೆ.

ಈ ಲೇಖನ ಓದಿದ್ದೀರಾ?: ನಿಮ್ಮ ಮಕ್ಕಳು ಆರ್‌ಎಸ್‌ಎಸ್‌ಗೆ ಹೋಗ್ತಾರಾ? ಎಚ್ಚರ, ಈ ಕೃತಿಗಳು ಹೇಳುವ ಸತ್ಯಗಳೇ ಬೇರೆ!

ಆರ್‌ಎಸ್‌ಎಸ್‌ನ ಮಹಿಳಾ ವಿಭಾಗ ‘ರಾಷ್ಟ್ರೀಯ ಸೇವಿಕಾ ಸಮಿತಿ’ಯು ಮಾತೃತ್ವ (ಸಾರ್ವತ್ರಿಕ ಮಾತೃತ್ವ) ಮತ್ತು ಕರ್ತೃತ್ವದ (ದಕ್ಷತೆ ಮತ್ತು ಸಾಮಾಜಿಕ ಕ್ರಿಯಾಶೀಲತೆ) ಮೇಲೆ ತನ್ನ ಸಿದ್ಧಾಂತವನ್ನು ಆಧರಿಸಿದೆ. ಇದು ಮಹಿಳೆಯರು ತಮ್ಮ ಕುಟುಂಬ ಮತ್ತು ಸಮುದಾಯಕ್ಕೆ ಸೇವೆ ಸಲ್ಲಿಸುವ ಮೂಲಕ ಪ್ರಾಚೀನ ಸಾಂಪ್ರದಾಯಿಕ ಪಾತ್ರವನ್ನು ನಿಭಾಯಿಸಬೇಕೆಂದು ವಾದಿಸುತ್ತದೆ.

ಈ ವರ್ಷದ ಆರಂಭದಲ್ಲಿ ಕೇರಳದಲ್ಲಿ ನಡೆದ ‘ಹಿಂದು ಏಕತಾ ಸಮ್ಮೇಳನ’ದಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ‘ಹಿಂದುಗಳು ಸಾಂಪ್ರದಾಯಿಕ ಉಡುಪನ್ನು ಮಾತ್ರ ಧರಿಸಬೇಕು, ಇಂಗ್ಲಿಷ್‌ನಲ್ಲಿ ಮಾತನಾಡಬಾರದು ಹಾಗೂ ಭಾರತೀಯ ಪಾಕಪದ್ಧತಿಯನ್ನು ಮಾತ್ರ ಸೇವಿಸಬೇಕು’ ಎಂದು ಕರೆಕೊಟ್ಟರು.

ಸಂತಾನೋತ್ಪತ್ತಿ

ಕಡಿಮೆ ಮಕ್ಕಳನ್ನು ಹೊಂದಬೇಕು ಎಂಬ ಜಾಗತಿಕ ನಿಲುವನ್ನು ಮುಸ್ಲಿಂ ಜನಸಂಖ್ಯೆಯನ್ನು ನಿಯಂತ್ರಿಸುವ ಪಾಶ್ಚಿಮಾತ್ಯ ಪಿತೂರಿ ಎಂದು ತಾಲಿಬಾನ್ ವಾದಿಸುತ್ತದೆ. ಮುಸ್ಲಿಮರು ಹೆಚ್ಚು ಮಕ್ಕಳನ್ನು ಹೆರಬೇಕು ಎಂಬ ಧೋರಣೆಯೊಂದಿಗೆ ಅಫ್ಘನ್‌ನಲ್ಲಿ ಗರ್ಭನಿರೋಧಕ ಮತ್ತು ಜನನ ನಿಯಂತ್ರಣ ಮಾತ್ರೆಗಳನ್ನು ತಾಲಿಬಾನ್‌ ನಿಷೇಧಿಸಿದೆ. ಪರಿಣಾಮವಾಗಿ, ಅಫ್ಘಾನಿಸ್ತಾನದಲ್ಲಿ ಅಪಾಯದ ಗರ್ಭಧಾರಣೆಗಳು, ತಾಯಂದಿರು ಮತ್ತು ಮಕ್ಕಳ ಮರಣಗಳು ಭಯಾನಕವಾಗಿ ಹೆಚ್ಚಾಗುತ್ತಿವೆ.

ಆರ್‌ಎಸ್‌ಎಸ್ ಕೂಡ ಹಿಂದು ಕುಟುಂಬಗಳು ಹೆಚ್ಚಿನ ಮಕ್ಕಳನ್ನು ಹೊಂದಬೇಕೆಂದು ಕರೆ ನೀಡಿದೆ. ದಸರಾ ದಿನದಂದು ಭಾಗವತ್, ‘ಜನಸಂಖ್ಯಾ ನಿಯಂತ್ರಣದಿಂದ ಹಿಂದುಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಜನಸಂಖ್ಯಾ ಬದಲಾವಣೆಗಳು (ಮುಸ್ಲಿಮರ ಸಂಖ್ಯೆ ಹೆಚ್ಚುತ್ತಿದೆ) ಆಗುತ್ತಿವೆ. ಇದರಿಂದ, ನಾವು ಚಿಂತಿತರಾಗಿದ್ದೇವೆ. ಜನಸಂಖ್ಯಾ ನಿಯಂತ್ರಣ ಮತ್ತು ಧರ್ಮಾಧಾರಿತ ಜನಸಂಖ್ಯೆಯು ಇನ್ನು ಮುಂದೆ ನಿರ್ಲಕ್ಷಿಸಲಾಗದ ಪ್ರಮುಖ ವಿಷಯವಾಗಿದೆ. ಹಿಂದುಗಳು ಸರಿಯಾದ ವಯಸ್ಸಿನಲ್ಲಿ ಮದುವೆಯಾಗಬೇಕು, ಕನಿಷ್ಠ ಮೂರು ಮಕ್ಕಳನ್ನು ಹೊಂದಬೇಕು’ ಎಂದು ಕರೆಕೊಟ್ಟಿದ್ದಾರೆ.

ಆದರೆ, 1992 ರಿಂದ 2015ರವರೆಗೆ, ಮುಸ್ಲಿಂ ಫಲವತ್ತತೆ ದರವು 3.3 ರಿಂದ 2.1ಕ್ಕೆ ಇಳಿದಿದೆ. ಹಿಂದುಗಳಲ್ಲಿ 4.4 ರಿಂದ 2.6ಕ್ಕೆ ಕುಸಿದಿದೆ ಎಂದು ಸಂಶೋಧನಾ ವರದಿಗಳು ಹೇಳುತ್ತವೆ.

ಇನ್ನು, ಬಾಲ್ಯ ವಿವಾಹದ ವಿರುದ್ಧ ಕಠಿಣ ಕಾನೂನುಗಳಿರುವುದರಿಂದ ಆರ್‌ಎಸ್‌ಎಸ್, ಅದನ್ನು ವಿರೋಧಿಸುತ್ತದೆ. ಆದರೆ, ಅದರ ಮಹಿಳಾ ವಿಭಾಗವು ‘ಕುಟುಂಬ ಜೀವನದ ಪ್ರತಿಯೊಂದು ಅಂಶದಲ್ಲೂ ಸರ್ಕಾರ ಹಸ್ತಕ್ಷೇಪ ಮಾಡಬಾರದು. ಕೆಲವು ಸಾಮಾಜಿಕ ಸಮಸ್ಯೆಗಳನ್ನು ಸಮಾಜವು ತನ್ನದೇ ಆದ ರೀತಿಯಲ್ಲಿ ಪರಿಹರಿಸಿಕೊಳ್ಳಲು ಬಿಡುವುದು ಉತ್ತಮ’ ಎಂದು ವಾದಿಸುತ್ತದೆ.

ಸಲಿಂಗ ವಿವಾಹ

ಸಲಿಂಗ ಸಂಬಂಧಗಳನ್ನು ತಾಲಿಬಾನ್‌ ಶರಿಯಾ ಕಾನೂನಿನಡಿ ಚಿತ್ರಹಿಂಸೆ ಮತ್ತು ಮರಣದಂಡನೆಗೆ ಗುರಿಪಡಿಸುವ ಗಂಭೀರ ಪಾಪವೆಂದು ಪರಿಗಣಿಸುತ್ತದೆ. ವಾಸ್ತವವಾಗಿ, ಸಲಿಂಗ ಸಂಬಂಧ ಹೊಂದುವವರಿಗೆ ಕಲ್ಲುಗಳಿಂದ ಹೊಡೆದು ಅಥವಾ ಅವರ ಮೇಲೆ ಗೋಡೆಗಳನ್ನು ಬೀಳಿಸಿ ಕೊಲ್ಲಬೇಕು. ಇದೇ ಮರಣದಂಡನೆ ಎಂದು ತಾಲಿಬಾನ್ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ. ಇದಕ್ಕೆ ಅನುಸಾರವಾಗಿ, ಅಫ್ಘನ್‌ನಲ್ಲಿ ಅನೇಕ LGBTQ+ ಜನರನ್ನು ಸೆಲ್‌ಫೋನ್ ಚಾಟ್‌ಗಳ ಮೂಲಕ ಬೇಟೆಯಾಡಿ, ಕೊಲ್ಲಲಾಗಿದೆ.

ಭಾರತದಲ್ಲಿ 2018ಲ್ಲಿ ಸಲಿಂಗ ಸಂಬಂಧಗಳಿಗೆ ಕಾನೂನು ಮಾನ್ಯತೆ ನೀಡಲಾಯಿತು. ಆದರೆ, ಸಲಿಂಗಕಾಮದ ಬಗ್ಗೆ RSS ನಿಲುವು ಬದಲಾಗುತ್ತಲೇ ಇದೆ. 2023ರ ಮಾರ್ಚ್‌ನಲ್ಲಿ ಭಾಗವತ್ ಅವರು, ‘LGBTQ+ ಸಮುದಾಯದ ಜನರು ತಮ್ಮದೇ ಆದ ಖಾಸಗಿ ಮತ್ತು ಸಾಮಾಜಿಕ ಸ್ಥಳವನ್ನು ಹೊಂದಿರಬೇಕು’ ಎಂದು ಹೇಳಿದರು. ಅವರ ಈ ಹೇಳಿಕೆಯು ಅವರದ್ದೇ ಹಿಂದಿನ ‘ಸಲಿಂಗ ಸಂಬಂಧವು ಅಸ್ವಾಭಾವಿಕ’ ಎಂಬ ನಿಲುವಿಗೆ ವ್ಯತಿರಿಕ್ತವಾಗಿತ್ತು. ಪ್ರಸ್ತುತ ಸಂದರ್ಭದಲ್ಲಿ LGBTQ+ ವಿಚಾರವಾಗಿ ಇರುವ ಸಮಸ್ಯೆಯನ್ನು ‘ಮಾನವೀಯ ವಿಧಾನ’ದ ಮೂಲಕ ನೋಡಬೇಕೆಂದು ಆರ್‌ಎಸ್‌ಎಸ್‌ ಹೇಳುತ್ತಿದೆ.

ಈ ಲೇಖನ ಓದಿದ್ದೀರಾ?: ಕೋಟ್ಯಂತರ ರೂಪಾಯಿ ಗುರುದಕ್ಷಿಣೆ ಲೆಕ್ಕ ಕೊಡದ ‘ಸಂಘ’ವೇ ಸ್ವಯಂ ಭ್ರಷ್ಟವಾಗಿದೆ

ಆದರೆ, ಮಾನವೀಯ ನೆಲೆಯ ಕುರಿತು ಆರ್‌ಎಸ್‌ಎಸ್‌ ಮಾತನಾಡಿದ ಕೇವಲ ಎರಡು ತಿಂಗಳ ನಂತರ, ಸೇವಿಕಾ ಸಮಿತಿಯ ಅಂಗಸಂಸ್ಥೆಯಾದ ‘ಸಂವರ್ಧಿನಿ ನ್ಯಾಸ್’, ತಾವೊಂದು ಸಮೀಕ್ಷೆ ನಡೆಸಿದ್ದೇವೆ. ಸಮೀಕ್ಷೆ ವೇಳೆ, ಅನೇಕ ವೈದ್ಯರು ಮತ್ತು ವೈದ್ಯಕೀಯ ವೃತ್ತಿಪರರು ಸಲಿಂಗಕಾಮವು ಒಂದು ‘ಅಸ್ವಸ್ಥತೆ’ ಎಂದು ನಂಬುತ್ತಾರೆ ಮತ್ತು ಸಲಿಂಗಕಾಮ ವಿವಾಹವನ್ನು ಕಾನೂನುಬದ್ಧಗೊಳಿಸಿದರೆ ಅದು ಹೆಚ್ಚಾಗುತ್ತದೆ ಎಂದು ವಿರೋಧಿಸುತ್ತಾರೆ ಎಂಬ ವಾದವನ್ನು ಮುಂದಿಟ್ಟಿತು.

ಮಾನವ ಹಕ್ಕು ಕಾರ್ಯಕರ್ತರು ಈ ಸಮೀಕ್ಷಾ ವರದಿಯನ್ನು ಅಪಾಯಕಾರಿ ಮತ್ತು ತಪ್ಪು ಮಾಹಿತಿ ಹರಡುವ ಹುನ್ನಾರವೆಂದು ಖಂಡಿಸಿದರು. ಅಂತಹ ಹೇಳಿಕೆಗಳನ್ನು ನೀಡಿರುವ ವೈದ್ಯರ ಪರವಾನಗಿಗಳನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿದರು. ಸಲಿಂಗಕಾಮ ವಿವಾಹಕ್ಕೆ ಮೋದಿ ಸರ್ಕಾರವೂ ಸೇರಿದಂತೆ ಆರ್‌ಎಸ್‌ಎಸ್ ಕೂಡ ವಿರುದ್ಧವಾಗಿತ್ತು ಎಂಬುದು ವಾಸ್ತವ.

ಮೂಲಭೂತವಾದದ ಹೇರಿಕೆ

ತಾಲಿಬಾನ್‌ನ ಸರ್ವೋಚ್ಚ ನಾಯಕ ಹಿಬತುಲ್ಲಾ ಅಖುಂಡ್‌ಜಾದಾ, ‘ಅಫ್ಘನ್‌ನಲ್ಲಿ ಪ್ರಜಾಪ್ರಭುತ್ವ ಮುಗಿದಿದೆ. ಷರಿಯಾ ಕಾನೂನನ್ನು ಜಾರಿಗೆ ತರಲಾಗಿದೆ. ಇಸ್ಲಾಮಿಕ್ ವ್ಯವಸ್ಥೆಯನ್ನು ಬಲಿಷ್ಠ ಮತ್ತು ಶಕ್ತಿಯುತವಾಗಿ ಬೆಳೆಸುವುದು ತಾಲಿಬಾನ್ ಸರ್ಕಾರದ ಜೀವಿತಾವಧಿಯ ಜವಾಬ್ದಾರಿಯಾಗಿದೆ’ ಎಂದು ಘೋಷಿಸಿದ್ದಾರೆ.

ಷರಿಯಾ ಕಾನೂನನ್ನು ಪಾಲಿಸದವರ ವಿರುದ್ಧ ಅಂಗಚ್ಛೇದನ, ಸಾರ್ವಜನಿಕ ಥಳಿತ, ಕಲ್ಲುಗಳಿಗೆ ಹೊಡೆಯುವುದು ಹಾಗೂ ಮರಣದಂತಹ ಶಿಕ್ಷೆಗಳನ್ನು ಜಾರಿಗೊಳಿಸುತ್ತದೆ ಎಂದು ಅವರು ಹೇಳಿದ್ದರು.

ಅಫ್ಘಾನಿಸ್ತಾನದಲ್ಲಿ ಶರಿಯಾ ಇದ್ದರೆ, ಭಾರತದಲ್ಲಿ ಹಿಂದುತ್ವ/ಮನುವಾದವು ಮಾರ್ಗದರ್ಶಕವಾಗಬೇಕು ಎಂದು ಆರ್‌ಎಸ್‌ಎಸ್‌ ಬಯಸುತ್ತದೆ. ತಾವು ಹಿಂದು ಸಂಸ್ಕೃತಿ, ಮೌಲ್ಯಗಳು ಹಾಗೂ ಸಂಪ್ರದಾಯಗಳನ್ನು ಸಂರಕ್ಷಿಸಲು ಮತ್ತು ಉತ್ತೇಜಿಸಲು ಪ್ರಯತ್ನಿಸುವ ಸಾಂಸ್ಕೃತಿಕ ಸಂಘಟನೆ ಎಂದು ಆರ್‌ಎಸ್‌ಎಸ್‌ ಹೇಳಿಕೊಳ್ಳುತ್ತದೆ. ಹಿಂದುತ್ವ ರಾಷ್ಟ್ರೀಯತಾವಾದಿ ಕಾರ್ಯಸೂಚಿಯನ್ನು ಸಕ್ರಿಯವಾಗಿ ಪ್ರತಿಪಾದಿಸುತ್ತದೆ.

ಆರ್‌ಎಸ್‌ಎಸ್‌ ಶತಮಾನೋತ್ಸವಕ್ಕಾಗಿ ಇತ್ತೀಚೆಗೆ ಮೋದಿ ಬಿಡುಗಡೆ ಮಾಡಿದ 100 ರೂ. ನಾಣ್ಯವು ಒಂದು ಬದಿಯಲ್ಲಿ ಕೇಸರಿ ಹಿಂದುತ್ವ ಧ್ವಜವನ್ನು ಹೊಂದಿದೆ. ಈ ಧ್ವಜವು ಆರ್‌ಎಸ್‌ಎಸ್‌ ರಾಷ್ಟ್ರಧ್ವಜವೆಂದು ಪ್ರತಿಪಾದಿಸುತ್ತಿದ್ದ ಧ್ವಜವಾಗಿದೆ. ಗಮನಾರ್ಹವಾಗಿ, 2002ರವರೆಗೆ ಆರ್‌ಎಸ್‌ಎಸ್‌ ನಾಗ್ಪುರದಲ್ಲಿರುವ ತನ್ನ ಪ್ರಧಾನ ಕಚೇರಿಯಲ್ಲಿ ಭಾರತದ ರಾಷ್ಟ್ರಧ್ವಜವನ್ನು ಹಾರಿಸಿರಲಿಲ್ಲ. ಸಾರ್ವಜನಿಕ ಒತ್ತಡದಿಂದಾಗಿ, 2002ರಿಂದ ರಾಷ್ಟ್ರಧ್ವಜ ಹಾರಿಸಲು ಆರಂಭಿಸಿತು. ಈಗ, ಆರ್‌ಎಸ್‌ಎಸ್‌ ಪ್ರತಿಪಾದಿಸುತ್ತಿದ್ದ ಕೇಸರಿ ಧ್ವಜವನ್ನು ಮೋದಿ ಸರ್ಕಾರ ನಾಣ್ಯದ ಮೇಲೆ ಮುದ್ರಿಸಿದೆ.

ಕೇಂದ್ರ ಸರ್ಕಾರ ಮತ್ತು ಬಿಜೆಪಿ ಆಡಳಿತದ ರಾಜ್ಯಗಳು ಹಿಂದುತ್ವ ಜೀವನ ಶೈಲಿಯನ್ನು ಪ್ರತಿಪಾದಿಸುವ ಕಾನೂನುಗಳನ್ನು ಜಾರಿಗೆ ತಂದಿವೆ. ಉತ್ತರಾಖಂಡದಲ್ಲಿ ಮೊದಲು ಜಾರಿಗೊಂಡ ‘ಏಕರೂಪ ನಾಗರಿಕ ಸಂಹಿತೆ’ಯು ಆರ್‌ಎಸ್‌ಎಸ್‌ನ ಕಾರ್ಯಸೂಚಿಗಳನ್ನು ಜಾರಿಗೆ ತರುವ ದುರುದ್ದೇಶವನ್ನು ಹೊಂದಿವೆ. ಗೋಹತ್ಯೆಯನ್ನು ನಿಷೇಧಿಸುವುದು ಅಥವಾ ಗೋಮಾಂಸ ಭಕ್ಷಕರಿಂದ ಗೋವುಗಳನ್ನು ರಕ್ಷಿಸುವುದು; ಶಾಲಾ ಮತ್ತು ವಿಶ್ವವಿದ್ಯಾಲಯದ ಪಠ್ಯ ಪುಸ್ತಕಗಳನ್ನು ಪರಿಷ್ಕರಿಸುವುದು; ಧಾರ್ಮಿಕ ಮತಾಂತರವನ್ನು ಅಪರಾಧ ಕೃತ್ಯವೆಂದು ಪರಿಗಣಿಸುವುದು; ವಿಶ್ವವಿದ್ಯಾಲಯಗಳು ಮತ್ತು ಆಡಳಿತದಲ್ಲಿ ಆರ್‌ಎಸ್‌ಎಸ್‌ ಸೂಚಿಸಿದವರನ್ನು ನೇಮಿಸುವುದನ್ನು ಒಳಗೊಂಡಿದೆ. ಆರ್‌ಎಸ್‌ಎಸ್‌ ಹಿಡಿತದಿಂದ ತಪ್ಪಿಸಿಕೊಂಡಿದ್ದ ಮೋದಿ ಸರ್ಕಾರ ಈಗ ಮರಳಿ ಆರ್‌ಎಸ್‌ಎಸ್‌ ತೆಕ್ಕೆಗೆ ಬಂದಿದೆ. ಈ ವರ್ಷ ಭಾಗವತ್ ಮತ್ತು ಮೋದಿ ನಡುವೆ ಹಲವಾರು ಸಭೆಗಳು ನಡೆದಿವೆ. ಮೋದಿ ಸರ್ಕಾರವು ಅಂತಿಮವಾಗಿ ಆರ್‌ಎಸ್‌ಎಸ್ ನೆರಳಿನಲ್ಲಿ ಕೆಲಸ ಮಾಡಲು ಆರಂಭಿಸಿದೆ.

ಅಂದಮೇಲೆ ತಾಲಿಬಾನಿಗಳಿಗೂ ಸಂಘಪರಿವಾರಕ್ಕೂ ವ್ಯತ್ಯಾಸವಿದೆಯೇ? ಅವರಿಬ್ಬರು ಒಂದಾಗಿರುವುದು ದೇಶಕ್ಕೆ ಒಳಿತು ಮಾಡುತ್ತದೆಯೇ? ಭಾರತದ ಬಹುತ್ವ ಉಳಿಯುತ್ತದೆಯೇ?

ಮಾಹಿತಿ ಮೂಲ: ದಿ ವೈರ್

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...