3,000 ಉಕ್ರೇನಿಯನ್ನರು ಭಾರತಕ್ಕೆ ಪ್ರವೇಶಿಸಿ, ಈಶಾನ್ಯ ರಾಜ್ಯಗಳಲ್ಲಿ ಅಡಗಿಕೊಂಡಿದ್ದಾರೆ. ಅವರು ಉಗ್ರಗಾಮಿ ಗುಂಪುಗಳಿಗೆ ತರಬೇತಿ ನೀಡುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದು ಭಾರೀ ವೈರಲ್ ಆಗಿದೆ. ಆರೋಪವನ್ನು ತಳ್ಳಿಹಾಕಿರುವ ಕೇಂದ್ರ ಸರ್ಕಾರ, “ಈ ಪೋಸ್ಟ್‌ಗಳು ಸಂಪೂರ್ಣ ಸುಳ್ಳು” ಎಂದು ಹೇಳಿದೆ.
“ಸುಮಾರು 3,000ಕ್ಕೂ ಹೆಚ್ಚು ಉಕ್ರೇನಿಯನ್ನರು ಭಾರತಕ್ಕೆ ಪ್ರವೇಶಿಸಿದ್ದಾರೆ. ಅವರು ಅಮೆರಿಕದ ಬಾಡಿಗೆ ಸೈನಿಕರ ಬೆಂಬಲದೊಂದಿಗೆ ಈಶಾನ್ಯದಲ್ಲಿ ಅಡಗಿಕೊಂಡಿದ್ದಾರೆ. ಅಲ್ಲಿ ಅವರು ಬಂಡುಕೋರ ಗುಂಪುಗಳಿಗೆ ತರಬೇತಿ ನೀಡುತ್ತಿದ್ದಾರೆ. ಭಯೋತ್ಪಾದಕರಿಗೆ ಅಗ್ಗದ ಡ್ರೋನ್‌ಗಳನ್ನು ಪೂರೈಸುತ್ತಿದ್ದಾರೆ” ಎಂದು ಆರೋಪಿ ಕೆಲವು ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಈ ಆರೋಪಗಳು ಮತ್ತು ಹೇಳಿಕೆಗಳು ಸಂಪೂರ್ಣ ಸುಳ್ಳು ಎಂದು ಕೇಂದ್ರ ಸರ್ಕಾರ ಹೇಳಿದೆ. “ಮಿಜೋರಾಂ ಮೂಲಕ ಮ್ಯಾನ್ಮಾರ್‌ಗೆ ಅಕ್ರಮವಾಗಿ ಪ್ರವೇಶಿಸಿದ ಆರೋಪದ ಮೇಲೆ ಒಟ್ಟು 7 ವ್ಯಕ್ತಿಗಳನ್ನು (6 ಉಕ್ರೇನಿಯನ್ನರು ಮತ್ತು 1 ಅಮೆರಿಕದ ಪ್ರಜೆ) ಎನ್‌ಐಎ ಬಂಧಿಸಿದೆ. ವಲಸೆ ಮತ್ತು ಭದ್ರತಾ ಏಜೆನ್ಸಿಗಳು ಸಂಪೂರ್ಣ ಜಾಗರೂಕವಾಗಿದ್ದು, ತನಿಖೆ ಮುಂದುವರಿದಿದೆ” ಎಂದು ಹೇಳಿದೆ.
“ಬಂಧಿತ ಏಳು ವ್ಯಕ್ತಿಗಳಲ್ಲಿ ಅಮೆರಿಕದ ಪ್ರಜೆ ಮ್ಯಾಥ್ಯೂ ಆರನ್ ವ್ಯಾನ್ ಡೈಕ್ ಕೂಡ ಸೇರಿದ್ದಾನೆ. ಅಂತರಾಷ್ಟ್ರೀಯ ಭದ್ರತಾ ವಿಶ್ಲೇಷಕನಾಗಿರುವ ಈತನನ್ನು ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಈತ ‘ಸನ್ಸ್ ಆಫ್ ಲಿಬರ್ಟಿ ಇಂಟರ್ನ್ಯಾಷನಲ್’ (SOLI) ಸಂಸ್ಥೆಯ ಸ್ಥಾಪಕನಾಗಿದ್ದು, ತನ್ನನ್ನು ತಾನು ‘ಲಿಬಿಯಾ ಕ್ರಾಂತಿ’ಯ ಅನುಭವವಿರುವ ಯೋಧನೆಂದು ಕರೆದುಕೊಳ್ಳುತ್ತಿದ್ದಾರೆ” ಎಂದು ಸರ್ಕಾರ ವಿವರಿಸಿದೆ.
“ಉಕ್ರೇನ್ ಪ್ರಜೆಗಳಾದ ಹುರ್ಬಾ ಪೆಟ್ರೋ, ಸ್ಲಿವಿಯಾಕ್ ತಾರಸ್, ಇವಾನ್ ಸುಕ್ಮನೋವ್ಸ್ಕಿ, ಸ್ಟೆಫಾಂಕಿವ್ ಮರಿಯನ್, ಹೊಂಚಾರುಕ್ ಮಕ್ಸಿಮ್ ಮತ್ತು ಕಾಮಿನ್ಸ್ಕಿ ವಿಕ್ಟರ್ ಅವರನ್ನು ದೆಹಲಿ ಮತ್ತು ಲಕ್ನೋ ವಿಮಾನ ನಿಲ್ದಾಣಗಳಲ್ಲಿ ವಶಕ್ಕೆ ಪಡೆಯಲಾಗಿದೆ. ಮ್ಯಾನ್ಮಾರ್‌ನ ಸಶಸ್ತ್ರ ಪಡೆಗಳಿಗೆ ಸಹಾಯ ಮಾಡುವ ಮೂಲಕ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಆರೋಪದಡಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮ್ಯಾನ್ಮರ್ ಸಶಸ್ತ್ರ ಪಡೆಗಳು ಭಾರತ ವಿರೋಧಿ ಬಂಡುಕೋರ ಗುಂಪುಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿವೆ” ಎಂದು ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ವರ್ಣರಂಜಿತ ಹಾರ್ಮುಜ್ ಪರ್ವತದ ಕಥನ ಗೊತ್ತೇ?
ಕಳೆದ ವಾರ ಬಂದ ನಿರ್ದಿಷ್ಟ ಸುಳಿವಿನ ಮೇರೆಗೆ ಈ ಆರೋಪಿಗಳನ್ನು ಬಂಧಿಸಲಾಗಿದೆ. ಎನ್‌ಐಎ ದಾಖಲಿಸಿರುವ ಎಫ್‌ಐಆರ್ ಪ್ರಕಾರ, 14 ಉಕ್ರೇನಿಯನ್ನರು ಪ್ರವಾಸಿ ವೀಸಾದಲ್ಲಿ ವಿವಿಧ ದಿನಾಂಕಗಳಂದು ಭಾರತಕ್ಕೆ ಪ್ರವೇಶಿಸಿದ್ದರು. ನಂತರ ಅಗತ್ಯವಿರುವ ನಿರ್ಬಂಧಿತ ಪ್ರದೇಶದ ಪರವಾನಗಿ (RAP) ಅಥವಾ ಸಂರಕ್ಷಿತ ಪ್ರದೇಶದ ಪರವಾನಗಿ (PAP) ಇಲ್ಲದೆ ಅಸ್ಸಾಂನ ಗುವಾಹಟಿ ಮತ್ತು ಅಲ್ಲಿಂದ ಮಿಜೋರಾಂಗೆ ವಿಮಾನದ ಮೂಲಕ ಪ್ರಯಾಣಿಸಿದ್ದರು. ಈ ಗುಂಪು ನಂತರ ಮ್ಯಾನ್ಮಾರ್‌ಗೆ ‘ಅಕ್ರಮವಾಗಿ’ ಪ್ರವೇಶಿಸಿ, ಅಲ್ಲಿನ ಎಥ್ನಿಕ್ ಆರ್ಮ್ಡ್ ಗ್ರೂಪ್‌ಗಳಿಗೆ (EAGs) ಡ್ರೋನ್ ಯುದ್ಧ ಮತ್ತು ಜಾಮಿಂಗ್ ತಂತ್ರಜ್ಞಾನದ ಕುರಿತು ಪೂರ್ವನಿರ್ಧರಿತ ತರಬೇತಿ ನೀಡಲು ಯೋಜಿಸಿತ್ತು. ಈ ಗುಂಪುಗಳು ಭಾರತದಲ್ಲಿ ಸಕ್ರಿಯವಾಗಿರುವ ಭಯೋತ್ಪಾದಕ ಸಂಸ್ಥೆಗಳಿಗೆ ಬೆಂಬಲ ನೀಡುತ್ತವೆ ಎಂದು ಆರೋಪಿಸಲಾಗಿದೆ.
“ಈ EAG ಗುಂಪುಗಳು ಭಾರತದ ಕೆಲವು ನಿಷೇಧಿತ ಬಂಡುಕೋರ ಗುಂಪುಗಳಿಗೆ ಶಸ್ತ್ರಾಸ್ತ್ರ ಮತ್ತು ಇತರ ಸಾಮಗ್ರಿಗಳನ್ನು ಪೂರೈಸುವ ಮತ್ತು ತರಬೇತಿ ನೀಡುವ ಮೂಲಕ ಬೆಂಬಲಿಸುತ್ತಿವೆ. ಇದು ಭಾರತದ ರಾಷ್ಟ್ರೀಯ ಭದ್ರತೆ ಮತ್ತು ಹಿತಾಸಕ್ತಿಯ ಮೇಲೆ ಪರಿಣಾಮ ಬೀರುತ್ತಿದೆ” ಎಂದು ಎಫ್‌ಐಆರ್‌ನಲ್ಲಿ ವಿವರಿಸಲಾಗಿದೆ.
ಆದರೆ, 3,000 ಮಂದಿ ಉಕ್ರೇನಿಯನ್ನರು ಭಾರತಕ್ಕೆ ಪ್ರವೇಶಿಸಿದ್ದಾರೆ. ಉಗ್ರಗಾಮಿ ಗುಂಪುಗಳಿಗೆ ತರಬೇತಿ ನೀಡುತ್ತಿದ್ದಾರೆ ಎಂಬುದು ಸಂಪೂರ್ಣ ಸುಳ್ಳು ಎಂದು ಸರ್ಕಾರ ಹೇಳಿದೆ.




