ಡಾಲರ್ ಎದುರು ರೂಪಾಯಿ ಮೌಲ್ಯವು ತೀವ್ರವಾಗಿ ಕುಸಿತ ಕಂಡಿದ್ದು, ಒಂದು ಡಾಲರ್‌ಗೆ 91.47 ರೂಪಾಯಿಗೆ ಬಂದು ನಿಂತಿದೆ. ಇದು, ಒಂದು ತಿಂಗಳಲ್ಲೇ ಅತ್ಯಂತ ತೀವ್ರ ಕುಸಿತವಾಗಿದೆ.
ರಾಯಿಟರ್ಸ್ ವರದಿಯ ಪ್ರಕಾರ, “ಡಾಲರ್ ಎದುರು ರೂಪಾಯಿ ಮೌಲ್ಯ ಮತ್ತಷ್ಟು ಕುಸಿಯುವ ಭೀತಿಯಿಂದಾಗಿ ಅದರ ರಕ್ಷಣಾ ವೆಚ್ಚ ) ಹೆಚ್ಚಾಗಿದೆ.”
ಮಾರುಕಟ್ಟೆಯ ವರ್ತಕರು ನೀಡಿದ ಮಾಹಿತಿಯ ಆಧಾರದ ಮೇಲೆ, ಭಾರತೀಯ ರಿಸರ್ವ್ ಬ್ಯಾಂಕ್ (RBI) ಪರಿಸ್ಥಿತಿಯನ್ನು ನಿಯಂತ್ರಿಸಲು ಮಾರುಕಟ್ಟೆಯಲ್ಲಿ ಹಸ್ತಕ್ಷೇಪ ಮಾಡಿರಬಹುದು ಎಂದು ರಾಯಿಟರ್ಸ್ ತಿಳಿಸಿದೆ.
ಮನಿ ಕಂಟ್ರೋಲ್ ವರದಿಯ ಪ್ರಕಾರ, ಇಡೀ ತಿಂಗಳು ಏರಿಳಿತಗಳನ್ನು ಕಂಡಿರುವ ಆರ್‌ಬಿಐನ ವಿದೇಶಿ ವಿನಿಮಯ ಮೀಸಲು ಮೇಲೆ ಈಗ ಎಲ್ಲರ ಗಮನ ನೆಟ್ಟಿದೆ. ಡಾಲರ್ ಎದುರು ರೂಪಾಯಿ ಮೌಲ್ಯವು 92 ರೂಪಾಯಿಯ ಮಟ್ಟವನ್ನು ದಾಟದಂತೆ ತಡೆಯಲು ಆರ್‌ಬಿಐ ಪ್ರಯತ್ನಿಸುವ ನಿರೀಕ್ಷೆಯಿದೆ.
ಪಶ್ಚಿಮ ಏಷ್ಯಾದಲ್ಲಿ ತೀವ್ರಗೊಳ್ಳುತ್ತಿರುವ ಮಿಲಿಟರಿ ಸಂಘರ್ಷವು ಜಾಗತಿಕ ಹಣಕಾಸು ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿದೆ. ಭಾರತದ ರೂಪಾಯಿಯ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ.
ಮಾರ್ಚ್ 4ರ ಬುಧವಾರದಂದು ಹೋಳಿ ಹಬ್ಬದ ಪ್ರಯುಕ್ತ ಭಾರತದ ಹಣಕಾಸು ಮಾರುಕಟ್ಟೆಗಳಿಗೆ ರಜೆ ಇರುವುದರಿಂದ, ವರ್ತಕರು ಹೆಚ್ಚುವರಿ ಅಪಾಯಗಳನ್ನು ಮೈಮೇಲೆ ಎಳೆದುಕೊಳ್ಳುವ ಬದಲು ಇರುವ ಅಪಾಯವನ್ನು ನಿರ್ವಹಿಸುವತ್ತ ಮಾತ್ರ ಗಮನಹರಿಸಿದ್ದಾರೆ ಎಂದು ವಿದೇಶಿ ವರ್ತಕರು ಹೇಳಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ.
ಹೂಡಿಕೆದಾರರು ಸುರಕ್ಷಿತ ಆಸ್ತಿಗಳತ್ತ ಮುಖ ಮಾಡುತ್ತಿರುವುದರಿಂದ ರೂಪಾಯಿ ಮೇಲೆ ಒತ್ತಡ ಮುಂದುವರಿದಿದೆ. ಷೇರು ಮಾರುಕಟ್ಟೆಯಿಂದ ವಿದೇಶಿ ಬಂಡವಾಳ ಹೊರಹೋಗುತ್ತಿದೆ. ದುಬಾರಿ ಆಮದು ವೆಚ್ಚವು ದೇಶದ ವ್ಯಾಪಾರ ಸಮತೋಲನದ ಮೇಲೆ ಹೊಡೆತ ನೀಡಲಿದೆ ಎಂಬ ಆತಂಕ ಮನೆಮಾಡಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಹಿರಿಯ ಸಂಶೋಧನಾ ವಿಶ್ಲೇಷಕ ದಿಲೀಪ್ ಪರ್ಮಾರ್ ಹೇಳಿದ್ದಾರೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗುತ್ತಿರುವುದರಿಂದ ಭಾರತದ ಆಮದು ವೆಚ್ಚವು ಗಣನೀಯವಾಗಿ ಹೆಚ್ಚಾಗುವ ಅಪಾಯವಿದೆ. ಭಾರತವು ತನ್ನ ಇಂಧನ ಅಗತ್ಯದ 85%ರಷ್ಟನ್ನು ಆಮದು ಮಾಡಿಕೊಳ್ಳುತ್ತಿರುವುದರಿಂದ ರೂಪಾಯಿ ಮೇಲೆ ಮತ್ತಷ್ಟು ಒತ್ತಡ ಬೀಳಲಿದೆ ಎಂದು ‘ದಿ ಹಿಂದು’ ವಿಶ್ಲೇಷಿಸಿದೆ.
ಕಳೆದ ವರ್ಷದಿಂದ ವ್ಯಾಪಾರ ಮತ್ತು ಸುಂಕದ ತೊಂದರೆಗಳು ಹಾಗೂ ವಿದೇಶಿ ಹೂಡಿಕೆದಾರರು ಬಂಡವಾಳ ಹಿಂತೆಗೆದುಕೊಳ್ಳುತ್ತಿರುವ ಕಾರಣದಿಂದಾಗಿ, ರೂಪಾಯಿಯು ‘ಏಷ್ಯಾದ ಅತ್ಯಂತ ಕಳಪೆ ಪ್ರದರ್ಶನದ ಕರೆನ್ಸಿ’ ಎಂಬ ಹಣೆಪಟ್ಟಿ ಪಡೆದುಕೊಂಡಿದೆ. ಈಗ ಪಶ್ಚಿಮ ಏಷ್ಯಾದ ಯುದ್ಧವು ಜಾಗತಿಕ ಆತಂಕಕ್ಕೆ ಕಾರಣವಾಗಿರುವುದರಿಂದ ರೂಪಾಯಿ ಇನ್ನಷ್ಟು ದುರ್ಬಲಗೊಳ್ಳುವ ಸಾಧ್ಯತೆಯಿದೆ.
ಫೆಬ್ರವರಿ 27ರಂದು ಬಿಡುಗಡೆಯಾದ ಆರ್‌ಬಿಐ ದತ್ತಾಂಶದ ಪ್ರಕಾರ, ಫೆಬ್ರವರಿ 20ಕ್ಕೆ ಕೊನೆಗೊಂಡ ವಾರದಲ್ಲಿ ಭಾರತದ ವಿದೇಶಿ ವಿನಿಮಯ ಮೀಸಲು 2.119 ಬಿಲಿಯನ್ ಡಾಲರ್ ಇಳಿಕೆಯಾಗಿ 723.608 ಬಿಲಿಯನ್ ಡಾಲರ್‌ಗೆ ತಲುಪಿದೆ. ಅದಕ್ಕೆ ಹಿಂದಿನ ವಾರವಷ್ಟೇ ಮೀಸಲು ನಿಧಿಯು 8.663 ಬಿಲಿಯನ್ ಡಾಲರ್ ಏರಿಕೆಯಾಗಿ 725.727 ಬಿಲಿಯನ್ ಡಾಲರ್‌ಗಳಷ್ಟಿತ್ತು. ಇದು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿತ್ತು ಎಂದು ವರದಿಯಾಗಿದೆ.




