ಶಬರಿಮಲೆ ದೇವಾಲಯದ ಚಿನ್ನದ ಆಭರಣಗಳ ನಷ್ಟ ಅಥವಾ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಮಂಗಳವಾರ ಬೃಹತ್ ಕಾರ್ಯಾಚರಣೆ ನಡೆಸಿದೆ. ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಕೇರಳ, ಕರ್ನಾಟಕ ಮತ್ತು ತಮಿಳುನಾಡು ಸೇರಿದಂತೆ ಒಟ್ಟು 21 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸುವ ಮೂಲಕ ತನಿಖೆಯನ್ನು ತೀವ್ರಗೊಳಿಸಿದೆ.
ಈ ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಅವರಿಗೆ ಸೇರಿದ ಬೆಂಗಳೂರಿನ ಆಸ್ತಿಗಳ ಮೇಲೆ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಇದರೊಂದಿಗೆ ತಿರುವಾಂಕೂರು ದೇವಸ್ವಂ ಮಂಡಳಿಯ (ಟಿಡಿಬಿ) ಮಾಜಿ ಅಧ್ಯಕ್ಷ ಎ. ಪದ್ಮಕುಮಾರ್ ಅವರಿಗೆ ಸಂಬಂಧಿಸಿದ ಸ್ಥಳಗಳ ಮೇಲೂ ದಾಳಿ ನಡೆದಿದ್ದು, 21 ಕಡೆಗಳಲ್ಲಿ ಮಹತ್ವದ ದಾಖಲೆಗಳನ್ನು ಜಾಲಾಡಲಾಗಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಕನ್ನಡಿಗರ ಹಕ್ಕುಗಳನ್ನು ಕೊಲ್ಲದಿರಲಿ ಕೇರಳ, ಒಡನೆಯೇ ತಿದ್ದುಪಡಿ ತರಲಿ
ಕೇರಳ ಪೊಲೀಸರು ದಾಖಲಿಸಿದ್ದ ಎಫ್‌ಐಆರ್ ಅನ್ನು ಆಧರಿಸಿ, ಇಡಿ ಇತ್ತೀಚೆಗೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ (PMLA) ಪ್ರಕರಣ ದಾಖಲಿಸಿಕೊಂಡಿತ್ತು. ಮೂರು ರಾಜ್ಯಗಳಲ್ಲಿ ಹರಡಿರುವ ಈ ಜಾಲ ಮತ್ತು ಹಣಕಾಸಿನ ಅವ್ಯವಹಾರದ ಜಾಡು ಹಿಡಿದು ಇಡಿ ಅಧಿಕಾರಿಗಳು ಈಗ ಶೋಧ ಕಾರ್ಯವನ್ನು ವಿಸ್ತರಿಸಿದ್ದಾರೆ.
ಮತ್ತೊಂದೆಡೆ, ಈ ಪ್ರಕರಣವನ್ನು ಕೇರಳ ಹೈಕೋರ್ಟ್‌ನ ನೇರ ಮೇಲ್ವಿಚಾರಣೆಯಲ್ಲಿ ಕೇರಳ ಪೊಲೀಸರ ವಿಶೇಷ ತನಿಖಾ ದಳ (SIT) ಕೂಡ ತನಿಖೆ ನಡೆಸುತ್ತಿದೆ. ಚಿನ್ನದ ಬಳಕೆಯಲ್ಲಿನ ಆಡಳಿತಾತ್ಮಕ ಲೋಪಗಳು, ಅಧಿಕೃತ ದುರ್ವರ್ತನೆ ಮತ್ತು ಪಿತೂರಿಗಳ ಕುರಿತು SIT ತನ್ನ ಪ್ರತ್ಯೇಕ ತನಿಖೆಯನ್ನು ಮುಂದುವರಿಸಿದೆ.
ದೇವಾಲಯದ ಗರ್ಭಗುಡಿಯ (‘ಶ್ರೀಕೋವಿಲ್’) ಬಾಗಿಲು ಚೌಕಟ್ಟುಗಳು ಮತ್ತು ದ್ವಾರಪಾಲಕ ವಿಗ್ರಹಗಳಿಗೆ ಬಳಸಲಾದ ಚಿನ್ನದ ಲೇಪಿತ ತಾಮ್ರದ ಫಲಕಗಳಲ್ಲಿನ ಚಿನ್ನ ಕಣ್ಮರೆಯಾಗಿದೆ ಎಂಬುದು ಗಂಭೀರ ಆರೋಪವಾಗಿದೆ.





