ಕೇರಳದ ಶಬರಿಮಲೆ ಸೇರಿ ಧಾರ್ಮಿಕ ಸ್ಥಳಗಳಲ್ಲಿ ಹಾಗೂ ಧರ್ಮಗಳಲ್ಲಿ ಮಹಿಳಾ ತಾರತಮ್ಯದ ಕುರಿತು ಸಲ್ಲಿಕೆಯಾಗಿರುವ ಅರ್ಜಿಯ ಅಂತಿಮ ವಿಚಾರಣೆಯನ್ನು 9 ನ್ಯಾಯಮೂರ್ತಿಗಳ ಪೀಠ ನಡೆಸಲಿದೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
9 ನ್ಯಾಯಮೂರ್ತಿಗಳನ್ನೊಳಗೊಂಡ ಪೀಠವನ್ನು ಮುಖ್ಯನ್ಯಾಯಮೂರ್ತಿ ರಚಿಸಲಿದ್ದಾರೆ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಹಾಗೂ ವಿಪುಲ್ ಎಂ. ಪಾಂಚೋಲಿ ಅವರಿದ್ದ ಪೀಠ ಹೇಳಿತು. ಏಪ್ರಿಲ್ 9 ರಿಂದ ವಿಚಾರಣೆ ಆರಂಭವಾಗಲಿದೆ.
ಏಪ್ರಿಲ್ 22ರಂದು ವಿಚಾರಣೆ ಮುಗಿಯುವ ನಿರೀಕ್ಷೆ ಇದೆ. ಮಾರ್ಚ್ 14ರೊಳಗೆ ವಾದವನ್ನು ಬರಹ ರೂಪದಲ್ಲಿ ಸಲ್ಲಿಸಿ ಎಂದು ಪಕ್ಷಗಾರರಿಗೆ ಕೋರ್ಟ್ ಇದೇ ವೇಳೆ ಸೂಚಿಸಿದೆ.
ಎಲ್ಲಾ ವಯೋಮಾನದ ಮಹಿಳೆಯರಿಗೆ ಶಬರಿಮಲೆ ದೇಗುಲ ಪ್ರವೇಶಿಸಬಹುದು ಎಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಪುನರ್‌ಪರಿಶೀಲನೆ ನಡೆಸಲು ಸಲ್ಲಿಸಿರುವ ಅರ್ಜಿಗೆ ಬೆಂಬಲ ನೀಡಲಾಗಿದೆ ಎಂದು ಕೇಂದ್ರ ಸರ್ಕಾರದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಖರ್ಗೆ ಭಾಷಣ ಕಿತ್ತು ಹಾಕಿದ್ದು ಖಂಡನೀಯ; ಅಂದು ದ್ರೋಣಾಚಾರ್ಯ, ಇಂದು ಸಂಘಾಚಾರ್ಯ!
ಶಬರಿಮಲೆ ತೀರ್ಪನ್ನು ಪುನರ್‌ಪರಿಶೀಲನೆ ನಡೆಸಲು ಸಲ್ಲಿಸಲಾದ ಅರ್ಜಿದಾರರ ನೋಡಲ್ ವಕೀಲರನ್ನಾಗಿ ಕೃಷ್ಣ ಕುಮಾರ್ ಸಿಂಗ್ ಅವರನ್ನೂ, ಪುನರ್‌ಪರಿಶೀಲನೆಗೆ ವಿರುದ್ಧ ಇರುವವರಿಗೆ ನೋಡಲ್ ವಕೀಲರಾಗಿ ಶಾಶ್ವತಿ ಪರಿಯವರನ್ನೂ ಇದೇ ವೇಳೆ ಕೋರ್ಟ್ ನೇಮಿಸಿದೆ.
ಜೊತೆಗೆ ಹಿರಿಯ ವಕೀಲರಾದ ಕೆ. ಪರಮೇಶ್ವರ ಹಾಗೂ ಶಿವಂ ಸಿಂಗ್ ಅವರನ್ನು ಅಮಿಕಸ್ ಕ್ಯೂರಿಗಳನ್ನಾಗಿ ನೇಮಿಸಿದ್ದಾಗಿಯೂ ಕೋರ್ಟ್ ಪ್ರಕಟಿಸಿದೆ.
2026ರ ಏಪ್ರಿಲ್ 7ರಂದು ಬೆಳಿಗ್ಗೆ 10.30ಕ್ಕೆ 9 ಮಂದಿ ನ್ಯಾಯಮೂರ್ತಿಗಳ ಪೀಠ ಶಬರಿಮಲೆ ಪ್ರಕರಣದ ಪುನರ್‌ಪರಿಶೀಲನೆ ಅರ್ಜಿಯ ವಿಚಾರಣೆ ನಡೆಸುವುದಾಗಿಯೂ, ಪುನರ್‌ಪರಿಶೀಲನೆ ಅರ್ಜಿದಾರರು ಹಾಗೂ ಅವರಿಗೆ ಬೆಂಬಲ ನೀಡುವವರನ್ನು ಫೆ. 7 ರಿಂದ 9ರವೆಗೆ, ವಿರೋಧಿಸುವವರನ್ನು ಏ. 14 ರಿಂದ 16ರವರೆಗೆ ವಿಚಾರಣೆ ನಡೆಸುವುದಾಗಿ ಕೋರ್ಟ್ ಹೇಳಿದೆ.
ಅಲ್ಲದೆ ಕಾಲಮಿತಿಯನ್ನು ಪಾಲಿಸಬೇಕು ಎಂದು ಪ್ರಕರಣದಲ್ಲಿ ಹಾಜರಾಗುವ ವಕೀಲರಿಗೆ ನ್ಯಾಯಾಲಯ ನಿರ್ದೇಶಿಸಿದೆ.





