2022ರ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಭಾರತೀಯ ಸೇನೆಯ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಿಚಾರಣೆಗೆ ಸುಪ್ರೀಂ ಕೋರ್ಟ್ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ವಿಸ್ತರಿಸಿದೆ.
ನ್ಯಾಯಮೂರ್ತಿಗಳಾದ ಎಂ ಎಂ ಸುಂದ್ರೇಶ್ ಮತ್ತು ವಿಪುಲ್ ಎಂ ಪಾಂಚೋಲಿ ಅವರ ಪೀಠವು ಮಧ್ಯಂತರ ತಡೆಯಾಜ್ಞೆಯನ್ನು ಮುಂದಿನ ವಿಚಾರಣೆವರೆಗೆ (ನವೆಂಬರ್ 20ರವರೆಗೆ) ವಿಸ್ತರಿಸಿದೆ. ಅಫಿಡವಿಟ್ ಸಲ್ಲಿಸುವುದನ್ನು ಮುಂದೂಡುವಂತೆ ಅರ್ಜಿದಾರರ ಪರ ವಕೀಲರು ಕೋರಿದ ಬಳಿಕ ಪೀಠವು ಈ ನಿರ್ಧಾರಕ್ಕೆ ಬಂದಿದೆ.
ಇದನ್ನು ಓದಿದ್ದೀರಾ? ನಿಜವಾದ ಭಾರತೀಯರಾಗಿದ್ದರೆ ಈ ಹೇಳಿಕೆ ನೀಡುತ್ತಿರಲಿಲ್ಲ: ರಾಹುಲ್ ಗಾಂಧಿ ವಿರುದ್ದ ಸುಪ್ರೀಂ ತರಾಟೆ
ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯದ ಸಮನ್ಸ್ ಆದೇಶವನ್ನು ಪ್ರಶ್ನಿಸಿ ರಾಹುಲ್ ಗಾಂಧಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ಮೇ 29ರಂದು ವಜಾಗೊಳಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ರಾಹುಲ್ ಗಾಂಧಿ ಸಲ್ಲಿಸಿದ ಅರ್ಜಿಯನ್ನು ಪೀಠ ವಿಚಾರಣೆ ನಡೆಸುತ್ತಿದೆ. ರಾಹುಲ್ ಗಾಂಧಿ ಸಲ್ಲಿಸಿದ ಅರ್ಜಿಯೊಂದಿಗೆ ಎರಡು ಪ್ರತ್ಯೇಕ ಅರ್ಜಿಗಳನ್ನೂ ವಿಚಾರಣೆಗೆ ಪಟ್ಟಿ ಮಾಡಲಾಗಿದೆ.
ಆಗಸ್ಟ್ 4ರಂದು ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಪೀಠ, ರಾಹುಲ್ ಗಾಂಧಿ ವಿರುದ್ಧ ವಿಚಾರಣೆಗೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು. ಆದರೆ ರಾಹುಲ್ ಅವರನ್ನು ತರಾಟೆಗೆ ತೆಗೆದುಕೊಂಡಿತ್ತು.
“2000 ಚದರ ಕಿಲೋಮೀಟರ್ ಭಾರತೀಯ ಪ್ರದೇಶವನ್ನು ಚೀನಿಯರು ಆಕ್ರಮಿಸಿಕೊಂಡಿದ್ದಾರೆಂದು ನಿಮಗೆ ಹೇಗೆ ತಿಳಿಯಿತು? ನೀವು ಅಲ್ಲಿದ್ದೀರಾ? ನಿಮ್ಮ ಬಳಿ ಯಾವುದೇ ವಿಶ್ವಾಸಾರ್ಹ ಸಾಕ್ಷ್ಯವಿದೆಯೇ? ನೀವು ಯಾವುದೇ ಸಾಕ್ಷಿಯಿಲ್ಲದೆ ಈ ಹೇಳಿಕೆಗಳನ್ನು ಏಕೆ ನೀಡುತ್ತೀರಿ… ನೀವು ನಿಜವಾದ ಭಾರತೀಯರಾಗಿದ್ದರೆ ಈ ರೀತಿ ಹೇಳಿಕೆಗಳನ್ನು ನೀಡುತ್ತಿರಲಿಲ್ಲ” ಎಂದು ಹೇಳಿತ್ತು.
ಸುಪ್ರೀಂ ಕೋರ್ಟ್‌ನ ಈ ಹೇಳಿಕೆ ಬಗ್ಗೆ ಇಂಡಿಯಾ ಒಕ್ಕೂಟದ ನಾಯಕರುಗಳು ಅಸಮಾಧಾನ ವ್ಯಕ್ತಪಡಿಸಿದ್ದರು. “ಇಂತಹ ಹೇಳಿಕೆಗಳು ಅನಗತ್ಯ. ರಾಷ್ಟ್ರೀಯ ಹಿತಾಸಕ್ತಿಯ ವಿಷಯಗಳಲ್ಲಿ ಸರ್ಕಾರವನ್ನು ಪ್ರಶ್ನಿಸುವುದು ರಾಜಕೀಯ ಪಕ್ಷಗಳ ಪ್ರಜಾಸತ್ತಾತ್ಮಕ ಹಕ್ಕು ಮತ್ತು ಕರ್ತವ್ಯ” ಎಂದು ಹೇಳಿದ್ದರು.





