ಕೇಂದ್ರಾಡಳಿತ ಪ್ರದೇಶವಾಗಿರುವ ಲಡಾಖ್‌ಗೆ ರಾಜ್ಯ ಸ್ಥಾನಮಾನ ನೀಡಬೇಕು ಎಂದು ಹಲವು ವರ್ಷಗಳಿಂದ ನಿರಂತರ ಹೋರಾಟಗಳು ನಡೆಯುತ್ತಿವೆ. ಈ ನಡುವೆ ಜಮ್ಮು ಕಾಶ್ಮೀರಕ್ಕೂ ಮತ್ತೆ ರಾಜ್ಯ ಸ್ಥಾನಮಾನ ನೀಡಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿದೆ. ಈ ಬಗ್ಗೆ ವಿವರವಾದ ಪ್ರತಿಕ್ರಿಯೆಯನ್ನು ನೀಡಲು ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರ ಸರ್ಕಾರಕ್ಕೆ ಹೆಚ್ಚುವರಿ ನಾಲ್ಕು ವಾರಗಳ ಕಾಲಾವಕಾಶ ನೀಡಿದೆ.
ವಿಚಾರಣೆಯ ಸಮಯದಲ್ಲಿ, ಕೇಂದ್ರದ ಪರವಾಗಿ ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ ಹಾಜರಾಗಿದ್ದು ಪ್ರತಿಕ್ರಿಯೆಯನ್ನು ಸಲ್ಲಿಸಲು ಹೆಚ್ಚಿನ ಸಮಯವನ್ನು ಕೋರಿದರು. ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರನ್ನೊಳಗೊಂಡ ಪೀಠವು ಈ ವಿನಂತಿಯನ್ನು ಪುರಸ್ಕರಿಸಿ ಗಡುವನ್ನು ನಾಲ್ಕು ವಾರಗಳ ಕಾಲ ವಿಸ್ತರಿಸಿದೆ.
ಇದನ್ನು ಓದಿದ್ದೀರಾ? ಜಮ್ಮು ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು; ಕೇಂದ್ರದ ನಿರ್ಧಾರ ಮಾನ್ಯ ಮಾಡಿದ ಸುಪ್ರೀಂ
ಜಮ್ಮು ಕಾಶ್ಮೀರದ ನಿವಾಸಿಗಳಾದ ಶಿಕ್ಷಣ ತಜ್ಞ ಜಹೂರ್ ಅಹ್ಮದ್ ಭಟ್ ಮತ್ತು ಸಾಮಾಜಿಕ ಕಾರ್ಯಕರ್ತ ಖುರ್ಷಾಯಿದ್ ಅಹ್ಮದ್ ಮಲಿಕ್ ಅವರು ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯವು ವಿಚಾರಣೆ ನಡೆಸುತ್ತಿದೆ. ಜಮ್ಮು ಕಾಶ್ಮೀರದ ರಾಜ್ಯ ಸ್ಥಾನಮಾನವನ್ನು ಪುನಃಸ್ಥಾಪಿಸಲು ಕೇಂದ್ರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ರಾಜ್ಯ ಸ್ಥಾನಮಾನವನ್ನು ಪುನಃಸ್ಥಾಪಿಸುವಲ್ಲಿ ನಿರಂತರ ವಿಳಂಬ ಮಾಡುವುದು ಜಮ್ಮು ಮತ್ತು ಕಾಶ್ಮೀರದ ನಾಗರಿಕರ ಹಕ್ಕುಗಳ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ. ಹಾಗೆಯೇ ಜಮ್ಮು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶ ಸ್ಥಾನಮಾನ ತಾತ್ಕಾಲಿಕವಾಗಿದ್ದು, ಲಡಾಖ್ ಕೇಂದ್ರಾಡಳಿತ ಪ್ರದೇಶವನ್ನು ಹೊರತುಪಡಿಸಿ ರಾಜ್ಯ ಸ್ಥಾನಮಾನವನ್ನು ಪುನಃಸ್ಥಾಪಿಸಲಾಗುವುದು ಎಂದು ಮೆಹ್ತಾ ಈ ಹಿಂದೆ ನ್ಯಾಯಾಲಯಕ್ಕೆ ಭರವಸೆ ನೀಡಿದ್ದರು ಎಂಬುದನ್ನೂ ಅರ್ಜಿದಾರರು ಉಲ್ಲೇಖಿಸಿದ್ದಾರೆ.
ಈ ಹಿಂದೆ ಆಗಸ್ಟ್ 14 ರಂದು ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಎಂಟು ವಾರಗಳಲ್ಲಿ ಪ್ರತಿಕ್ರಿಯಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ಆದರೆ ಕೇಂದ್ರ ಪ್ರತಿಕ್ರಿಯಿಸಿಲ್ಲ, ಹೆಚ್ಚುವರಿ ಕಾಲಾವಕಾಶ ಕೋರಿದೆ. ಈ ನಿಟ್ಟಿನಲ್ಲಿ ಅರ್ಜಿದಾರರು ಕೇಂದ್ರಕ್ಕೆ ಪ್ರತಿಕ್ರಿಯಿಸಲು ಕಾಲಮಿತಿ ವಿಧಿಸಿ ನಿರ್ದೇಶಿಸಬೇಕು ಎಂದು ಅರ್ಜಿ ಸಲ್ಲಿಸಲಾಗಿದೆ.





