ದೇಶಾದ್ಯಂತ ಅರ್ಧದಲ್ಲಿಯೇ ಶಾಲೆ ತೊರೆದ ಮಕ್ಕಳ ಸಂಖ್ಯೆ ಗಣನೀಯವಾಗಿದೆ. ಅತೀ ಹೆಚ್ಚು ಮಕ್ಕಳು ಶಾಲೆ ತೊರೆದ ಪಟ್ಟಿಯಲ್ಲಿ ಪ್ರಧಾನಿ ಮೋದಿ ಅವರ ತವರು ರಾಜ್ಯ ಅಗ್ರಸ್ಥಾನದಲ್ಲಿದೆ. ಕರ್ನಾಟಕವು 12ನೇ ಸ್ಥಾನದಲ್ಲಿದೆ ಎಂಬುದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ನೀಡಿದ ಮಾಹಿತಿಯಿಂದ ತಿಳಿದುಬಂದಿದೆ. ದಕ್ಷಿಣ ಭಾರತದಲ್ಲಿ 6 ರಾಜ್ಯಗಳ ಪೈಕಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ.
ಇತ್ತೀಚೆಗೆ ಮುಗಿದ ಸಂಸತ್ ಚಳಿಗಾಲದ ಅಧಿವೇಶನದಲ್ಲಿ ಕಾಂಗ್ರೆಸ್ ಸಂಸದೆ ರೇಣುಕಾ ಚೌಧರಿ ಅವರು ವಿವಿಧ ರಾಜ್ಯಗಳಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ವಿವರವನ್ನು ಕೇಳಿದ್ದರು. ಅವರ ಪ್ರಶ್ನೆಗೆ ಸಚಿವಾಲಯ ಲಿಖಿತವಾಗಿ ಉತ್ತರಿಸಿತ್ತು. ಇದೀಗ, ಸಚಿವಾಲಯ ನೀಡಿದ್ದ ಮಾಹಿತಿ ದೊರೆತಿದದೆ.
ಸಚಿವಾಲಯದ ಮಾಹಿತಿ ಪ್ರಕಾರ, 2025-26ರ ಶೈಕ್ಷಣಿಕ ವರ್ಷದಲ್ಲಿ ಕರ್ನಾಟಕದಲ್ಲಿ 14,087 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಅವರಲ್ಲಿ 6,462 ಬಾಲಕಿಯರಿದ್ದಾರೆ. ಕಳೆದ ಶೈಕ್ಷಣಿಕ ವರ್ಷಕ್ಕೆ(2024-25) ಹೋಲಿಸಿದರೆ, ಈ ವರ್ಷ ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆ ಅಧಿಕವಾಗಿದೆ. ಕಳೆದ ವರ್ಷ 9,422 ಮಕ್ಕಳು ಹೊರಗುಳಿದಿದ್ದರು. ಅವರಲ್ಲಿ ಬಾಲಕಿಯರ ಸಂಖ್ಯೆ 115 ಮಾತ್ರವೇ ಇತ್ತು.
ಇಡೀ ಭಾರತದ ಎಲ್ಲ ರಾಜ್ಯಗಳನ್ನು ಪರಿಗಣಿಸಿದರೆ
ಗುಜರಾತ್‌ನಲ್ಲಿ ಅತೀ ಹೆಚ್ಚು ಮಕ್ಕಳು ಶಾಲೆ ತೊರೆದಿದ್ದಾರೆ. ನಂತರದ ಎರಡು ಮತ್ತು ಮೂರನೇ ಸ್ಥಾನದಲ್ಲಿ ಕ್ರಮವಾಗಿ ಅಸ್ಸಾಂ ಮತ್ತು ಉತ್ತರ ಪ್ರದೇಶ ಇದೆ ಎಂದು ಸಚಿವಾಲಯದ ಮಾಹಿತಿ ವಿವರಿಸಿದೆ.
ದಕ್ಷಿಣ ಭಾರತದಲ್ಲಿ ಆಂಧ್ರಪ್ರದೇಶವು ಅಗ್ರ ಸ್ಥಾನದಲ್ಲಿದೆ. ಆ ರಾಜ್ಯದಲ್ಲಿ 46,463 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದು, ಅವರಲ್ಲಿ 17,584 ಬಾಲಕಿಯರು. ತಮಿಳುನಾಡಿನಲ್ಲಿ 19,897 ಮಕ್ಕಳು ಹೊರಗುಳಿದಿದ್ದು ಅವರಲ್ಲಿ 9,054 ಹುಡುಗಿಯರು. ತೆಲಂಗಾಣವು ನಾಲ್ಕನೇ ಸ್ಥಾನದಲ್ಲಿದ್ದು, ಅಲ್ಲಿ 4,753 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಅವರಲ್ಲಿ 2006 ಹೆಣ್ಣು ಮಕ್ಕಳಿದ್ದಾರೆ.
ಇಡೀ ದೇಶದಲ್ಲಿ ಅತೀ ಕಡಿಮೆ ಮಕ್ಕಳು ಶಾಲೆಯಿಂದ ಹೊರಗುಳಿದಿರುವ ರಾಜ್ಯ ಕೇರಳವಾಗಿದೆ. ಅಲ್ಲಿ, 1,773 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಈ ಪೈಕಿ 539 ಬಾಲಕಿಯರಿದ್ದಾರೆ.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿವಿಧ ಯೋಜನೆಗಳ ಹೊರತಾಗಿಯೂ, ಹಲವು ಶಾಲೆಗಳಲ್ಲಿ ಶೌಚಾಲಯ, ಕುಡಿಯುವ ನೀರು, ಶಿಕ್ಷಕರ ಕೊರತೆ ಇದೆ. ಈ ಕಾರಣಗಳ ಜೊತೆಗೆ ಬಾಲ್ಯವಿವಾಹವು ಹೆಣ್ಣುಮಕ್ಕಳು ಶಾಲೆಯಿಂದ ಹೊರಗುಳಿಯಲು ಪ್ರಮುಖ ಕಾರಣವಾಗಿದೆ ಎಂದು ಸಚಿವಾಲಯ ಹೇಳಿದೆ.




