ರಜೆ ನಿರಾಕರಿಸಿದ್ದು ಮಾತ್ರವಲ್ಲದೆ, ಸಂಬಳವನ್ನೂ ಕಡಿತಗೊಳಿಸಿದ್ದಾರೆಂದು ಕುಪಿತಗೊಂಡ ಸೆಕ್ಯುರಿಟಿ ಸಿಬ್ಬಂದಿಯೊಬ್ಬರು ತಾನು ಕೆಲಸ ಮಾಡುತ್ತಿದ್ದ ಬ್ಯಾಂಕ್‌ನ ಮ್ಯಾನೇಜರ್‌ನನ್ನು ಗುಂಡಿಕ್ಕಿ ಕೊಂದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಗಾಜಿಯಾಬಾದ್‌ನ ಬಲರಾಮ್ ನಗರದಲ್ಲಿರುವ ‘ಪಂಜಾಬ್ – ಸಿಂಧ್ ಬ್ಯಾಂಕ್’ (ಪಿಎಸ್‌ಬಿ) ಶಾಖೆಯಲ್ಲಿ ಘಟನೆ ನಡೆದಿದೆ.
ಅಭಿಷೇಕ್ ಕುಮಾರ್ – ಮೃತ ಬ್ಯಾಂಕ್ ಮ್ಯಾನೇಜರ್. ಅವರು ಮೂಲತಃ ಬಿಹಾರದ ಪಾಟ್ನಾದವರು ಎಂದು ತಿಳಿದುಬಂದಿದೆ. ಆರೋಪಿಯನ್ನು ರವೀಂದರ್ ಹೂಡಾ ಎಂದು ಗುರುತಿಸಲಾಗಿದ್ದು, ಆತ ಬಾಗ್‌ಪತ್ ಜಿಲ್ಲೆಯ ಮನ್ಸೂರ್‌ಪುರದ ನಿವಾಸಿ ಎಂದು ವರದಿಯಾಗಿದೆ. ಘಟನೆ ಬೆನ್ನಲ್ಲೇ ಆರೋಪಿ ರವೀಂದರ್ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾಜಿ ಸೈನಿಕನಾಗಿರುವ ರವೀಂದರ್ ಕೂಡ, ತಮ್ಮ ನಿವೃತ್ತಿಯ ಬಳಿಕ ಪಿಎಸ್‌ಬಿಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಅವರು, ಸೋಮವಾರ ಮಧ್ಯಾಹ್ನ ಮ್ಯಾನೇಜರ್ ಅಭಿಷೇಕ್ ಕುಮಾರ್ ಅವರ ಕ್ಯಾಬಿನ್‌ಗೆ ನುಗ್ಗಿ, ರಜೆ ವಿಚಾರವಾಗಿ ಗಲಾಟೆ ಮಾಡಿದ್ದಾರೆ. ಮಾತಿ ಚಕಮಕಿ ನಡುವೆ ಕುಪಿತಗೊಂಡ ರವೀಂದರ್ ಬಂದೂಕಿನಿಂದ ಗುಂಡುಹಾರಿಸಿದ್ದಾರೆ. ಬಳಿಕ, ಬ್ಯಾಂಕ್‌ನಿಂದ ಪರಾರಿಯಾಗಿದ್ದಾರೆ.
ಬ್ಯಾಂಕ್ ಸಿಬ್ಬಂದಿಗಳು ಮ್ಯಾನೇಜರ್ ಅಭಿಷೇಕ್ ಅವರನ್ನು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆದರೆ, ಆಸ್ಪತ್ರೆಗೆ ತಲುಪುವ ವೇಳೆಗೆ ಅವರು ಮೃತಪಟ್ಟಿದ್ದಾಗಿ ವೈದ್ಯರು ಘೋಷಿಸಿದ್ದಾರೆ.




