ಲೈಂಗಿಕ ಶಿಕ್ಷಣ ನೀಡಲು ಒಂಬತ್ತನೇ ತರಗತಿಯವರೆಗೆ ಕಾಯುವ ಬದಲಾಗಿ, ಅದಕ್ಕೂ ಸಣ್ಣ ವಯಸ್ಸಲ್ಲೇ ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅತ್ಯಾಚಾರ ಪ್ರಕರಣದ ಆರೋಪಿಯಾಗಿರುವ 15 ವರ್ಷದ ಬಾಲಕನೋರ್ವನ ಜಾಮೀನು ಅರ್ಜಿ ವಿಚಾರಣೆಯ ವೇಳೆ ಸುಪ್ರೀಂ ಕೋರ್ಟ್ ಲೈಂಗಿಕ ಶಿಕ್ಷಣದ ಮಹತ್ವವನ್ನು ಎತ್ತಿಹಿಡಿದಿದೆ.
ನ್ಯಾಯಮೂರ್ತಿ ಸಂಜಯ್ ಕುಮಾರ್ ಮತ್ತು ನ್ಯಾಯಮೂರ್ತಿ ಅಲೋಕ್ ಅರಾದೆ ಅವರನ್ನು ಒಳಗೊಂಡ ದ್ವಿಸದಸ್ಯ ಪೀಠವು, “ಮಕ್ಕಳು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇರುವಾಗಲೇ ಲೈಂಗಿಕ ಶಿಕ್ಷಣವನ್ನು ನೀಡಬೇಕು. ಇದರಿಂದಾಗಿ ಪ್ರೌಢಾವಸ್ಥೆಗೆ ಬರುವುದಕ್ಕೂ ಮುನ್ನವೇ ತಮ್ಮಲ್ಲಾಗುವ ಜೈವಿಕ, ಹಾರ್ಮೋನ್ ಬದಲಾವಣೆಗಳ ಬಗ್ಗೆ ಮಕ್ಕಳು ತಿಳಿಯುವಂತಿರಬೇಕು” ಎಂದು ಹೇಳಿದೆ.
ಇದನ್ನು ಓದಿದ್ದೀರಾ? ಮಹಿಳೆಯರ ಮೇಲಿನ ನಿಲ್ಲದ ಶೋಷಣೆ; ಶಿಕ್ಷಣ ಒಂದೇ ಪರಿಹಾರ
“ಒಂಬತ್ತನೇ ತರಗತಿಗೂ ಮುನ್ನವೇ ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡಬೇಕು ಎಂಬುದು ನಮ್ಮ ಅಭಿಪ್ರಾಯ. ಆದರೆ ಈ ಬಗ್ಗೆ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳುವುದು ಸಂಬಂಧಪಟ್ಟ ಅಧಿಕಾರಿಗಳಿಗೆ ಬಿಟ್ಟ ವಿಚಾರ. ಮಕ್ಕಳು ಪ್ರೌಢವಸ್ಥೆಗೆ ಬರುವ ಮುನ್ನವೇ ಬದಲಾವಣೆಗಳ ಬಗ್ಗೆ ಮಾಹಿತಿ ನೀಡುವುದು ಉತ್ತಮ” ಎಂದು ಪೀಠ ತಿಳಿಸಿದೆ.
ಇನ್ನು ಪೀಠವು ಬಾಲಕನಿಗೆ ಜಾಮೀನು ನೀಡಿದ್ದು ಕೆಲವು ಷರತ್ತುಗಳನ್ನೂ ವಿಧಿಸಿದೆ. ಹಾಗೆಯೇ ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡುವ ಬಗ್ಗೆ ಹೆಚ್ಚುವರಿ ಅಫಿಡವಿಟ್ ಸಲ್ಲಿಸುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಕೋರ್ಟ್ ಆದೇಶಿಸಿದೆ.





