ಪರಮಾಣು ವಿದ್ಯುತ್ ಕ್ಷೇತ್ರದಲ್ಲಿ ನೇರ ವಿದೇಶಿ ಬಂಡವಾಳ ಹೂಡಿಕೆಗೆ (FDI) ಶೇಕಡಾ 74ರಿಂದ 100 ರವರೆಗೆ ಅವಕಾಶ ಕಲ್ಪಿಸುವುದಕ್ಕೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸಚಿವ ಮಂಡಳಿ ಅಸ್ತು ಎಂದಿದೆ. ಈ ನಿರ್ಧಾರ ದೇಶದ ಇಂಧನ ನೀತಿ, ರಾಷ್ಟ್ರೀಯ ಭದ್ರತೆ ಮತ್ತು ದೇಶೀಯ ಆರ್ಥಿಕ ಸ್ವಾವಲಂಬನೆ ಕುರಿತು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ಪರಮಾಣು ವಿದ್ಯುತ್ ಕ್ಷೇತ್ರದ ಮೇಲೆ ರಾಜ್ಯದ ಸಂಪೂರ್ಣ ನಿಯಂತ್ರಣ ಇರಬೇಕು ಎಂಬ ಭಾರತ ದಶಕಗಳ ತತ್ವವನ್ನು ಬದಲು ಮಾಡಿ ಇದೀಗ ಈ ಕ್ಷೇತ್ರಕ್ಕೆ ವಿದೇಶಿ ಬಂಡವಾಳ ಮತ್ತು ಖಾಸಗಿ ಪಾಲುದಾರರನ್ನು ಆಹ್ವಾನಿಸುವ ನಡೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು ಅಣು ಶಕ್ತಿಮಸೂದೆ–2025ಕ್ಕೆ ಅನುಮೋದನೆ ನೀಡಿದೆ. ಈ ಮಸೂದೆಗೆ SHANTI– Sustainable Harnessing and Advancement of Nuclear Energy for Transforming India ಎಂಬ ಹೆಸರಿಡಲಾಗಿದೆ. ಇದು ಭಾರತದಲ್ಲಿ ಅಣುಶಕ್ತಿ ಕ್ಷೇತ್ರ ಆರಂಭವಾದ ನಂತರ ನಡೆದ ಅತ್ಯಂತ ದೊಡ್ಡ ಸುಧಾರಣೆಯಾಗಿದೆ. ಕಳೆದ ಆರು ದಶಕಗಳಿಗೂ ಹೆಚ್ಚು ಕಾಲ ಸಂಪೂರ್ಣವಾಗಿ ಅಣುಶಕ್ತಿ ಇಲಾಖೆ (DAE) ನಿಯಂತ್ರಣದಲ್ಲಿದ್ದ ಈ ಕ್ಷೇತ್ರವನ್ನು ಇದೀಗ ಖಾಸಗಿ ವಲಯದ ಭಾಗವಹಿಸುವಿಕೆಗೆ ತೆರೆಯಲಾಗುತ್ತಿದೆ. ಇಷ್ಟು ವರ್ಷಗಳ ಕಾಲ ಕಟ್ಟುನಿಟ್ಟಾಗಿ ನಿಯಂತ್ರಣದಲ್ಲಿದ್ದ ಮತ್ತು ಹೆಚ್ಚಿನ ರಹಸ್ಯತೆಯಿಂದ ಕೂಡಿದ್ದ ಕ್ಷೇತ್ರಕ್ಕೆ ಇದು ಹೊಸ ದಾರಿ ತೆರೆದಿದೆ ಎನ್ನಲಾಗಿದೆ.
ಈ SHANTI ಮಸೂದೆಯನ್ನು ಸೋಮವಾರ (ಡಿ.15)ದಂದು ಲೋಕಸಭೆಯಲ್ಲಿ ಪರಿಚಯಿಸಲಾಗಿದೆ. ಭಾರತದಲ್ಲಿ ಅಣು ವಿದ್ಯುತ್ ಉತ್ಪಾದನೆಗೆ ದೇಶೀಯ ಹಾಗೂ ವಿದೇಶಿ ಖಾಸಗಿವಲಯದ ಭಾಗವಹಿಸುವಿಕೆಯನ್ನು ಉತ್ತೇಜಿಸುವುದು ಈ ಮಸೂದೆಯ ಉದ್ದೇಶವಾಗಿದೆ ಎಂದು ಸರ್ಕಾರ ಸ್ಪಷ್ಟನೆ ನೀಡಿದೆ. ಇದಕ್ಕಾಗಿ, ಈಗ ಜಾರಿಯಲ್ಲಿರುವ ಅಣುಶಕ್ತಿ ಕಾಯ್ದೆ–1962 ಮತ್ತು ಅಣುಹಾನಿಗೆ ನಾಗರಿಕ ಹೊಣೆಗಾರಿಕೆ ಕಾಯ್ದೆ–2010 (CLND Act) ಯನ್ನು ರದ್ದುಗೊಳಿಸಿ, ಅವುಗಳ ಬದಲಿಗೆ SHANTI Bill-2025 ಅನ್ನು ತರಲಾಗುತ್ತಿದೆ. ಸರಳವಾಗಿ ಹೇಳುವುದಾದರೆ, ಇದುವರೆಗೆ ಸಂಪೂರ್ಣವಾಗಿ ಸರ್ಕಾರದ ನಿಯಂತ್ರಣದಲ್ಲಿದ್ದ ಅಣು ವಿದ್ಯುತ್ ಕ್ಷೇತ್ರವನ್ನು ಈಗ ಹೊಸ ಕಾನೂನಿನ ಮೂಲಕ ಖಾಸಗಿ ಮತ್ತು ವಿದೇಶಿ ಹೂಡಿಕೆದಾರರ ಕೈಗಿಡುವ ಪ್ರಯತ್ನ ಇದಾಗಿದೆ. ಈ ಮೂಲಕ ಅಣು ವಿದ್ಯುತ್ ಉತ್ಪಾದನೆಯನ್ನು ವೇಗವಾಗಿ ಹೆಚ್ಚಿಸುವುದು ಮತ್ತು ದೇಶದ ಇಂಧನ ಅಗತ್ಯಗಳನ್ನು ಪೂರೈಸುವ ಗುರಿ ಹೊಂದಲಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ.

ಪರಮಾಣು ಶಕ್ತಿ ಇಲಾಖೆ (DAE) ಮತ್ತು ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (NPCIL)ಗಳೇ ಸ್ಥಾವರಗಳ ನಿರ್ಮಾಣ ಮತ್ತು ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದವು. ಇದಕ್ಕೆ ಪ್ರಮುಖ ಕಾರಣ ರಾಷ್ಟ್ರದ ಭದ್ರತೆ, ಅಪಘಾತದ ಭೀತಿ ಮತ್ತು ಅಣ್ವಸ್ತ್ರ–ಅಣುಶಕ್ತಿಯ ನಡುವಿನ ಸೂಕ್ಷ್ಮ ಸಂಬಂಧ. ಆದರೆ ಇತ್ತೀಚಿನ ವರ್ಷಗಳಲ್ಲಿ ಭಾರತ ತನ್ನ ವಿದ್ಯುತ್ ಅಗತ್ಯವನ್ನು ಪೂರೈಸುವಲ್ಲಿ ಭಾರೀ ಒತ್ತಡ ಎದುರಿಸುತ್ತಿದೆ. ಕೈಗಾರೀಕರಣ, ನಗರೀಕರಣ ಮತ್ತು ಡಿಜಿಟಲ್ ಆರ್ಥಿಕತೆಯ ವಿಸ್ತರಣೆಯಿಂದ ವಿದ್ಯುತ್ ಬೇಡಿಕೆ ವೇಗವಾಗಿ ಏರುತ್ತಿದೆ. ಜೊತೆಗೆ ಕಾರ್ಬನ್ ಉತ್ಪಾದನೆಯನ್ನು ಕಡಿತಗೊಳಿಸುವ ಜಾಗತಿಕ ಒತ್ತಡವೂ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿಯೇ ಸರ್ಕಾರ ಪರಮಾಣು ವಿದ್ಯುತ್ ಕ್ಷೇತ್ರವನ್ನು ಮತ್ತೆ ಗಂಭೀರವಾಗಿ ತೆಗೆದುಕೊಂಡಿದೆ.
ಪರಮಾಣು ವಿದ್ಯುತ್ ದಿನದ 24 ಗಂಟೆಯೂ ನಿರಂತರ ವಿದ್ಯುತ್ ನೀಡಬಲ್ಲ ಸಾಮರ್ಥ್ಯ ಹೊಂದಿದೆ. ಹವಾಮಾನ ಬದಲಾವಣೆ ವಿರುದ್ಧದ ಹೋರಾಟದಲ್ಲಿ ಕಾರ್ಬನ್ ರಹಿತ ಇಂಧನವಾಗಿ ಪರಮಾಣು ವಿದ್ಯುತ್‌ಗೆ ಮಹತ್ವ ಹೆಚ್ಚಾಗಿದೆ. ಆದರೆ ಈ ಕ್ಷೇತ್ರದಲ್ಲಿ ಸ್ಥಾವರ ನಿರ್ಮಾಣಕ್ಕೆ ಅಗತ್ಯವಿರುವ ಬಂಡವಾಳ ಅತ್ಯಂತ ದೊಡ್ಡದು. ಒಂದು ಪರಮಾಣು ಸ್ಥಾವರ ನಿರ್ಮಾಣಕ್ಕೆ ಲಕ್ಷಾಂತರ ಕೋಟಿ ರೂಪಾಯಿ ಬೇಕಾಗುತ್ತದೆ. ಸರ್ಕಾರದ ಹಣಕಾಸಿನ ಮಿತಿಗಳು, ಸಾಮಾಜಿಕ ಕಲ್ಯಾಣ ಯೋಜನೆಗಳ ಒತ್ತಡ ಮತ್ತು ಸಾಲದ ಮಟ್ಟವನ್ನು ಗಮನಿಸಿದರೆ, ಸಂಪೂರ್ಣವಾಗಿ ಸರ್ಕಾರಿ ನಿಧಿಯಿಂದ ಪರಮಾಣು ವಿದ್ಯುತ್ ವಿಸ್ತರಣೆ ಸಾಧ್ಯವಿಲ್ಲ ಎಂಬ ಅಭಿಪ್ರಾಯ ನೀತಿನಿರ್ಧಾರಕರಲ್ಲಿದೆ. ಇದೇ ಕಾರಣಕ್ಕೆ ಖಾಸಗಿ ಮತ್ತು ವಿದೇಶಿ ಬಂಡವಾಳವನ್ನು ಈ ಕ್ಷೇತ್ರಕ್ಕೆ ತರಬೇಕೆಂಬ ಯೋಚನೆಗೆ ಮುಂದಾಗಿದ್ದಾರೆ. ವಿದೇಶಿ ಹೂಡಿಕೆ ಬಂದರೆ, ಹಣದ ಜೊತೆಗೆ ಆಧುನಿಕ ತಂತ್ರಜ್ಞಾನವೂ ಭಾರತಕ್ಕೆ ಬರಲಿದೆ ಎಂಬುದು ಸರ್ಕಾರದ ವಾದ.
ಅಮೆರಿಕ, ಫ್ರಾನ್ಸ್, ರಷ್ಯಾ, ಜಪಾನ್‌ನಂತಹ ದೇಶಗಳು ಪರಮಾಣು ತಂತ್ರಜ್ಞಾನದಲ್ಲಿ ಸಾಕಷ್ಟು ಮುನ್ನಡೆ ಸಾಧಿಸಿವೆ. ಸಣ್ಣ ಪರಮಾಣು ರಿಯಾಕ್ಟರ್‌ಗಳು (SMR), ಉತ್ತಮ ಸುರಕ್ಷತಾ ವ್ಯವಸ್ಥೆಗಳು ಮತ್ತು ಕಡಿಮೆ ವೆಚ್ಚದ ವಿನ್ಯಾಸಗಳು ಈಗ ಲಭ್ಯವಿವೆ. ಇವುಗಳನ್ನು ಭಾರತದಲ್ಲಿ ಅಳವಡಿಸಿಕೊಳ್ಳುವುದರಿಂದ ಸ್ಥಾವರ ನಿರ್ಮಾಣದ ವೇಗ ಹೆಚ್ಚಬಹುದು, ವಿದ್ಯುತ್ ಉತ್ಪಾದನಾ ವೆಚ್ಚ ದೀರ್ಘಾವಧಿಯಲ್ಲಿ ಕಡಿಮೆಯಾಗಬಹುದು ಮತ್ತು ʼಕ್ಲೀನ್ ಎನರ್ಜಿʼ ಗುರಿಗಳನ್ನು ಸಾಧಿಸಲು ನೆರವಾಗಬಹುದು. ಜೊತೆಗೆ ದೇಶೀಯ ಕೈಗಾರಿಕೆಗಳಿಗೆ ಹೊಸ ಅವಕಾಶಗಳು ಸೃಷ್ಟಿಯಾಗಬಹುದು, ಉದ್ಯೋಗವೂ ಹೆಚ್ಚಬಹುದು ಎಂಬ ನಿರೀಕ್ಷೆಯೂ ಇದೆ.
ಇತ್ತೀಚಿನ ಬಜೆಟ್ ಭಾಷಣದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ʼವಿಕಸಿತ ಭಾರತಕ್ಕಾಗಿ ಅಣುಶಕ್ತಿ ಮಿಷನ್ʼ ಘೋಷಿಸಿ, 2047ರೊಳಗೆ 100 ಗಿಗಾ ವ್ಯಾಟ್ ಅಣುಶಕ್ತಿ ಅಭಿವೃದ್ಧಿ ಅಗತ್ಯವೆಂದು ಹೇಳಿದ್ದರು. ಈ ಗುರಿ ಸಾಧಿಸಲು ಖಾಸಗಿ ವಲಯದ ಸಹಭಾಗಿತ್ವ ಅನಿವಾರ್ಯವಾಗಿದ್ದು, ಅದಕ್ಕಾಗಿ ಅಣುಶಕ್ತಿ ಕಾಯ್ದೆ ಮತ್ತು ಅಣು ಹಾನಿಗೆ ನಾಗರಿಕ ಹೊಣೆಗಾರಿಕೆ ಕಾಯ್ದೆಗಳಲ್ಲಿ ತಿದ್ದುಪಡಿ ತರಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದರು. ಜತೆಗೆ ಸಣ್ಣ ಅಣು ರಿಯಾಕ್ಟರ್‌ಗಳ (SMR) ಸಂಶೋಧನೆ ಮತ್ತು ಅಭಿವೃದ್ಧಿಗೆ 20,000 ಕೋಟಿ ರೂ. ಅನುದಾನ ಘೋಷಿಸಿದ್ದರು.

2033ರೊಳಗೆ ದೇಶದಲ್ಲೇ ಅಭಿವೃದ್ಧಿಪಡಿಸಿದ ಕನಿಷ್ಠ ಐದು SMRಗಳನ್ನು ಕಾರ್ಯನಿರ್ವಹಣೆಗೆ ತರುವ ಗುರಿಯಿದೆ. ಈ ಸಣ್ಣ ರಿಯಾಕ್ಟರ್‌ಗಳು ಕೈಗಾರಿಕಾ ಕ್ಷೇತ್ರದಲ್ಲಿ ಕಾರ್ಬನ್ ಉತ್ಪಾದನೆಯನ್ನು ಕಡಿತಗೊಳಿಸಲು ಮತ್ತು ವಿದ್ಯುತ್ ಜಾಲದ ಸ್ಥಿರತೆಗೆ ನೆರವಾಗಲಿವೆ. ಇದೇ ವೇಳೆ, 2047ರ 100 ಗಿಗಾ ವ್ಯಾಟ್ ಗುರಿಯಲ್ಲಿ NPCIL ಕನಿಷ್ಠ ಶೇ.50 ರಷ್ಟು ಪಾಲು ವಹಿಸಲಿದೆ. ಪ್ರತಿವರ್ಷ ಕನಿಷ್ಠ ಒಂದು ಅಣು ರಿಯಾಕ್ಟರ್ ಕಾರ್ಯಾರಂಭವಾಗಲಿದೆ ಎಂದು NPCIL ತಿಳಿಸಿದೆ.
ಅಣುಶಕ್ತಿ ಯೋಜನೆಗಳು ಭಾರೀ ಬಂಡವಾಳ, ಕಟ್ಟುನಿಟ್ಟಾದ ಸುರಕ್ಷತಾ ವ್ಯವಸ್ಥೆ ಮತ್ತು ಸಾರ್ವಜನಿಕ ನಂಬಿಕೆಯನ್ನು ಬೇಡುತ್ತವೆ. ಇಂಧನ ಭದ್ರತೆ, ಹೊಣೆಗಾರಿಕೆಯ ಸ್ಪಷ್ಟತೆ ಮತ್ತು ನಿಯಂತ್ರಣ ಸಂಸ್ಥೆಗಳ ಸಾಮರ್ಥ್ಯ ಯಶಸ್ಸಿಗೆ ಪ್ರಮುಖ ಅಂಶಗಳಾಗಿವೆ. ಈ ಹಿನ್ನೆಲೆಯಲ್ಲೇ SHANTI ಮಸೂದೆ ದೇಶದ ಇಂಧನ ಭವಿಷ್ಯಕ್ಕೆ ಮಹತ್ವದ ತಿರುವು ಎಂದು ಪರಿಗಣಿಸಲಾಗುತ್ತಿದೆ.
SHANTI ಮಸೂದೆಯ ನಿರ್ಧಾರವು ಹಲವು ಗಂಭೀರ ಪ್ರಶ್ನೆಗಳನ್ನೂ ಎತ್ತಿದೆ. ಮೊದಲನೆಯದಾಗಿ, ಪರಮಾಣು ಅಪಘಾತಗಳ ಹೊಣೆ ಯಾರದ್ದು ಎಂಬ ಪ್ರಶ್ನೆ. ಭಾರತದಲ್ಲಿ 2010ರಲ್ಲಿ ಜಾರಿಗೆ ಬಂದ ನಾಗರಿಕ ಪರಮಾಣು ಹಾನಿ ಪರಿಹಾರ ಕಾಯ್ದೆ (CLNDA) ಪ್ರಕಾರ, ಅಪಘಾತ ಸಂಭವಿಸಿದರೆ ಸ್ಥಾವರ ನಿರ್ವಹಣೆ ಮಾಡುವ ಸಂಸ್ಥೆಯ ಜೊತೆಗೆ ಉಪಕರಣ ಪೂರೈಕೆದಾರರಿಗೂ ಕೆಲ ಮಟ್ಟಿಗೆ ಹೊಣೆಗಾರಿಕೆ ಇದೆ. ವಿದೇಶಿ ಕಂಪೆನಿಗಳು ಈ ಕಾಯ್ದೆಯ ಬಗ್ಗೆ ಮೊದಲಿನಿಂದಲೂ ಅಸಮಾಧಾನ ವ್ಯಕ್ತಪಡಿಸುತ್ತಿವೆ. ಈಗ ಸರ್ಕಾರ ವಿದೇಶಿ ಹೂಡಿಕೆ ಸುಗಮವಾಗಲೆಂದು ಈ ಕಾಯ್ದೆಯನ್ನು ದುರ್ಬಲಗೊಳಿಸಿದರೆ, ಅಪಘಾತದ ಹೊರೆ ಕೊನೆಗೆ ಸಾರ್ವಜನಿಕರ ಮೇಲೇ ಬೀಳುವ ಅಪಾಯವಿದೆ.
ಇನ್ನೊಂದು ಮುಖ್ಯವಾಗಿ ರಾಷ್ಟ್ರದ ಭದ್ರತೆ. ಪರಮಾಣು ತಂತ್ರಜ್ಞಾನ ಕೇವಲ ವಿದ್ಯುತ್ ಉತ್ಪಾದನೆಗೆ ಸೀಮಿತವಾಗಿರುವುದಿಲ್ಲ. ಸಂಶೋಧನೆ, ಇಂಧನ ಚಕ್ರ ಮತ್ತು ತಂತ್ರಜ್ಞಾನ ನಿಯಂತ್ರಣವೂ ಅದರೊಟ್ಟಿಗೆ ಜೋಡಿಸಲ್ಪಟ್ಟಿರುತ್ತದೆ. ವಿದೇಶಿ ಕಂಪೆನಿಗಳಿಗೆ ಅಥವಾ ಬಂಡವಾಳಿಗರಿಗೆ ಹೆಚ್ಚಿನ ನಿಯಂತ್ರಣ ನೀಡಿದರೆ, ಸಂವೇದನಶೀಲ ಮಾಹಿತಿಯ ಭದ್ರತೆಯನ್ನು ಹೇಗೆ ಖಚಿತಪಡಿಸಿಕೊಳ್ಳುವುದು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಭಾರತದ ಪರಮಾಣು ಕಾರ್ಯಕ್ರಮವು ಸದಾ ʼಸ್ವಾಯತ್ತತೆʼ ತತ್ವದ ಮೇಲೆ ನಿಂತಿದೆ. ಆ ಸ್ವಾಯತ್ತತೆಯು ಹೂಡಿಕೆ ನೀತಿಯ ಬದಲಾವಣೆಯಿಂದ ತನ್ನ ಗಟ್ಟಿತನ ಕಳೆದುಕೊಳ್ಳುವ ಸಾಧ್ಯತೆ ಇರುವುದನ್ನು ನಿರ್ಲಕ್ಷ್ಯ ಮಾಡಲಾಗದು.
ಮಸೂದೆ ಕುರಿತು ಹಿರಿಯ ಪತ್ರಕರ್ತ ಹಾಗೂ ಖ್ಯಾತ ವಿಜ್ಞಾನ ಬರೆಹಗಾರ ನಾಗೇಶ ಹೆಗಡೆ ಅವರು ಪ್ರತಿಕ್ರಿಯಿಸಿ, “ಭೋಪಾಲ ಅನಿಲ ದುರಂತದ ಕತೆ ನಮಗೆ ಮತ್ತೆ ಮತ್ತೆ ನೆನಪಾಗಬೇಕು. ಅಪಘಾತವಾದರೆ ಪರಿಹಾರವನ್ನು ಯಾರು ಕೊಡಬೇಕು, ಎಷ್ಟು ಕೊಡಬೇಕು ಎಂಬುದು ಒಪ್ಪಂದದಲ್ಲಿ ಸ್ಪಷ್ಟ ಇರಲಿಲ್ಲ. ಹಾಗಾಗಿ ಆ ದುರಂತದಲ್ಲಿ ಭಾರತ ಸರ್ಕಾರ ಭಾರೀ ಮುಜುಗರ ಮತ್ತು ಅಪಾರ ನಷ್ಟವನ್ನು ಭರಿಸಬೇಕಾಗಿ ಬಂತು. ನ್ಯಾಯಾಲಯದ ಎದುರು ನಷ್ಟ ಪರಿಹಾರ ಕೋರಲು ಒಪ್ಪಂದದಲ್ಲಿ ಸೂಕ್ತ ಕಲಮುಗಳೇ ಇರಲಿಲ್ಲ. ಯೂನಿಯನ್ ಕಾರ್ಬಾಯಿಡ್ ಕಂಪನಿ ಜುಜುಬಿ 720 ಕೋಟಿ ರೂಪಾಯಿಗಳನ್ನು ಅದೂ ನ್ಯಾಯಾಲಯದ ಆಜ್ಞೆಯ ಪ್ರಕಾರ ಕಕ್ಕಬೇಕಾಯಿತು” ಎಂದು ವಿವರಿಸಿದರು.
“ಪರಮಾಣು ತಂತ್ರಜ್ಞಾನದ ಕತೆ ಬೇರೆಯೇ ಇರುತ್ತದೆ. ಇದರಲ್ಲಿ ಯುರೇನಿಯಂ ಗಣಿಗಾರಿಕೆಯಿಂದ ಹಿಡಿದು, ಅದುರು ಸಂಸ್ಕರಣೆ, ಇಂಧನ ತಯಾರಿಕೆ, ವಿದ್ಯುತ್ ಉತ್ಪಾದನೆ, ಸ್ಥಾವರದ ಉಸ್ತುವಾರಿ, ತ್ಯಾಜ್ಯ ವಿಲೆವಾರಿ… ಹೀಗೆ ಇಡೀ ಸೈಕಲ್ ಇದರಲ್ಲಿದೆ. ಎಂದಿನ ಮಾಮೂಲು ಭದ್ರತೆಯಲ್ಲಿ ಶಕ್ತಿ ಉತ್ಪಾದಿಸಿದರೂ ಪರಿಸರಕ್ಕೆ ಅಗಾಧ ನಷ್ಟ ಉಂಟಾಗುತ್ತಿರುತ್ತದೆ.
ಸ್ಥಾವರದಲ್ಲಿ ದುರಂತ ಸಂಭವಿಸಿದರೆ ಅದರ ವಿಕೃತ ಪರಿಣಾಮಗಳು ಪೀಳಿಗೆಯಿಂದ ಪೀಳಿಗೆಗೆ ದಾಟುತ್ತಿರುತ್ತವೆ. ಪರಿಹಾರ ನಿಗದಿ ಸಾಧ್ಯವೇ ಇಲ್ಲ. ಮೇಲಾಗಿ, ಅಪಘಾತದ ಪರಿಣಾಮ ಇಂತಿಷ್ಟೇ ಭೌಗೋಳಿಕ ವಲಯಕ್ಕೆ ಸೀಮಿತ ಎಂದು ಹೇಳಲು ಸಾಧ್ಯವೇ ಇಲ್ಲ. ವಿಕಿರಣ ಗಾಳಿಗೆ, ನೀರಿಗೆ, ಅಂತರ್ಜಲಕ್ಕೆ ಸೇರಿ ಅದೆಷ್ಟೊ ಕಿಲೊಮೀಟರ್‌ವರೆಗೆ ವ್ಯಾಪಿಸಬಹುದು. ಗಡಿಮಿತಿ ಹೇಗೆ ಹಾಕುತ್ತಾರೆ? ಪರಮಾಣು ತ್ಯಾಜ್ಯಗಳ ಕತೆಯೂ ಅಷ್ಟೆ; ಅವು ಹತ್ತಾರು ಸಾವಿರ ವರ್ಷಗಳವರೆಗೆ ವಿಕಿರಣ ಸೂಸುತ್ತಿರುತ್ತವೆ. ಕಂಪನಿಯ ಅಸ್ತಿತ್ವ ಮುಗಿದರೂ ತ್ಯಾಜ್ಯ ಮುಗಿಯುವುದಿಲ್ಲ. ಪರಮಾಣು ಸ್ಥಾವರಗಳನ್ನು ‘ಟಾಯ್ಲೆಟ್ ಇಲ್ಲದ ಮನೆʼ ಎನ್ನುತ್ತಾರೆ. ತ್ಯಾಜ್ಯಗಳನ್ನು ಇಟ್ಟುಕೊಳ್ಳುವಂತಿಲ್ಲ; ದೂರ ಎಸೆಯಲು ಅವಕಾಶವೂ ಇಲ್ಲ. ಹಾಗಾಗಿ, ಯಾವುದೇ ಅಪಘಾತ ಆಗದೇ ಇದ್ದರೂ (ಸ್ಥಾವರ ಸುರಕ್ಷಿತವಾಗಿ ಕೆಲಸ ಮಾಡುತ್ತಿದ್ದರೂ) ಅಲ್ಲಿ ಬಳಕೆಯಾಗುವ ಎಲ್ಲ ಯಾಂತ್ರಿಕ ಭಾಗಗಳೂ ಅಪಾಯಕಾರಿ ಆಗುತ್ತವೆ. ವಿದ್ಯುತ್ ಉತ್ಪಾದನೆಯ ಪ್ರತಿ ಹಂತದಲ್ಲೂ ವಿಕಿರಣ ಗಾಳಿಗೆ ಸೂಸುತ್ತಲೇ ಇರುತ್ತದೆ. ಅದರ ದುಷ್ಪರಿಣಾಮ ದೂರದ ಯಾವುದೋ ಜೀವಿಗಳಿಗೆ, ಜಲಚರ, ಪಶು ಪಕ್ಷಿಗಳಿಗೆ ಒಟ್ಟಾರೆ ಜೀವ ಸಮುದಾಯಕ್ಕೆ ಆಗುತ್ತಲೇ ಇರುತ್ತದೆ” ಎಂದು ತಿಳಿಸಿದರು.

“ಭೋಪಾಲ ತ್ಯಾಜ್ಯಗಳನ್ನು ಖಾಸಗಿ ಕಂಪನಿ ತನ್ನೊಂದಿಗೆ ಒಯ್ಯಬೇಕಿತ್ತು. ಆದರೆ ಅದು ಲಾಭಗಳನ್ನು ಮಾತ್ರ ಒಯ್ದಿತ್ತು. ಹಾಗಾಗಿ ಪರಿಸರ ಸಂಘಟನೆಗಳು ಅಮೆರಿಕದಲ್ಲಿರುವ ಕಂಪೆನಿಯ ಮುಖ್ಯ ಕಚೇರಿಗೆ ಸಾಂಕೇತಿಕವಾಗಿ ಹತ್ತಾರು ಕಿಲೊ ತ್ಯಾಜ್ಯಗಳನ್ನು ಒಯ್ದು ಸುರಿದಿದ್ದರು. ಪರಮಾಣು ತ್ಯಾಜ್ಯಗಳನ್ನು ಹಾಗೆ ಮೂಟೆಕಟ್ಟಿ ಒಯ್ಯುವಂತೆಯೂ ಇಲ್ಲ. ಸುರಕ್ಷಾ ನಿರ್ಬಂಧಗಳಿವೆ. ಖಾಸಗಿ ಒಪ್ಪಂದಗಳಲ್ಲಿ ಈ ಎಲ್ಲ ಕ್ಲಿಷ್ಟ ಸಮಸ್ಯೆ ಇವೆ. ಇತರ ಸುಧಾರಿತ ರಾಷ್ಟ್ರಗಳಲ್ಲಿ ತ್ಯಾಜ್ಯ ವಿಲೆವಾರಿ ಮತ್ತು ನಷ್ಟ ಪರಿಹಾರದ ವಿಷಯದಲ್ಲಿ ಸರ್ಕಾರಗಳು ಅತ್ಯಂತ ಕಟ್ಟುನಿಟ್ಟಿನ ನಿಬಂಧನೆ ರೂಪಿಸಿವೆ. ಆದ್ದರಿಂದಲೇ ಖಾಸಗಿಯವರು ಪರಮಾಣು ಗೊಡವೆಯೇ ಬೇಡವೆಂದು ದೂರ ಇದ್ದಾರೆ. ನಮ್ಮಲ್ಲಿಗೆ ಖಾಸಗಿಯವರು ಬರುತ್ತಾರೆ ಎಂದರೆ ಅದಕ್ಕೆ ಕಾರಣ ಸುಸ್ಪಷ್ಟ ಇದೆ. ನಮ್ಮ ಒಪ್ಪಂದ ತೀರ ಸಡಿಲ ಇದೆ. ಪರಿಸರಕ್ಕೆ ಆಗುವ ನಷ್ಟಕ್ಕೆ ಪರಿಹಾರ ನೀಡದೇ ಸಲೀಸಾಗಿ ಲಾಭವನ್ನು ಮಾತ್ರ ಗಳಿಸುತ್ತ ಹೋಗಬಹುದು ಅಂತ!” ಎಂದರು.
ಇವುಗಳ ಜತೆಗೆ ಪರಿಸರ ಮತ್ತು ಸಾಮಾಜಿಕ ಅಂಶಗಳೂ ಸಮಾನವಾಗಿ ಮಹತ್ವದವು. ಪರಮಾಣು ಸ್ಥಾವರಗಳು ಸಾಮಾನ್ಯವಾಗಿ ಕರಾವಳಿ ಪ್ರದೇಶಗಳು ಅಥವಾ ಗ್ರಾಮೀಣ ಪ್ರದೇಶಗಳಲ್ಲಿ ಸ್ಥಾಪನೆಗೊಳ್ಳುತ್ತವೆ. ಭೂ ಸ್ವಾಧೀನ, ಸ್ಥಳೀಯ ಜನರ ಪುನರ್ವಸತಿ, ಸಮುದ್ರ ಮತ್ತು ಜಲಸಂಪತ್ತಿನ ಮೇಲೆ ಪರಿಣಾಮ, ಅಪಘಾತ ಭೀತಿಯಿಂದ ಉಂಟಾಗುವ ಮಾನಸಿಕ ಆತಂಕ.. ಇವೆಲ್ಲವೂ ಈಗಾಗಲೇ ವಿವಾದಾತ್ಮಕ ವಿಷಯಗಳು. ವಿದೇಶಿ ಕಂಪನಿಗಳು ಮತ್ತು ಖಾಸಗಿ ಹೂಡಿಕೆದಾರರು ಲಾಭದ ದೃಷ್ಟಿಯಿಂದ ಕಾರ್ಯನಿರ್ವಹಿಸುವಾಗ, ಈ ಸಾಮಾಜಿಕ ಹೊಣೆಗಾರಿಕೆಗಳಿಗೆ ಎಷ್ಟು ಆದ್ಯತೆ ನೀಡುತ್ತಾರೆ ಎಂಬುದು ಸ್ಪಷ್ಟವಾಗಿಲ್ಲ. ಈ ನಿರ್ಧಾರದ ಗಂಭೀರತೆ ಕೇವಲ ಇಂದಿನ ಸರ್ಕಾರದ ಅವಧಿಗೆ ಸೀಮಿತವಾಗಿಲ್ಲ. ಪರಮಾಣು ಸ್ಥಾವರಗಳ ಆಯುಷ್ಯ 40–60 ವರ್ಷಗಳವರೆಗೆ ಇರುತ್ತದೆ. ಇಂದು ತೆಗೆದುಕೊಳ್ಳುವ ನೀತಿ, ತೀರ್ಮಾನಗಳು ಮುಂದಿನ ಪೀಳಿಗೆಗಳ ಮೇಲೆ ಪರಿಣಾಮ ಬೀರುತ್ತವೆ. ಹೀಗಾಗಿ ಈ ಕ್ಷೇತ್ರವನ್ನು ವಿದೇಶಿ ಖಾಸಗಿಯವರಿಗೆ ಒಪ್ಪಿಸುವ ಮೊದಲು ಪಾರದರ್ಶಕ ಚರ್ಚೆ, ಸಂಸತ್ತಿನ ವಿಸ್ತೃತ ಪರಿಶೀಲನೆ ಮತ್ತು ಸಾರ್ವಜನಿಕ ಅಭಿಪ್ರಾಯ ಸಂಗ್ರಹ ಅಗತ್ಯವಾಗಿದೆ. ತ್ವರಿತವಾಗಿ ಹೂಡಿಕೆ ಆಕರ್ಷಿಸುವ ಉತ್ಸಾಹದಲ್ಲಿ ಭದ್ರತೆ, ಜವಾಬ್ದಾರಿ ಮತ್ತು ಸಾರ್ವಜನಿಕ ಹಿತಾಸಕ್ತಿಯನ್ನು ತಗ್ಗಿಸಬಾರದು.
ಇದನ್ನೂ ಓದಿ: ಮನರೇಗಾ ಬದಲಿಗೆ ವಿಬಿ-ಜಿ ರಾಮ್ ಜಿ ಮಸೂದೆ: ಉದ್ಯೋಗ ಖಾತ್ರಿ ಯೋಜನೆಯ ಬದಲಾವಣೆಗಳೇನು?
ವಿದ್ಯುತ್ ಬೇಡಿಕೆ, ಹವಾಮಾನ ಬದಲಾವಣೆ ಮತ್ತು ಆರ್ಥಿಕ ವೃದ್ಧಿಯ ಸವಾಲುಗಳಿಗೆ ಉತ್ತರವಾಗಿ ಅಣುಶಕ್ತಿಯನ್ನು ಬಲಪಡಿಸುವುದು ಅನಿವಾರ್ಯವಾಗಿರಬಹುದು. ಆದರೆ, ಅಣುಶಕ್ತಿ ಕ್ಷೇತ್ರವು ಸಾಮಾನ್ಯ ಉದ್ಯಮವಲ್ಲ. ಇದು ರಾಷ್ಟ್ರದ ಭದ್ರತೆ, ಸಾರ್ವಜನಿಕ ಸುರಕ್ಷತೆ, ಪರಿಸರ ಮತ್ತು ಮುಂದಿನ ಪೀಳಿಗೆಗಳ ಹೊಣೆಗಾರಿಕೆಗೆ ನೇರವಾಗಿ ಸಂಬಂಧಿಸಿದೆ. ಹೀಗಾಗಿ, ಈ ಕ್ಷೇತ್ರವನ್ನು ವಿದೇಶಿ ಹಾಗೂ ಖಾಸಗಿ ಹೂಡಿಕೆದಾರರಿಗೆ ತೆರೆಯುವಾಗ ಕೇವಲ ಬಂಡವಾಳ ಸೆಳೆಯುವುದೇ ಮುಖ್ಯವಾಗಬಾರದು. ಅಪಘಾತದ ಸಂದರ್ಭದಲ್ಲಿ ಹೊಣೆಗಾರಿಕೆಯ ಸ್ಪಷ್ಟತೆ, ಕಟ್ಟುನಿಟ್ಟಾದ ಸುರಕ್ಷತಾ ಮಾನದಂಡಗಳು, ನಿಯಂತ್ರಣ ಸಂಸ್ಥೆಗಳ ಸ್ವಾಯತ್ತತೆ ಮತ್ತು ಸಾರ್ವಜನಿಕ ಹಿತಾಸಕ್ತಿಯ ರಕ್ಷಣೆಯೇ ಪ್ರಧಾನವಾಗಬೇಕು. ಸಂಸತ್ತಿನಲ್ಲಿ ವಿಸ್ತೃತ ಚರ್ಚೆ, ಸಾರ್ವಜನಿಕ ಸಂವಾದ ಮತ್ತು ಪಾರದರ್ಶಕ ನಿರ್ಧಾರ ಪ್ರಕ್ರಿಯೆ ಇಲ್ಲದೆ ಇಂತಹ ಗಂಭೀರ ನೀತಿಪರ ಬದಲಾವಣೆಗಳನ್ನು ಜಾರಿಗೆ ತರಲಾಗುವುದಾದರೆ, ಅದರ ಪರಿಣಾಮಗಳು ದೀರ್ಘಾವಧಿಯಲ್ಲಿ ದೇಶಕ್ಕೇ ಹಾನಿಕಾರಕವಾಗುವ ಸಾಧ್ಯತೆ ಇದೆ. ಅಭಿವೃದ್ಧಿಯ ಹೆಸರಿನಲ್ಲಿ ಭದ್ರತೆ ಮತ್ತು ಜವಾಬ್ದಾರಿಯನ್ನು ಬಲಿಕೊಡಬಾರದು ಎಂಬ ಎಚ್ಚರಿಕೆಯೊಂದಿಗೆ ಈ ಮಸೂದೆಗೆ ಸಮಗ್ರ ಪರಿಶೀಲನೆ ಅಗತ್ಯತೆ ಇದೆ.





