ಎನ್‌ಸಿಪಿ (ಶರದ್‌ಚಂದ್ರ ಪವಾರ್ ಬಣ) ಮುಖ್ಯಸ್ಥ ಹಾಗೂ ಹಿರಿಯ ರಾಜಕೀಯ ಮುತ್ಸದ್ದಿ ಶರದ್ ಪವಾರ್ (85) ಅವರನ್ನು ಸೋಮವಾರ (ಫೆ. 9) ಪುಣೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಪರೀತ ಕೆಮ್ಮು ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಬಾರಾಮತಿಯಲ್ಲಿದ್ದ ಪವಾರ್ ಅವರಿಗೆ ಸೋಮವಾರ ಮಧ್ಯಾಹ್ನ ತೀವ್ರ ಸ್ವರೂಪದ ಕೆಮ್ಮು ಮತ್ತು ಉಸಿರಾಟದ ಸಮಸ್ಯೆ ಎದುರಾಯಿತು. ಕೂಡಲೇ ಅವರನ್ನು ಬಾರಾಮತಿಯಿಂದ ಖಾಸಗಿ ವಾಹನದಲ್ಲಿ ಪುಣೆಯ ‘ರೂಬಿ ಹಾಲ್ ಕ್ಲಿನಿಕ್’ಗೆ ಕರೆತರಲಾಯಿತು. ಸದ್ಯ ಅವರ ಆರೋಗ್ಯ ಸ್ಥಿರವಾಗಿದ್ದು, ವೈದ್ಯಕೀಯ ಪರೀಕ್ಷಾ ವರದಿಗಳು ಬಂದ ನಂತರವಷ್ಟೇ ಮುಂದಿನ ಚಿಕಿತ್ಸೆಗಾಗಿ ಮುಂಬೈಗೆ ಸ್ಥಳಾಂತರಿಸಬೇಕೇ ಅಥವಾ ಬೇಡವೇ ಎಂಬ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ|ಮೋದಿ ರಾಜಿ ರಾಜಕಾರಣದಿಂದ ಭಾರತದ ಸ್ವಾಭಿಮಾನ- ಸಾರ್ವಭೌಮತೆಗೆ ಧಕ್ಕೆ
ಪವಾರ್ ಅವರ ಆರೋಗ್ಯದ ಕುರಿತು ಮಾಹಿತಿ ನೀಡಿರುವ ವೈದ್ಯರು, “ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ. ಅವರನ್ನು ತೀವ್ರ ನಿಗಾ ಘಟಕದಲ್ಲಿ (ICU) ಇರಿಸಲಾಗಿಲ್ಲ, ಬದಲಿಗೆ ಖಾಸಗಿ ವಾರ್ಡ್‌ಗೆ ದಾಖಲಿಸಲಾಗಿದೆ” ಎಂದು ಸ್ಪಷ್ಟಪಡಿಸಿದ್ದಾರೆ.
ರೂಬಿ ಹಾಲ್ ಕ್ಲಿನಿಕ್‌ನ ಡಾ. ಅಭಿಜಿತ್ ಲೋಧಾ ಮಾತನಾಡಿ, “ಅತಿಯಾದ ದೈಹಿಕ ಶ್ರಮ ಮತ್ತು ಎದೆಯಲ್ಲಿ ಕಫ ಕಟ್ಟಿಕೊಂಡಿರುವುದರಿಂದ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಚಿಕಿತ್ಸೆ ಮುಂದುವರಿದಿದ್ದು, ಪರೀಕ್ಷಾ ವರದಿಗಳಿಗಾಗಿ ಕಾಯುತ್ತಿದ್ದೇವೆ. ವರದಿ ಬಂದ ಬಳಿಕ ಮುಂದಿನ ಚಿಕಿತ್ಸಾ ಕ್ರಮವನ್ನು ನಿರ್ಧರಿಸುತ್ತೇವೆ” ಎಂದು ತಿಳಿಸಿದ್ದಾರೆ.
ಪವಾರ್ ಅವರೊಂದಿಗೆ ಪುತ್ರಿ ಹಾಗೂ ಲೋಕಸಭಾ ಸಂಸದೆ ಸುಪ್ರಿಯಾ ಸುಳೆ, ಅಳಿಯ ಸದಾನಂದ ಸುಳೆ ಆಸ್ಪತ್ರೆಯಲ್ಲಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆಯೇ ಮೊಮ್ಮಗ, ಶಾಸಕ ರೋಹಿತ್ ಪವಾರ್ ಆಸ್ಪತ್ರೆಗೆ ಧಾವಿಸಿದ್ದಾರೆ.





