ಕೇಂದ್ರ ಬಜೆಟ್‌ನಲ್ಲಿ ಇರಾನ್‌ನ ಮಹತ್ವಾಕಾಂಕ್ಷೆಯ ಚಬಹಾರ್ ಬಂದರು ಯೋಜನೆಗೆ ಯಾವುದೇ ಅನುದಾನ ಮೀಸಲಿಡದಿರುವುದು ಈಗ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇದು ಜಾಗತಿಕ ಒತ್ತಡ, ಮುಖ್ಯವಾಗಿ ಅಮೆರಿಕದ ಎಚ್ಚರಿಕೆಗೆ ಭಾರತ ಮಣಿದಿರುವುದರ ಸ್ಪಷ್ಟ ನಿದರ್ಶನ ಎಂದು ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಕಿಡಿಕಾರಿದ್ದಾರೆ.
ಇರಾನ್ ಮೇಲೆ ಅಮೆರಿಕ ಕಠಿಣ ಆರ್ಥಿಕ ನಿರ್ಬಂಧಗಳನ್ನು ಹೇರುತ್ತಿರುವ ಹೊತ್ತಿನಲ್ಲೇ ಕೇಂದ್ರದ ಬಜೆಟ್‌ನಲ್ಲಿ ಚಬಹಾರ್ ಬಂದರಿಗೆ ಹಣಕಾಸಿನ ನೆರವು ಸ್ಥಗಿತಗೊಂಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಟೆಹ್ರಾನ್ ಜೊತೆ ವ್ಯವಹಾರ ಮುಂದುವರಿಸುವ ದೇಶಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸುವುದಾಗಿ ಅಮೆರಿಕ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆಯನ್ನು ನೋಡಬೇಕಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ |ಮುಂಬಯಿ TISS ವಿದ್ಯಾರ್ಥಿಗಳ ‘ಕ್ಯಾಂಪಸ್ ರಾಜಕೀಯ’ ದಮನ ಸಲ್ಲದು!
ಚಬಹಾರ್ ಬಂದರು ಕೇವಲ ವಾಣಿಜ್ಯ ಕೇಂದ್ರವಲ್ಲ, ಬದಲಿಗೆ ಮಧ್ಯ ಏಷ್ಯಾವನ್ನು ಸಂಪರ್ಕಿಸಲು ಭಾರತಕ್ಕಿರುವ ಪ್ರಮುಖ ಹೆಬ್ಬಾಗಿಲು. ಪಾಕಿಸ್ತಾನದಲ್ಲಿ ಚೀನಾ ನಿರ್ಮಿಸುತ್ತಿರುವ ಗ್ವಾದರ್ ಬಂದರಿಗೆ ಪ್ರಬಲ ಪೈಪೋಟಿ ನೀಡಲು ಮತ್ತು ಚೀನಾದ ಪ್ರಾಬಲ್ಯ ತಗ್ಗಿಸಲು ಭಾರತ ರೂಪಿಸಿದ ಪ್ರಮುಖ ವ್ಯೂಹಾತ್ಮಕ ಯೋಜನೆ ಇದಾಗಿತ್ತು. ಆದರೆ, ಈ ಬಾರಿಯ ಬಜೆಟ್‌ನಲ್ಲಿ ಈ ಯೋಜನೆ ಸಂಪೂರ್ಣ ಕಣ್ಮರೆಯಾಗಿದೆ. ಕಳೆದ ಸಾಲಿನಲ್ಲಿ ಈ ಯೋಜನೆಗಾಗಿ ಕೇಂದ್ರ ಸರ್ಕಾರ ಬರೋಬ್ಬರಿ ₹400 ಕೋಟಿ ಅನುದಾನ ಮೀಸಲಿಟ್ಟಿತ್ತು ಎಂಬುದು ಗಮನಾರ್ಹ.
ಈ ಕುರಿತು ಸರ್ಕಾರವು ಅಮೆರಿಕದೊಂದಿಗೆ ಮಾತುಕತೆಗಳು ನಡೆಯುತ್ತಿವೆ ಎಂದು ಹೇಳುತ್ತಿದ್ದರೂ, ಬಜೆಟ್‌ನಲ್ಲಿನ ಮೌನವು ಬೇರೆಯದೇ ಸಂದೇಶ ರವಾನಿಸುತ್ತಿದೆ ಎಂದು ವಿಪಕ್ಷಗಳು ಟೀಕಿಸಿವೆ. “ಇದು ಕೇವಲ ಅನುದಾನದ ಪ್ರಶ್ನೆಯಲ್ಲ, ಜಾಗತಿಕ ಒತ್ತಡದ ಮುಂದೆ ಭಾರತ ತನ್ನ ವ್ಯೂಹಾತ್ಮಕ ಹಿತಾಸಕ್ತಿಯನ್ನು ಬಲಿಕೊಟ್ಟಂತೆ ಕಾಣುತ್ತಿದೆ,” ಎಂದು ತರೂರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಾಗತಿಕ ಇಂಧನ ರಾಜಕೀಯ, ದಿಢೀರ್ ಬದಲಾಗುತ್ತಿರುವ ವ್ಯಾಪಾರ ಸಂಬಂಧಗಳು ಮತ್ತು ನಿರ್ಬಂಧಗಳ ಭೀತಿಯ ನಡುವೆ, ಭಾರತವು ಕೇವಲ ತಾಂತ್ರಿಕವಾಗಿ ಹೆಜ್ಜೆ ಬದಲಿಸುತ್ತಿದೆಯೇ ಅಥವಾ ಪ್ರಮುಖ ರಾಜತಾಂತ್ರಿಕ ಬದ್ಧತೆಯಿಂದ ಹಿಂದೆ ಸರಿಯುತ್ತಿದೆಯೇ ಎಂಬ ಪ್ರಶ್ನೆ ಈಗ ಮೂಡಿದೆ.





