1,500 ಜನಸಂಖ್ಯೆ ಇರುವ ಗ್ರಾಮವೊಂದರಲ್ಲಿ ಸೆಪ್ಟೆಂಬರ್‌ನಿಂದ ನವೆಂಬರ್‌ವರೆಗಿನ ಮೂರು ತಿಂಗಳಲ್ಲಿ ಬರೋಬ್ಬರಿ 27,397 ಜನನಗಳಾಗಿವೆ (ಹೆರಿಗೆ) ಎಂದು ನಾಗರಿಕ ನೋಂದಣಿ ವ್ಯವಸ್ಥೆಯಲ್ಲಿ (ಸಿಆರ್‌ಎಸ್) ದಾಖಲಿಸಲಾಗಿದೆ. ಇದು, ಗಂಭೀರ ಕಳವಳವನ್ನು ಹುಟ್ಟುಹಾಕಿದೆ. ಮಾತ್ರವಲ್ಲದೆ, ಬೃಹತ್ ಸೈಬರ್ ವಂಚನೆ ಕುರಿತು ಎಚ್ಚರಿಕೆಯನ್ನೂ ನೀಡುತ್ತಿದೆ.
ಈ ಆಘಾತಕಾರಿ ಪ್ರಹಸನವು ಮಹಾರಾಷ್ಟ್ರದ ಯತ್ಮಲ್ ಜಿಲ್ಲೆಯ ಅರ್ನಿ ತಾಲೂಕಿನ ಶೆಂಡುರ್ಸಾನಿ ಗ್ರಾಮ ಪಂಚಾಯತಿಯ ದಾಖಲೆಗಳು ಕಂಡುಬಂದಿದೆ. ಕಳವಳಕಾರಿಯಾಗಿ, ಶೆಂಡುರ್ಸಾನಿ ಗ್ರಾಮ ಪಂಚಾಯತಿಯ ಸಿಆರ್‌ಎಸ್ ಐಡಿಯನ್ನು (MH18241RE) ಮುಂಬೈನಲ್ಲಿ ಆಪರೇಟ್ ಮಾಡಲಾಗಿದೆ ಎಂಬುದು ಗೊತ್ತಾಗಿದೆ. ಇದೊಂದು ಸೈಬರ್ ಅಪರಾಧಿದ ಕೃತ್ಯವೆಂದು ಹೇಳಲಾಗಿದೆ.
ಅಸಂಗತ ದತ್ತಾಂಶ ಬೆಳಕಿಗೆ ಬಂದ ಬಳಿಕ, ಯತ್ಮಲ್ ಜಿಲ್ಲಾ ಆರೋಗ್ಯ ಅಧಿಕಾರಿಗಳು ಯವತ್ಮಲ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಗ್ರಾಮ ಪಂಚಾಯತಿಯ ಕಂಪ್ಯೂಟರ್ ಆಪರೇಟರ್ ಐಡಿಯನ್ನು ಯಾರೋ ದುರುಪಯೋಗ ಮಾಡಿಕೊಂಡಿದ್ದಾರೆ. ಈ ದಾಖಲೆಗಳಲ್ಲಿ ಕಂಡುಬರುವ ಹೆಸರುಗಳಲ್ಲಿ 99.99% ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಹಾಗೂ ಇತರ ಪ್ರದೇಶಗಳ ಜನರಿಗೆ ಸೇರಿವೆ. ಈ ಎಲ್ಲ ಜನನ ನೋಂದಣಿ ಮತ್ತು ನಮೂದುಗಳನ್ನು ರದ್ದುಗೊಳಿಸಬೇಕು ಎಂದು ಬಿಜೆಪಿ ತಮ್ಮದೇ ಸರ್ಕಾರವನ್ನು ಒತ್ತಾಯಿಸಿದೆ.
ಸರ್ಕಾರದ ನಿರ್ದೇಶನಗಳ ಪ್ರಕಾರ, ಅಕ್ರಮ ಜನನ ಮತ್ತು ಮರಣ ನೋಂದಣಿಗಳನ್ನು ಗುರುತಿಸಲು ಮತ್ತು ರದ್ದುಗೊಳಿಸಲು ಪರಿಶೀಲನಾ ಅಭಿಯಾನ ನಡೆಯುತ್ತಿದೆ. ಈ ಕಾರ್ಯದ ಸಮಯದಲ್ಲಿ, ಅರ್ನಿ ತಾಲೂಕು ಆರೋಗ್ಯ ಅಧಿಕಾರಿಗಳು CRS ಸಾಫ್ಟ್‌ವೇರ್‌ನಲ್ಲಿ ಸೆಪ್ಟೆಂಬರ್ ಮತ್ತು ನವೆಂಬರ್ 2025ರ ನಡುವೆ ದಾಖಲಾದ 27,397 ಜನನ ನಮೂದುಗಳು ಮತ್ತು ಏಳು ಮರಣ ನಮೂದುಗಳನ್ನು ಕಂಡುಹಿಡಿದಿದ್ದಾರೆ. ಇವುಗಳಲ್ಲಿ ಬಹುತೇಕ ಎಲ್ಲವೂ ಗ್ರಾಮದ ಹೊರಗಿನ ಅಂಕಿಅಂಶಗಳಾಗಿವೆ.
ಈ ಲೇಖನ ಓದಿದ್ದೀರಾ?: ಮನರೇಗಾ ಬದಲಿಗೆ ವಿಬಿ-ಜಿ ರಾಮ್ ಜಿ ಮಸೂದೆ: ಉದ್ಯೋಗ ಖಾತ್ರಿ ಯೋಜನೆಯ ಬದಲಾವಣೆಗಳೇನು?
ಜಿಲ್ಲಾ ಪರಿಷತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಂದರ್ ಪಟ್ಕಿ ಅವರು ಪಂಚಾಯತ್ ಇಲಾಖೆಯ ಉಪ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೇತೃತ್ವದಲ್ಲಿ ತನಿಖಾ ಸಮಿತಿಯನ್ನು ರಚಿಸಿದ್ದಾರೆ. ಸಮಿತಿ ತನಿಖೆ ನಡೆಸಿದ್ದು, ದಾಖಲಾಗಿರುವ ಒಟ್ಟು ಜನನ-ಮರಣ ದಾಖಲೆಗಳಲ್ಲಿ 27,397 ಜನನ ದಾಖಲೆಗಳು ಮತ್ತು ಏಳು ಮರಣ ದಾಖಲೆಗಳು ಗ್ರಾಮ ಪಂಚಾಯಿತಿಯ ವ್ಯಾಪ್ತಿಗೆ ಬರುವುದಿಲ್ಲ. ಅವುಗಳನ್ನು ಅನುಮಾನಾಸ್ಪದವೆಂದು ಪರಿಗಣಿಸಲಾಗಿದೆ ಎಂದು ತಿಳಿದುಬಂದಿದೆ.
ಪ್ರಕರಣವನ್ನು ನವದೆಹಲಿಯ ಭಾರತದ ಹೆಚ್ಚುವರಿ ರಿಜಿಸ್ಟ್ರಾರ್ ಜನರಲ್ ಕಚೇರಿ ಮತ್ತು ರಾಷ್ಟ್ರೀಯ ಮಾಹಿತಿ ಕೇಂದ್ರದ ಗಮನಕ್ಕೆ ತರಲಾಗಿದೆ. ತನಿಖೆಯು ಸೈಬರ್ ವಂಚನೆಯ ಮೂಲಕ ನಮೂದುಗಳನ್ನು ಸೃಷ್ಟಿಸಲಾಗಿರುವ ಸಾಧ್ಯತೆಯನ್ನು ತೋರಿಸಿದೆ.
ಭಾರತೀಯ ನ್ಯಾಯ ಸಂಹಿತೆಯ ವಿವಿಧ ವಿಭಾಗಗಳ ಅಡಿಯಲ್ಲಿ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ನಂದಕಿಶೋರ್ ಕಾಳೆ ತಿಳಿಸಿದ್ದಾರೆ.




