ನವದೆಹಲಿಯಲ್ಲಿ ನಡೆದ ವಿಪಕ್ಷಗಳ ‘ಇಂಡಿಯಾ’ ಒಕ್ಕೂಟ ಸಭೆಯಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಿಂದಿ ಭಾಷೆಯ ಅನುವಾದದ ವಿಚಾರವಾಗಿ ಡಿಎಂಕೆ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ಮಂಗಳವಾರ(ಡಿ.19) ನಡೆದಿದೆ.
ಇಂಡಿಯಾ ಒಕ್ಕೂಟ ಸಭೆಯಲ್ಲಿ ನಿತೀಶ್ ಕುಮಾರ್ ಅವರು ನಾಯಕರನ್ನು ಉದ್ದೇಶಿಸಿ ಮಾತನಾಡುವಾಗ ಡಿಎಂಕೆ ಮುಖ್ಯಸ್ಥ ಎಂ ಕೆ ಸ್ಟಾಲಿನ್ ಮತ್ತು ಟಿ ಆರ್ ಬಾಲು ಸಹ ಉಪಸ್ಥಿತರಿದ್ದರು. ನಿತೀಶ್ ಏನು ಹೇಳುತ್ತಿದ್ದಾರೆಂದು ಅರ್ಥಮಾಡಿಕೊಳ್ಳಲು ಅವರಿಗೆ ಸಾಧ್ಯವಾಗದೆ, ಟಿ ಆರ್ ಬಾಲು ಅವರು ಸಾಧ್ಯವಾದರೆ ಭಾಷಣವನ್ನು ಇಂಗ್ಲಿಷ್‌ಗೆ ಭಾಷಾಂತರಿಸಲು ಇನ್ನೊಂದು ಬದಿಯಲ್ಲಿ ಕುಳಿತಿದ್ದ ರಾಷ್ಟ್ರೀಯ ಜನತಾ ದಳದ ರಾಜ್ಯಸಭಾ ಸಂಸದ ಮನೋಜ್ ಕೆ. ಝಾ ಅವರಿಗೆ ಸೂಚಿಸಿದರು.
ಮನೋಜ್ ಝಾ ಅವರು ನಿತೀಶ್ ಕುಮಾರ್ ಅವರ ಅನುಮತಿ ಕೇಳುತ್ತಿದ್ದಂತೆ, “ನಾವು ನಮ್ಮ ದೇಶವನ್ನು ಹಿಂದೂಸ್ತಾನ್ ಎಂದು ಕರೆಯುತ್ತೇವೆ ಮತ್ತು ಹಿಂದಿ ನಮ್ಮ ರಾಷ್ಟ್ರೀಯ ಭಾಷೆ, ನಮಗೆ ಭಾಷೆ ತಿಳಿದಿರಬೇಕು” ಎಂದು ಹೇಳಿದರು.
ಬ್ರಿಟಿಷರ ವಿರುದ್ಧದ ಭಾರತೀಯ ಸ್ವಾತಂತ್ರ್ಯ ಹೋರಾಟ ಮತ್ತು ಇಂಗ್ಲಿಷ್ ಹೇರಿಕೆಯ ಬಗ್ಗೆ ಇದೇ ಸಂದರ್ಭದಲ್ಲಿ ನಿತೀಶ್ ಕುಮಾರ್ ಮಾತನಾಡಿದಾಗ ಸಭೆಯಲ್ಲಿ ಕೆಲವು ನಿಮಿಷಗಳವರೆಗೆ ಇದೇ ವಿಷಯದ ಬಗ್ಗೆ ಮಾತುಕತೆ ನಡೆಯಿತು ಎಂದು ಮೂಲಗಳು ತಿಳಿಸಿವೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೋದಿ ಯುಗದ ಜನತಂತ್ರ- ಆಡುವುದು ಒಂದು, ಮಾಡುವುದು ಇನ್ನೊಂದು
ನಿತೀಶ್ ಅವರನ್ನು ಸಮಾಧಾನಪಡಿಸಲು ಹಲವು ಮುಖಂಡರು ಮುಂದಾದರು. ಆದಾಗ್ಯೂ, ಯಾವುದೇ ಅನುವಾದವನ್ನು ಮಾಡಲಾಗಿಲ್ಲ. ನಂತರ ಮಾತನಾಡಿದ ಲಾಲು ಪ್ರಸಾದ್ ಯಾದವ್ ಅವರ ಭಾಷಣವನ್ನು ಅನುವಾದಿಸಲಿಲ್ಲ.
ನಿತೀಶ್ ಅವರು ತಮ್ಮ ಭಾಷಣವನ್ನು ಭಾಷಾಂತರಿಸದಂತೆ ಮನೋಜ್ ಝಾ ಅವರಿಗೆ ಹೇಳಿದರು.
ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ಅಧ್ಯಕ್ಷ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಕೆಲವರು ತಮ್ಮ ಮಾತನ್ನು ಹಿಂದಿಯಿಂದ ಇಂಗ್ಲಿಷ್‌ಗೆ ಬದಲಾಯಿಸಿದರು.
ಮುಂಬರುವ 2024 ರ ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆ ಮತ್ತು ಪ್ರಚಾರ ಕಾರ್ಯತಂತ್ರಗಳಂತಹ ವಿಷಯಗಳ ಕುರಿತು ಚರ್ಚಿಸಲು ಇಂಡಿಯಾ ಒಕ್ಕೂಟ ಪಕ್ಷಗಳು ಮಂಗಳವಾರ ದೆಹಲಿಯಲ್ಲಿ ತಮ್ಮ ನಾಲ್ಕನೇ ಸಭೆಯನ್ನು ಆಯೋಜಿಸಿದ್ದವು.





