ಬಿಬಿಸಿಯ ಮೂಲಕ ಜಗತ್ತಿಗೆ ‘ಭಾರತದ ದನಿ’ಯಾಗಿದ್ದ ಪ್ರಖ್ಯಾತ ಪತ್ರಕರ್ತ ಹಾಗೂ ಲೇಖಕ ಸರ್ ಮಾರ್ಕ್ ಟುಲ್ಲಿ (90) ಅವರು ನಿಧನರಾಗಿದ್ದಾರೆ. ದಶಕಗಳ ಕಾಲ ತಮ್ಮ ವಿಶಿಷ್ಟ ಹಾಗೂ ಗಂಭೀರ ಕಂಠಸಿರಿಯ ಮೂಲಕ ಬ್ರಿಟನ್ ಮತ್ತು ಜಗತ್ತಿನಾದ್ಯಂತ ಕೇಳುಗರಿಗೆ ಚಿರಪರಿಚಿತರಾಗಿದ್ದ ಟಲ್ಲಿ, ಭಾರತದ ಬಗೆಗಿನ ತಮ್ಮ ಆಳವಾದ ಒಳನೋಟಗಳಿಗೆ ಹೆಸರಾಗಿದ್ದರು.
ಜನವರಿ 21ರಂದು ಅನಾರೋಗ್ಯದಿಂದ ನವದೆಹಲಿಯ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು, ತಮ್ಮ ಜೀವನದ ಬಹುತೇಕ ಭಾಗವನ್ನು ಭಾರತದಲ್ಲಿ ವಿಶೇಷವಾಗಿ ದೆಹಲಿಯಲ್ಲಿ ಕಳೆದಿದ್ದರು.
ಯುದ್ಧಗಳು, ಬರಗಾಲ, ಗಲಭೆಗಳು, ಭೋಪಾಲ್ ಅನಿಲ ದುರಂತ ಮತ್ತು ಅಮೃತಸರದ ಸುವರ್ಣ ದೇವಾಲಯದ ಮೇಲೆ ಸೇನಾ ಕಾರ್ಯಾಚರಣೆಯಂತಹ ಐತಿಹಾಸಿಕ ಘಟನೆಗಳನ್ನು ಟಲ್ಲಿ ವರದಿ ಮಾಡಿದ್ದರು. 1935ರಲ್ಲಿ ಅಂದಿನ ಕಲ್ಕತ್ತಾದಲ್ಲಿ (ಈಗಿನ ಕೋಲ್ಕತ್ತಾ) ಜನಿಸಿದ ಟುಲ್ಲಿ, ಬ್ರಿಟಿಷ್ ರಾಜ್ ಕಾಲಘಟ್ಟದ ಕೊಂಡಿಯಾಗಿದ್ದರು. ಬ್ರಿಟನ್‌ನಲ್ಲಿ ಶಿಕ್ಷಣ ಪಡೆದರೂ, 1965ರಲ್ಲಿ ಬಿಬಿಸಿ ಪ್ರತಿನಿಧಿಯಾಗಿ ಭಾರತಕ್ಕೆ ಮರಳಿದರು. ಹಿಂದಿ ಭಾಷೆಯಲ್ಲಿ ಅಸ್ಖಲಿತವಾಗಿ ಮಾತನಾಡಬಲ್ಲವರಾಗಿದ್ದ ಅವರು, ಭಾರತೀಯರಿಗೆ ಪ್ರೀತಿಯ ‘ಟಲ್ಲಿ ಸಾಹೇಬ್’ ಆಗಿದ್ದರು.
ಅಯೋಧ್ಯೆಯ ಆ ಕರಾಳ ಕ್ಷಣ
1992ರಲ್ಲಿ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸದ ವೇಳೆ ಟುಲ್ಲಿ ಅವರು ಘಟನಾ ಸ್ಥಳದಲ್ಲಿದ್ದರು. ಆ ಸಂದರ್ಭದಲ್ಲಿ ಉದ್ರಿಕ್ತ ಗುಂಪೊಂದು “ಡೆತ್ ಟು ಮಾರ್ಕ್ ಟುಲ್ಲಿ” (ಮಾರ್ಕ್ ಟುಲ್ಲಿಗೆ ಸಾವಾಗಲಿ) ಎಂದು ಘೋಷಣೆ ಕೂಗುತ್ತಾ ಮುತ್ತಿಗೆ ಹಾಕಿತ್ತು. ಸ್ಥಳೀಯ ಅಧಿಕಾರಿ ಮತ್ತು ಅರ್ಚಕರೊಬ್ಬರು ಬರುವವರೆಗೂ ಅವರು ಕೊಠಡಿಯೊಂದರಲ್ಲಿ ಬಂಧಿಯಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದರು. ಈ ಘಟನೆಯನ್ನು ಅವರು “ಸ್ವಾತಂತ್ರ್ಯದ ನಂತರ ಜಾತ್ಯತೀತತೆಗೆ ಬಿದ್ದ ದೊಡ್ಡ ಪೆಟ್ಟು” ಎಂದು ತಿಳಿಸಿದ್ದರು.
ತುರ್ತು ಪರಿಸ್ಥಿತಿ ಮತ್ತು ಗಡಿಪಾರು
1975ರಲ್ಲಿ ಇಂದಿರಾಗಾಂಧಿ ಅವರು ತುರ್ತು ಪರಿಸ್ಥಿತಿ ಘೋಷಿಸಿದಾಗ, ಟುಲ್ಲಿ ಅವರನ್ನು 24 ಗಂಟೆಯೊಳಗೆ ದೇಶ ಬಿಟ್ಟು ಹೋಗುವಂತೆ ಆದೇಶಿಸಲಾಗಿತ್ತು. ಆದರೆ 18 ತಿಂಗಳ ನಂತರ ದೆಹಲಿಗೆ ಮರಳಿದ ಅವರು, ದಕ್ಷಿಣ ಏಷ್ಯಾದ ಪ್ರಮುಖ ವಿದ್ಯಮಾನಗಳಾದ ಬಾಂಗ್ಲಾದೇಶದ ಉದಯ, ಪಾಕಿಸ್ತಾನದ ಸೇನಾ ಆಡಳಿತ ಮತ್ತು ಶ್ರೀಲಂಕಾದ ತಮಿಳು ಹೋರಾಟಗಳನ್ನು ವರದಿ ಮಾಡಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ‘ಬೋರ್ಡ್ ಆಫ್ ಪೀಸ್’ಗೆ ಸೇರದ ಭಾರತದ ನಿಲುವು ಸ್ವಾಗತಾರ್ಹ
ಗೌರವಗಳು: ಪತ್ರಿಕೋದ್ಯಮಕ್ಕೆ ಅವರು ನೀಡಿದ ಕೊಡುಗೆಗಾಗಿ ಭಾರತ ಸರ್ಕಾರ ಅವರಿಗೆ ‘ಪದ್ಮಶ್ರೀ’ ಮತ್ತು ‘ಪದ್ಮಭೂಷಣ’ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. 2002ರಲ್ಲಿ ಬ್ರಿಟನ್ ಸರ್ಕಾರ ಅವರಿಗೆ ‘ನೈಟ್‌ಹುಡ್’ (ಸರ್) ಪದವಿ ನೀಡಿತು.
ಬಿಬಿಸಿ ನಿರ್ಗಮನ: 1993ರಲ್ಲಿ ಬಿಬಿಸಿ ಆಡಳಿತದ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ ನಂತರ 1994ರಲ್ಲಿ ರಾಜೀನಾಮೆ ನೀಡಿದರು. ಆದರೂ ‘ಸಂಥಿಂಗ್ ಅಂಡರ್‌ಸ್ಟುಡ್’ ಕಾರ್ಯಕ್ರಮದ ಮೂಲಕ ಬಾನುಲಿ ಸಂಪರ್ಕ ಮುಂದುವರಿಸಿದ್ದರು.
ಕೊನೆಯ ದಿನಗಳು: ಭಾರತದ ‘ಓವರ್‌ಸೀಸ್ ಸಿಟಿಜನ್’ (OCI) ಆಗಿದ್ದ ಅವರು, ತಮ್ಮ ಜೀವನದ ಮುಕ್ಕಾಲು ಭಾಗವನ್ನು ಭಾರತದಲ್ಲೇ ಕಳೆದರು. ದೆಹಲಿಯಲ್ಲಿ ಸರಳ ಜೀವನ ನಡೆಸುತ್ತಿದ್ದ ಅವರು, ತಮ್ಮ ಸಂಗಾತಿ ಗಿಲಿಯನ್ ರೈಟ್ ಅವರೊಂದಿಗೆ ಪುಸ್ತಕಗಳನ್ನು ಬರೆಯುವುದರಲ್ಲಿ ತೊಡಗಿಕೊಂಡಿದ್ದರು.
ಬಿಬಿಸಿ ನ್ಯೂಸ್‌ನ ಹಂಗಾಮಿ ಸಿಇಒ ಜೊನಾಥನ್ ಮನ್ರೊ ಶ್ರದ್ಧಾಂಜಲಿ ಸಲ್ಲಿಸುತ್ತಾ, “ಸರ್ ಮಾರ್ಕ್ ಟುಲ್ಲಿ ಅವರು ತಮ್ಮ ವರದಿಗಾರಿಕೆಯ ಮೂಲಕ ಭಾರತದ ವೈವಿಧ್ಯತೆಯನ್ನು ಜಗತ್ತಿಗೆ ಪರಿಚಯಿಸಿದರು. ಅವರ ಅಗಲಿಕೆ ಪತ್ರಿಕೋದ್ಯಮ ಲೋಕಕ್ಕೆ ತುಂಬಲಾರದ ನಷ್ಟ,” ಎಂದು ಹೇಳಿದ್ದಾರೆ.





