ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್ ಪ್ರಕ್ರಿಯೆ ತೀವ್ರವಾಗಿ ನಡೆಯುತ್ತಿದೆ. ಆ ರಾಜ್ಯದ ರಾಜಧಾನಿ ಕೋಲ್ಕತ್ತಾದಲ್ಲಿ ಲೈಂಗಿಕ ಕಾರ್ಯಕರ್ತೆಯರನ್ನು ಎಸ್‌ಐಆರ್ ಪ್ರಕ್ರಿಯೆಯಲ್ಲಿ ಒಳಗೊಳ್ಳಲು ಚುನಾವಣಾ ಆಯೋಗವು ಮೂರು ವಿಶೇಷ ಕೇಂದ್ರಗಳನ್ನು ತೆರೆದಿದೆ. ಒಂದೆಡೆ ನೆಲೆ ಕಾಣದ ಲೈಂಗಿಕ ಕಾರ್ಯಕರ್ತೆಯರು ಎಸ್‌ಐಆರ್ ಪ್ರಕ್ರಿಯೆಗೆ ಎಲ್ಲಿಯೂ ಲಭ್ಯವಾಗದ ಕಾರಣ, ಅವರೇ ಖುದ್ದು ಪ್ರಕ್ರಿಯೆಯಲ್ಲಿ ಭಾಗವಹಿಸಬೇಕೆಂದು ಆಯೋಗ ಮನವಿಯನ್ನೂ ಮಾಡಿದೆ. ಲೈಂಗಿಕ ಕಾರ್ಯಕರ್ತೆಯರೂ ಆ ಕೇಂದ್ರಗಳ ಎದುರು ಸಾಲುಗಟ್ಟಿ ನಿಂತಿದ್ದಾರೆ. ಆದರೆ, ತಮ್ಮ ಕುಟುಂಬಗಳೊಂದಿಗೆ ಸಂಪರ್ಕದಲ್ಲಿಯೇ ಇಲ್ಲದ, ಅವರೆಲ್ಲರೂ ಎಸ್‌ಐಆರ್ ತಮ್ಮನ್ನು ಮತಪಟ್ಟಿಯಿಂದ ಮಾತ್ರವಲ್ಲ, ಇಡೀ ದೇಶದಿಂದಲೇ ಹೊರದೂಡಬಹುದು ಎಂಬ ಆತಂಕದಲ್ಲಿದ್ದಾರೆ.
ಭಾರತದ ಅತಿದೊಡ್ಡ ರೆಡ್ ಲೈಟ್ ಏರಿಯಾಗಳನ್ನು ಹೊಂದಿರುವ ಜಿಲ್ಲೆ ಅಥವಾ ನಗರಗಳಲ್ಲಿ ಕೋಲ್ಕತ್ತಾ ಕೂಡ ಒಂದು. ಇಲ್ಲಿನ ಲೈಂಗಿಕ ಕಾರ್ಯಕರ್ತೆಯರಿಗೆ ತಮ್ಮದೇ ಆದ ಅಧಿಕೃತ ದಾಖಲೆಗಳು, ಗುರುತಿನ ಚೀಟಿಗಳಿಲ್ಲ. ಅವರೆಲ್ಲರಿಗೂ ಮತದಾರರ ಗುರುತಿನ ಚೀಟಿಯೇ ಅತ್ಯಮೂಲ್ಯ ಗುರುತಿನ ಪುರಾವೆಯಾಗಿದೆ. ಈ ವೋಟರ್ ಕಾರ್ಡ್ ಮತ್ತು ಆಧಾರ್ ಕಾರ್ಡ್‌ಗಳೇ ಅವರ ನೆಲೆಯನ್ನು ಗುರುತಿಸಲು ಇರುವ ದಾಖಲೆಗಳು. ಆದರೆ, ಈ ಎರಡೂ ಪುರಾವೆಗಳು ಎಸ್‌ಐಆರ್‌ಗೆ ಅಗತ್ಯ ದಾಖಲೆಗಳಲ್ಲ. ಅವರು ತಮ್ಮ ಹುಟ್ಟು, ಪೋಷಕರು ಹಾಗೂ ಪೂರ್ವಜರ ದಾಖಲೆಗಳನ್ನು ಒದಗಿಸಬೇಕು. ತಾವು ಭಾರತೀಯರು ಎಂಬುದನ್ನು ಸಾಬೀತು ಮಾಡಬೇಕು. ಈ ಸಾಬೀತಿಗೆ ಅವರಲ್ಲಿ ಅಗತ್ಯ ಪುರಾವೆಗಳಿಲ್ಲ.
ಪೋಷಕರಿಂದ ದೂರ ಉಳಿದಿರುವ, ತಮ್ಮೂರುಗಳನ್ನು ಮರೆತುಹೋಗಿದ್ದೇವೆನ್ನುವಷ್ಟು ಹೊರಗುಳಿದಿರುವ ಲೈಂಗಿಕ ಕಾರ್ಯಕರ್ತೆಯರಲ್ಲಿ ಈಗ ಭಯ/ಆತಂಕ ಮಡುಗಟ್ಟಿದೆ. ತಮ್ಮನ್ನು ಭಾರತೀಯರೇ ಅಲ್ಲವೆಂದೂ, ಅಕ್ರಮ ವಲಸಿಗರೆಂದೂ ಬಾಂಗ್ಲಾದೇಶಕ್ಕೆ ದೂಡಿಬಿಡುವರೇನೋ ಎಂದು ಚಿಂತೆಗೀಡಾಗಿದ್ದಾರೆ.
ಸಾಕಷ್ಟು ಅಗತ್ಯ ದಾಖಲೆಗಳಿಲ್ಲದ ಕಾರಣ, ತಾವು ಮತದಾನದಿಂದ ವಂಚಿತರಾಗಬಹುದು, ತಮ್ಮನ್ನು ಅಕ್ರಮ ನಿವಾಸಿಗಳೆಂದು ಹಣೆಪಟ್ಟಿ ಕಟ್ಟಬಹುದು ಎಂಬ ಭಯ ಲೈಂಗಿಕ ಕಾರ್ಯಕರ್ತೆಯರಲ್ಲಿರುವುದು ವಿಶೇಷ ಶಿಬಿರಗಳಲ್ಲಿ ಸ್ಪಷ್ಟವಾಗಿ ಕಂಡುಬರುತ್ತಿದೆ.
ಆ ಮಹಿಳೆಯರು ಹೇಳುವಂತೆ, ಅವರಲ್ಲಿ ಅನೇಕರು – ವಿಶೇಷವಾಗಿ ‘ನೇಪಾಳಿ ಬಾರಿ’ ಮತ್ತು ‘ಬಾಂಗ್ಲಾದೇಶಿ ಬಾರಿ’ ಎಂದು ಕರೆಯಲ್ಪಡುವ ವೇಶ್ಯಾಗೃಹಗಳಲ್ಲಿ ಒಂಟಿಯಾಗಿರುವವರು – ತಮ್ಮನ್ನು ಸರ್ಕಾರ ‘ಗಡಿಪಾರು’ ಮಾಡಿಬಿಡಬಹುದು ಎಂಬ ಭಯದಲ್ಲಿದ್ದಾರೆ.
ವಿಶೇಷ ಕೇಂದ್ರಗಳಲ್ಲಿ ಸರತಿ ಸಾಲಿನಲ್ಲಿದ್ದ 35 ವರ್ಷದ ಮಹಿಳೆಯೊಬ್ಬರು, “ಎಸ್‌ಐಆರ್ ಅನ್ನು ಪೂರ್ಣಗೊಳಿಸಲು ಒಂದು ಆಯ್ಕೆಯಾಗಿರುವ ತಮ್ಮ ಕುಟುಂಬದೊಂದಿಗೆ ಸಂಪರ್ಕವನ್ನು ಸಾಬೀತು ಮಾಡುವ ಹಾದಿಯು ಮುಚ್ಚಿದೆ. ನಾನು 16 ವರ್ಷದವಳಿದ್ದಾಗ ನನ್ನನ್ನು ಕಳ್ಳಸಾಗಣೆ ಮಾಡಿ, ಇಲ್ಲಿಗೆ ಕರೆತರಲಾಗಿದೆ. ನಾನು ನಮ್ಮೂರಿಗೆ ಹಿಂತಿರುಗಲು ಯತ್ನಿಸಿದಾಗ, ನನ್ನನ್ನು ಕರೆದುಕೊಳ್ಳಲು ನನ್ನ ಕುಟುಂಬ ನಿರಾಕರಿಸಿತು. ಈಗಲೂ ಅವರು ನನಗೆ ಸಹಾಯ ಮಾಡುವುದಿಲ್ಲ. ನಾನು ಮತದಾನದ ಹಕ್ಕು ಕಳೆದುಕೊಳ್ಳಬಹುದು. ಅಧಿಕಾರಿಗಳು ಯಾವುದಾದರೂ ರೀತಿಯಲ್ಲಿ ಎಸ್‌ಐಆರ್ ಪೂರ್ಣಗೊಳಿಸಲು ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ” ಎಂದು ಅಳಲು ತೋಡಿಕೊಂಡಿದ್ದಾರೆ.
30 ವರ್ಷದ ಮತ್ತೊಬ್ಬ ಲೈಂಗಿಕ ಕಾರ್ಯಕರ್ತೆ, “ನಾನು 2016 ರಲ್ಲಿ ಮತ ಚಲಾಯಿಸಿದೆ. ಆದರೆ, 2021ರ ಚುನಾವಣೆ ವೇಳೆಗೆ ನನ್ನ ಮತದಾರರ ಕಾರ್ಡ್‌ಅನ್ನು ರದ್ದುಮಾಡಲಾಗಿದೆ. ಅದನ್ನು ಮರುಪಡೆಯಲು ಯತ್ನಿಸುತ್ತಿದ್ದೇನೆ. ಆದರೆ, ಸಾಧ್ಯವಾಗಿಲ್ಲ. ಈಗಲೂ ನನಗೆ ನನ್ನ ಮತದಾರರ ಚೀಟಿ ಸಿಗಬಹುದು ಎಂಬ ಭರವಸೆಯಲ್ಲಿ ಇಲ್ಲಿಗೆ (ಎಸ್‌ಐಆರ್ ಕೇಂದ್ರ) ಬಂದಿದ್ದೇನೆ. ಆದರೆ, ಇಲ್ಲಿ ಕೇಳುತ್ತಿರುವ ದಾಖಲೆಗಳು ನನ್ನನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ” ಎಂದು ಹೇಳಿಕೊಂಡಿದ್ದಾರೆ.
ಕದಮ್‌ತಲಾ ಕ್ಲಬ್‌ನಲ್ಲಿರುವ ಕೇಂದ್ರದಲ್ಲಿ ಎಸ್‌ಐಆರ್ ಪ್ರಕ್ರಿಯೆ ಪೂರ್ಣಗೊಳಿಸಲು ನಿಂತಿದ್ದ 25 ವರ್ಷದ ಯುವತಿಯೊಬ್ಬರು, ಎಸ್‌ಐಆರ್ ಫಾರ್ಮ್‌ನಲ್ಲಿ ವಿಳಾಸವನ್ನು ತುಂಬುವ ಕುರಿತು ಚಿಂತಿತರಾಗಿದ್ದರು. “ನಾವು ಬಾಡಿಗೆ ಮನೆಯಲ್ಲಿದ್ದೇವೆ. ಮನೆಮಾಲೀಕರೊಂದಿಗೆ ಕೇವಲ ಮೌಖಿಕ ಒಪ್ಪಂದದೊಂದಿಗೆ ಸಣ್ಣ ಕೋಣೆಗಳನ್ನು ಬಾಡಿಗೆಗೆ ಪಡೆದಿದ್ದೇವೆ. ನಾವು ಆಗಾಗ್ಗೆ ಸ್ಥಳಾಂತರಗೊಳ್ಳುತ್ತೇವೆ. ಯಾವುದೇ ವಿಳಾಸ ದಾಖಲೆ ಇಲ್ಲ. ನಾನು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದೇ? ನಮ್ಮನ್ನು ಗಡಿಪಾರು ಮಾಡುವರೇ” ಎಂದು ಆತಂಕದಲ್ಲಿ ಕೇಳುತ್ತಿದ್ದುದ್ದನ್ನು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.
ಈ ಲೇಖನ ಓದಿದ್ದೀರಾ?: ಪಶ್ಚಿಮ ಬಂಗಾಳ | ಮುಸ್ಲಿಮರ ಓಲೈಕೆಗೆ ಬಿಜೆಪಿ ತಂತ್ರ-ಕುತಂತ್ರ
“ನನ್ನ ಹೆತ್ತವರ ದಾಖಲೆಗಳು ನನ್ನ ಬಳಿ ಇಲ್ಲ. ನನ್ನನ್ನು ಚಿಕ್ಕ ವಯಸ್ಸಿನಲ್ಲಿ ಇಲ್ಲಿಗೆ ಕಳ್ಳಸಾಗಣೆ ಮಾಡಿ ಕರೆತರಲಾಗಿದೆ. ಅಂದಿನಿಂದ ನನ್ನ ಕುಟುಂಬದೊಂದಿಗೆ ಯಾವುದೇ ಸಂಪರ್ಕವಿಲ್ಲ. ನನ್ನ ಪೋಷಕರು ಸತ್ತಿದ್ದಾರೆ. ನನ್ನ ಸಹೋದರರು ನನ್ನನ್ನು ಇಷ್ಟಪಡುವುದಿಲ್ಲ. ಆದರೆ, ನನ್ನ ಮಗನ ಬಳಿ ಮತದಾರರ ಕಾರ್ಡ್ ಇದೆ. ಅದನ್ನು ರದ್ದುಗೊಳಿಸಲಾಗುತ್ತದೆಯೇ?” ಎಂದು ಸೋನಾಗಚಿಯಲ್ಲಿ ವಾಸಿಸುತ್ತಿರುವ 50 ವರ್ಷದ ಲೈಂಗಿಕ ಕಾರ್ಯಕರ್ತೆಯೊಬ್ಬರು ಆಂತಕಗೊಂಡಿದ್ದಾರೆ.
ಕೋಲ್ಕತ್ತಾದ ಲೈಂಗಿಕ ಕಾರ್ಯಕರ್ತೆಯರನ್ನು ಎಸ್‌ಐಆರ್ ಪ್ರಕ್ರಿಯೆಗೆ ಒಳಪಡಿಸುವ ಕುರಿತು ಪ್ರತಿಕ್ರಿಯಿಸಿರುವ ಚುನಾವಣಾ ಆಯೋಗ ಸಿಇಒ ಮನೋಜ್ ಅಗರ್ವಾಲ್, “ಲೈಂಗಿಕ ಕಾರ್ಯಕರ್ತೆಯರ ಎಸ್‌ಐಆರ್ ಫಾರ್ಮ್‌ಗಳನ್ನು ಪೂರ್ಣಗೊಳಿಸುವಲ್ಲಿ ಸಮಸ್ಯೆಗಳಿವೆ. ಅವುಗಳನ್ನು ಪರಿಹರಿಸಲು ಪ್ರಯತ್ನಿಸುತ್ತಿದ್ದೇವೆ. ಹಲವು ಅರ್ಜಿದಾರರ ಬಳಿ ಸರಿಯಾದ ದಾಖಲೆಗಳಿಲ್ಲ. ಹಲವರಿಗೆ ತಮ್ಮ ಕುಟುಂಬಗಳ ದಾಖಲೆಗಳನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ. ನಮಗೆ ವಿಶೇಷ ಅಧಿಕಾರಗಳಿವೆ, ಅದನ್ನು ಬಳಸಿಕೊಂಡು, ಅವರ ಅರ್ಜಿಗಳನ್ನು ಪೂರ್ಣಗೊಳಿಸಬಹುದು” ಎಂದು ಭರವಸೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿ ಪಂಜಾ, “ಇಲ್ಲಿನ ಮಹಿಳೆಯರ ಬಳಿ 2002ರ ಎಸ್‌ಐಆರ್ ದಾಖಲೆಗಳಿಲ್ಲ. ಆದರೆ, ಆಧಾರ್ ಕಾರ್ಡ್‌ಗಳು ಮತ್ತು ಬ್ಯಾಂಕ್ ಖಾತೆಗಳಂತಹ ಇತರ ದಾಖಲೆಗಳಿವೆ. ಇಲ್ಲಿನ ಮಹಿಳೆಯರ ಗೌಪ್ಯತೆಯನ್ನು ಪರಿಗಣಿಸಿ ಈ ರೀತಿಯ ವಿಶೇಷ ಕೇಂದ್ರಗಳನ್ನು ತೆರೆಯುವುದು ಅತ್ಯಾವಶ್ಯಕ. ಅವರ ಸಮಸ್ಯೆಗಳನ್ನು ಗಮನಿಸಿ, ಅವರಿಗೆ ಅಗತ್ಯ ನೆರವು ನೀಡುವ ಅಗತ್ಯತೆ ಇದೆ” ಎಂದಿದ್ದಾರೆ.
ಮಾಹಿತಿ ಮೂಲ: ದಿ ಇಂಡಿಯನ್ ಎಕ್ಸ್‌ಪ್ರೆಸ್




