ಭಾರತೀಯ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧಾನ ಅವರ ತಂದೆಗೆ ಹೃದಯಾಘಾತವಾಗಿದೆ. ಈ ಕಾರಣದಿಂದಾಗಿ ಇಂದು ನಡೆಯಲಿದ್ದ ಮಂಧಾನ ವಿವಾಹ ಮುಂದೂಡಿಕೆ ಮಾಡಲಾಗಿದೆ. ಸಂಗೀತ ಸಂಯೋಜಕ ಪಲಾಶ್ ಮುಚ್ಛಲ್ ಅವರ ಜತೆ ಮಂಧಾನ ವಿವಾಹ ಭಾನುವಾರ ನಡೆಯಲಿತ್ತು.
ಸಾಂಗ್ಲಿಯ ಸ್ಯಾಮ್ಡೋಲ್‌ನಲ್ಲಿರುವ ಮಂಧನಾ ಫಾರ್ಮ್ ಹೌಸ್‌ನಲ್ಲಿ ವಿವಾಹದ ಸಿದ್ಧತೆಗಳು ನಡೆಯುತ್ತಿರುವಾಗ ಅವರ ತಂದೆ ಶ್ರೀನಿವಾಸ್ ಮಂಧಾನ ಅವರಿಗೆ ಹೃದಯಾಘಾತವಾಗಿದೆ ಎಂದು ಸ್ಮೃತಿ ಅವರ ವ್ಯವಹಾರ ವ್ಯವಸ್ಥಾಪಕ ತುಹಿನ್ ಮಿಶ್ರಾ ದೃಢಪಡಿಸಿದ್ದಾರೆ. ಸದ್ಯ ಮಂಧಾನ ತಂದೆ ಚಿಕಿತ್ಸೆ ಪಡೆಯುತ್ತಿದ್ದಾರೆ, ಸ್ಥಿತಿ ಸ್ಥಿರವಾಗಿದೆ ಎನ್ನಲಾಗಿದೆ.
ಇದನ್ನು ಓದಿದ್ದೀರಾ? ವ್ಯಕ್ತಿಚಿತ್ರ | ಸ್ಮೃತಿ ಮಂಧಾನ ಎಂಬ ವಿಶ್ವ ಕ್ರಿಕೆಟ್‌ನ ಮಿಂಚು
“ಇಂದು ಬೆಳಿಗ್ಗೆ ಮಂಧಾನ ತಂದೆ ಉಪಾಹಾರ ಸೇವಿಸುತ್ತಿದ್ದಾಗ ಅಸ್ವಸ್ಥರಾದರು. ಅವರ ಆರೋಗ್ಯ ಸುಧಾರಿಸಿಕೊಳ್ಳುವ ನಿರೀಕ್ಷೆಯಿತ್ತು. ಆದರೆ ಅವರು ಇನ್ನಷ್ಟೂ ಅಸ್ವಸ್ಥರಾದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಿದೆವು. ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಸುಧಾರಿಸುವವರೆಗೆ ಅನಿರ್ದಿಷ್ಟವಾಗಿ ವಿವಾಹ ಮುಂದೂಡಿಕೆ ಮಾಡಲಾಗಿದೆ” ಎಂದು ಸ್ಮೃತಿಯ ಮ್ಯಾನೇಜರ್ ಹೇಳಿದರು.
ಇನ್ನು ಶ್ರೀನಿವಾಸ್ ಮಂಧಾನ ಅವರ ಆರೋಗ್ಯ ಮತ್ತು ಚೇತರಿಕೆಯ ಮೇಲೆ ಗಮನಹರಿಸುವುದರಿಂದ ಈ ವಿಚಾರದಲ್ಲಿ ಗೌಪ್ಯತೆಯನ್ನು ಕಾಪಾಡಲು ಬಯಸುವುದಾಗಿ ಕುಟುಂಬಸ್ಥರು ಹೇಳಿದ್ದಾರೆ.
ಸ್ಮೃತಿ ಮತ್ತು ಪಲಾಶ್ ನವೆಂಬರ್ 23ರಂದು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಿಕಟ ಕುಟುಂಬ ಸದಸ್ಯರು ಮತ್ತು ಅಭಿಮಾನಿಗಳ ಸಮ್ಮುಖದಲ್ಲಿ ವಿವಾಹವಾಗಲಿದ್ದರು. ಮಹಿಳಾ ವಿಶ್ವಕಪ್ ವಿಜೇತ ಭಾರತೀಯ ಕ್ರಿಕೆಟ್ ತಂಡದ ಅನೇಕ ಸದಸ್ಯರು ವಿವಾಹ ಸಂಭ್ರಮಾಚರಣೆಯಲ್ಲಿ ಭಾಗಿಯಾಗಲಿದ್ದರು.





