ಬೇಕರಿಯಲ್ಲಿ ಮಹಿಳೆಯೊಬ್ಬರು ಖರೀದಿಸಿದ್ದ ‘ಮೊಟ್ಟೆ ಪಫ್’ನಲ್ಲಿ ಸತ್ತ ಹಾವು ಇರುವುದು ಪತ್ತೆಯಾಗಿರುವ ಘಟನೆ ತೆಲಂಗಾಣದ ಮಹಬೂನಗರ್ ಜಿಲ್ಲೆಯಲ್ಲಿ ನಡೆದಿದೆ. ಘಟನೆ ಸಂಬಂಧ ಪಫ್‌ಅನ್ನು ತಯಾರಿಸಿ, ಮಾರಾಟ ಮಾಡಿದ್ದ ಬೇಕರಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಬೂನಗರ್ ಜಿಲ್ಲೆಯ ಜಡ್ಚರ್ಲಾ ಪುರಸಭೆ ವ್ಯಾಪ್ತಿಯಲ್ಲಿರುವ ಐಯ್ಯಂಗಾರ್ ಬೇಕರಿಯಲ್ಲಿ ಶ್ರೀಶೈಲ ಎಂಬ ಮಹಿಳೆ ಮೊಟ್ಟೆ ಪಫ್ ಖರೀದಿಸಿದ್ದರು. ಅದನ್ನು ಮನೆಗೆ ತಂದ ಬಳಿಕ, ತಿನ್ನಲೆಂದು ನೋಡಿದಾಗ ಅದರೊಳಗೆ ಸತ್ತ ಹಾವು ಇರುವುದನ್ನು ಗಮನಿಸಿದ್ದಾರೆ. ತಕ್ಷಣವೇ ಬೇಕರಿಗೆ ತೆರಳಿ, ಮಾಲೀಕನಿಗೆ ವಿಷಯ ತಿಳಿಸಿದಾಗ, ಆತ ನಿರ್ಲಕ್ಷ್ಯದಿಂದ ಉತ್ತರಿಸಿದ್ದಾನೆ. ಮಾತ್ರವಲ್ಲದೆ, ತಮ್ಮದೇನೂ ತಪ್ಪಿಲ್ಲವೆಂದು ವಾದಿಸಿದ್ದಾನೆ.
ಆತನ ನಡೆಯಿಂದ ಸಿಟ್ಟಾದ ಮಹಿಳೆ ಮತ್ತು ಆಕೆಯ ಕುಟುಂಬಸ್ಥರು ಜಡ್ಚರ್ಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಸಿಐ, “ಸ್ಥಳೀಯ ಆಹಾರ ನಿರೀಕ್ಷಕರ ಜೊತೆ ಮಾತನಾಡಿದ್ದೇವೆ. ಅವರ ವರದಿಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ತಿಳಿಸಿದ್ದಾರೆ.




