ಹಿಮಾಚಲ ಪ್ರದೇಶದಲ್ಲಿ ಭಾರೀ ಹಿಮಪಾತವಾಗಿದ್ದು, ಜನರ ಬದುಕು ಅಸ್ತವ್ಯಸ್ತವಾಗಿದೆ. ಹಿಮಪಾತ, ಭೂಕುಸಿತದಿಂದಾಗಿ ಎರಡು ರಾಷ್ಟ್ರೀಯ ಹೆದ್ದಾರಿಗಳು ಸೇರಿ ಒಟ್ಟು 563 ರಸ್ತೆಗಳ ಮುಚ್ಚಲ್ಪಟ್ಟಿವೆ. ಸುಮಾರು 4,797 ಟ್ರಾನ್ಸ್‌ಫಾರ್ಮರ್‌ಗಳು ಸ್ಥಗಿತಗೊಂಡಿವೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (SEOC) ಹೇಳಿದೆ.
“ಪ್ರಸ್ತುತ ಹಿಮಪಾತ ಮತ್ತು ಮಳೆಯಿಂದಾಗಿ ಹಲವಾರು ಜಿಲ್ಲೆಗಳಲ್ಲಿ ರಸ್ತೆ ಸಂಪರ್ಕ ಮತ್ತು ವಿದ್ಯುತ್ ಮೂಲಸೌಕರ್ಯಗಳು ಹಾನಿಗೊಳಗಾಗಿವೆ. ಹವಾಮಾನ ಪರಿಸ್ಥಿತಿಯನ್ನು ನಿಭಾಯಿಸಲು ಮತ್ತು ಮೂಲಸೌಕರ್ಯಗಳ ಪುನಃಸ್ಥಾಪನೆಗಾಗಿ ಕಾರ್ಯಾಚರಣೆಗಳು ನಡೆಯುತ್ತಿವೆ” ಎಂದು ಎಸ್‌ಇಒಸಿ ಅಧಿಕಾರಿಗಳು ತಿಳಿಸಿದ್ದಾರೆ.
ಹಿಮಾಚಲದ ಲಹೌಲ್ ಮತ್ತು ಸ್ಪಿಟಿ ಜಿಲ್ಲೆಗಳಲ್ಲಿ ಭಾರೀ ಸಮಸ್ಯೆಗಳು ಎದುರಾಗಿವೆ. ಅಲ್ಲಿ 290 ರಸ್ತೆಗಳು ನಿರ್ಬಂಧಿಸಲ್ಪಟ್ಟಿವೆ ಮತ್ತು NH-03 (ಕೋಕ್ಸರ್-ರೋಹ್ತಾಂಗ್ ಪಾಸ್-ದರ್ಚಾ-ಸರ್ಚು) ಮತ್ತು NH-505 (ಗ್ರಾಂಫು-ಬಾಟಲ್-ಲೊಸ್ಸರ್) ಎರಡೂ ಭಾರೀ ಹಿಮಪಾತದಿಂದಾಗಿ ಮುಚ್ಚಲ್ಪಟ್ಟಿವೆ.
ಚಂಬಾ ಜಿಲ್ಲೆಯಲ್ಲಿ, ಪಂಗಿ, ಭರ್ಮೌರ್, ಟಿಸ್ಸಾ ಹಾಗೂ ಸಲೂನಿ ಸೇರಿದಂತೆ ಕೆಲ ಉಪವಿಭಾಗಗಳಲ್ಲಿ 105 ರಸ್ತೆಗಳು ಮತ್ತು 659 ಟ್ರಾನ್ಸ್‌ಫಾರ್ಮರ್‌ಗಳು ಅಸ್ತವ್ಯಸ್ತಗೊಂಡಿವೆ. ಮಂಡಿಯಲ್ಲಿ 64 ರಸ್ತೆ ತಡೆಗಳು ಮತ್ತು 901 ಟ್ರಾನ್ಸ್‌ಫಾರ್ಮರ್‌ಗಳು ಹಾನಿಯಾಗಿವೆ. ಸೋಲನ್ ಜಿಲ್ಲೆಯಲ್ಲಿ ಅತಿ ಹೆಚ್ಚು ವಿದ್ಯುತ್ ಅಡಚಣೆಗಳು ದಾಖಲಾಗಿವೆ. 1,856 ಟ್ರಾನ್ಸ್‌ಫಾರ್ಮರ್‌ಗಳು ಹಾನಿಗೊಳಗಾಗಿವೆ. ಕುಲ್ಲು-ಮನಾಲಿ ಭಾಗದಲ್ಲಿ 9 ರಸ್ತೆಗಳು ಮತ್ತು 682 ಟ್ರಾನ್ಸ್‌ಫಾರ್ಮರ್‌ಗಳು ಸ್ಥಗಿತಗೊಂಡಿವೆ.
ಆದಾಗ್ಯೂ, ಶಿಮ್ಲಾದ ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರ (DEOC) ವಿದ್ಯುತ್ ವ್ಯತ್ಯಯ ಮತ್ತು ಇಂಧನ ಸಂಬಂಧಿತ ಸಮಸ್ಯೆಗಳಿಂದಾಗಿ ತನ್ನ ವಿವರವಾದ ವರದಿಯನ್ನು ಸಲ್ಲಿಸಲು ಸಾಧ್ಯವಾಗಿಲ್ಲ ಎಂದು ವರದಿಯಾಗಿದೆ.
ಪ್ರಯಾಣಿಕರು ಮತ್ತು ಪ್ರವಾಸಿಗರು ಎತ್ತರದ ಪ್ರದೇಶಗಳಲ್ಲಿ ಅನಗತ್ಯ ಪ್ರಯಾಣ ಬೆಳೆಸದಂತೆ, ಜಿಲ್ಲಾಡಳಿತಗಳು ನೀಡುವ ಸಲಹೆಗಳನ್ನು ಪಾಲಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.




