ಮಕ್ಕಳ ಮಾನಸಿಕ ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಆಂಧ್ರಪ್ರದೇಶ ಸರ್ಕಾರ ಮಹತ್ವದ ಹೆಜ್ಜೆಯನ್ನಿಡಲು ಮುಂದಾಗಿದೆ. 16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಬಳಸುವುದನ್ನು ನಿಷೇಧಿಸಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಆಂಧ್ರಪ್ರದೇಶದ ಐಟಿ ಸಚಿವ ನಾರಾ ಲೋಕೇಶ್ ಸುಳಿವು ನೀಡಿದ್ದಾರೆ.
ಸ್ವಿಟ್ಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆ ಸಮ್ಮೇಳನದ ವೇಳೆ ‘ಬ್ಲೂಮ್‌ಬರ್ಗ್’ ವಾಹಿನಿಯೊಂದಿಗೆ ಮಾತನಾಡಿದ ಅವರು, ಆಸ್ಟ್ರೇಲಿಯಾ ಇತ್ತೀಚೆಗೆ ಜಾರಿಗೆ ತಂದಿರುವ ಕಠಿಣ ಕಾನೂನಿನ ಮಾದರಿಯಲ್ಲೇ ಆಂಧ್ರದಲ್ಲೂ ಕಾನೂನು ರೂಪಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.
“ಚಿಕ್ಕ ವಯಸ್ಸಿನ ಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ವಿಷಯಗಳನ್ನು ಅರ್ಥಮಾಡಿಕೊಳ್ಳುವಷ್ಟು ಪಕ್ವತೆ ಹೊಂದಿರುವುದಿಲ್ಲ. ಅವರು ಎಂತಹ ಮಾಹಿತಿಗೆ ತೆರೆದುಕೊಳ್ಳುತ್ತಿದ್ದಾರೆ ಎಂಬುದು ಅವರ ಅರಿವಿಗೆ ಬರುವುದಿಲ್ಲ. ಹೀಗಾಗಿ, ಹದಿಹರೆಯದವರನ್ನು ಇಂತಹ ಪ್ಲಾಟ್‌ಫಾರ್ಮ್‌ಗಳಿಂದ ದೂರವಿಡಲು ಬಲವಾದ ಕಾನೂನು ಚೌಕಟ್ಟಿನ ಅಗತ್ಯವಿದೆ,” ಎಂದು ನಾರಾ ಲೋಕೇಶ್ ಪ್ರತಿಪಾದಿಸಿದ್ದಾರೆ.
ಕಳೆದ ಡಿಸೆಂಬರ್‌ನಲ್ಲಿ ಆಸ್ಟ್ರೇಲಿಯಾದ ಆಂಥೋನಿ ಅಲ್ಬನೀಸ್ ಸರ್ಕಾರವು ವಿಶ್ವದಲ್ಲೇ ಮೊದಲ ಬಾರಿಗೆ ಇಂತಹದೊಂದು ಕಠಿಣ ನಿರ್ಧಾರವನ್ನು ತೆಗೆದುಕೊಂಡಿತ್ತು. ಅಲ್ಲಿನ ಕಾನೂನಿನ ಪ್ರಕಾರ, 16 ವರ್ಷದೊಳಗಿನ ಮಕ್ಕಳು ಟಿಕ್‌ಟಾಕ್ , ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಸ್ನ್ಯಾಪ್‌ಚಾಟ್ ಮತ್ತು ಎಕ್ಸ್ (ಟ್ವಿಟರ್) ನಂತಹ ಪ್ರಮುಖ ತಾಣಗಳನ್ನು ಬಳಸುವಂತಿಲ್ಲ. ಮಕ್ಕಳು ಹೊಸ ಖಾತೆಗಳನ್ನು ತೆರೆಯುವುದನ್ನು ನಿರ್ಬಂಧಿಸಲಾಗಿದೆ ಮತ್ತು ಹಳೆಯ ಖಾತೆಗಳನ್ನು ನಿಷ್ಕ್ರಿಯಗೊಳಿಸಬೇಕಾಗುತ್ತದೆ. ವಯಸ್ಸನ್ನು ದೃಢೀಕರಿಸುವ ಜವಾಬ್ದಾರಿಯನ್ನು ಆಯಾ ಸಾಮಾಜಿಕ ಜಾಲತಾಣ ಸಂಸ್ಥೆಗಳಿಗೇ ನೀಡಲಾಗಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಸಾಂವಿಧಾನಿಕ ಸಂಸ್ಥೆಗಳ ವಿಶ್ವಾಸಾರ್ಹತೆಗೆ ಧಕ್ಕೆ ತರುವುದು ಆಡಳಿತವೇ?
ಈ ಕುರಿತು ಪ್ರತಿಕ್ರಿಯಿಸಿರುವ ತೆಲುಗು ದೇಶಂ ಪಕ್ಷದ (ಟಿಡಿಪಿ) ರಾಷ್ಟ್ರೀಯ ವಕ್ತಾರ ದೀಪಕ್ ರೆಡ್ಡಿ, ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ. “ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರದ ಅವಧಿಯಲ್ಲಿ ಸಾಮಾಜಿಕ ಜಾಲತಾಣಗಳನ್ನು ಮಹಿಳೆಯರ ತೇಜೋವಧೆ ಮಾಡಲು ಮತ್ತು ದ್ವೇಷಪೂರಿತ ದಾಳಿಗಳನ್ನು ನಡೆಸಲು ವ್ಯಾಪಕವಾಗಿ ದುರ್ಬಳಕೆ ಮಾಡಿಕೊಳ್ಳಲಾಗಿತ್ತು,” ಎಂದು ಅವರು ಆರೋಪಿಸಿದ್ದಾರೆ.
”ಮಕ್ಕಳು ಆನ್‌ಲೈನ್‌ನಲ್ಲಿ ಲಭ್ಯವಿರುವ ನಕಾರಾತ್ಮಕ ಮತ್ತು ಹಾನಿಕಾರಕ ವಿಷಯಗಳನ್ನು ಗ್ರಹಿಸುವಷ್ಟು ಭಾವನಾತ್ಮಕವಾಗಿ ಪ್ರಬುದ್ಧರಾಗಿರುವುದಿಲ್ಲ. ಇದು ಸರ್ಕಾರದ ಕಣ್ಗಾವಲು ಅಲ್ಲ, ಬದಲಿಗೆ ವಿಷಕಾರಿ ವಿಷಯಗಳಿಂದ ಮಕ್ಕಳನ್ನು ರಕ್ಷಿಸುವ ಪ್ರಾಮಾಣಿಕ ಪ್ರಯತ್ನವಾಗಿದೆ,” ಎಂದು ದೀಪಕ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಒಂದು ವೇಳೆ ಈ ಕಾನೂನು ಜಾರಿಯಾದರೆ, ಸಾಮಾಜಿಕ ಜಾಲತಾಣಗಳ ಬಳಕೆಯ ಮೇಲೆ ವಯಸ್ಸಿನ ನಿರ್ಬಂಧ ಹೇರಿದ ಭಾರತದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಆಂಧ್ರಪ್ರದೇಶ ಪಾತ್ರವಾಗಲಿದೆ. ಕಳೆದ ವರ್ಷ ಮದ್ರಾಸ್ ಹೈಕೋರ್ಟ್ ಕೂಡ ಕೇಂದ್ರ ಸರ್ಕಾರಕ್ಕೆ ಆಸ್ಟ್ರೇಲಿಯಾದ ಮಾದರಿಯನ್ನು ಪರಿಶೀಲಿಸುವಂತೆ ಸಲಹೆ ನೀಡಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ.





