ಲಡಾಖ್ ಸಾಮಾಜಿಕ ಹೋರಾಟಗಾರ, ಪರಿಸರವಾದಿ ಸೋನಮ್ ವಾಂಗ್‌ಚುಕ್ ಅವರ ಬಂಧನ ಆದೇಶವು ಈ ಹಿಂದಿನ ಬಂಧನ ಆದೇಶಗಳ ನಕಲಾಗಿದೆ. ಭಾಷೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ, ಏನೂ ಇಲ್ಲ. ಅದೇ ಪದ, ಅದೇ ವಾಕ್ಯ, ಎಲ್ಲವೂ ಒಂದೇ ಆಗಿದೆ” ಎಂದು ಸುಪ್ರೀಂ ಕೋರ್ಟ್‌ನಲ್ಲಿ ಹಿರಿಯ ವಕೀಲ ಕಪಿಲ್ ಸಿಬಲ್ ವಾದಿಸಿದ್ದಾರೆ.
ಲಡಾಖ್‌ಗೆ ರಾಜ್ಯ ಸ್ಥಾನಮಾನ ನೀಡಬೇಕು ಮತ್ತು ಸಂವಿಧಾನದ ಆರನೇ ಅಡಿಯಲ್ಲಿ ಲಡಾಖ್ ಅನ್ನು ಸೇರಿಸಬೇಕು ಎಂದು ಒತ್ತಾಯಿಸಿ ಸೋನಮ್ ವಾಂಗ್‌ಚುಕ್ ಹಲವು ಬಾರಿ ಪ್ರತಿಭಟನೆ ನಡೆಸಿದ್ದಾರೆ, ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಸೋನಮ್ ಉಪವಾಸ ನಡೆಸುತ್ತಿದ್ದ ಶಹೀದ್ ಪಾರ್ಕ್‌ನ ಹೊರಭಾಗದಲ್ಲಿ ಹಿಂಸಾಚಾರ ನಡೆದಿದ್ದು, ನಾಲ್ವರು ಗುಂಡೇಟಿಗೆ ಬಲಿಯಾಗಿದ್ದಾರೆ. ಇದಾದ ಬಳಿಕ ಹಿಂಸಾಚಾರಕ್ಕೆ ಸೋನಮ್ ಭಾಷಣವೇ ಕಾರಣ ಎಂದು ಆರೋಪಿಸಿ ಕಠಿಣ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ (ಎನ್‌ಎಸ್‌ಎ) ಅಡಿಯಲ್ಲಿ ಬಂಧಿಸಲಾಗಿದೆ.
ಇದನ್ನು ಓದಿದ್ದೀರಾ? ಶಾಂತಿ-ಅಹಿಂಸೆಯ ನನ್ನ ಮನವಿಯನ್ನು ಅಕ್ರಮವಾಗಿ ಹತ್ತಿಕ್ಕಲಾಗಿದೆ, ಪಾತಕಿಯಂತೆ ಬಿಂಬಿಸಲಾಗುತ್ತಿದೆ: ‘ಸುಪ್ರೀಂ’ ಗೆ ವಾಂಗ್‌ಚುಕ್ ಅರಿಕೆ
ಇದಾದ ಬಳಿಕ ಸೋನಮ್ ಪತ್ನಿ, ಶಿಕ್ಷಕಿ ಗೀತಾಂಜಲಿ ಆಂಗ್ಮೋ ಈ ಬಂಧನವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಅರವಿಂದ್ ಕುಮಾರ್ ಮತ್ತು ನ್ಯಾಯಮೂರ್ತಿ ಪಿ.ಬಿ. ವರಾಲೆ ಅವರನ್ನೊಳಗೊಂಡ ಪೀಠವು ಮುಂದುವರಿಸಿದೆ.
ಆಂಗ್ಮೋ ಪರವಾಗಿ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್ ಮೂರು ಪ್ರಮುಖ ವಾದಗಳನ್ನು ಮಂಡಿಸಿದ್ದಾರೆ. ಅಧಿಕಾರಿಗಳು ಬಂಧನಕ್ಕೆ ದಾಖಲೆಯಾಗಿ ಇಟ್ಟುಕೊಂಡಿರುವ ನಾಲ್ಕು ವಿಡಿಯೋಗಳನ್ನು ಅವರಿಗೆ ನೀಡಲಾಗಿಲ್ಲ ಎಂದು ಸಿಬಲ್ ಮತ್ತೊಮ್ಮೆ ಹೇಳಿದ್ದಾರೆ. ಹಾಗೆಯೇ ವಿಧಿ 22(1) ಮತ್ತು 22(5) ಅನ್ನು ಉಲ್ಲೇಖಿಸಿದ್ದು ಯಾವುದೇ ವ್ಯಕ್ತಿಗೆ ಕಾರಣ ತಿಳಿಸದೆ ಬಂಧಿಸಲಾಗುವುದಿಲ್ಲ, ಕಾನೂನು ವೃತ್ತಿಪರರನ್ನು ಸಂಪರ್ಕಿಸುವ ಹಕ್ಕನ್ನು ನಿಕಾರಿಸುವಂತಿಲ್ಲ ಎಂದು ಹೇಳಿದ್ದಾರೆ.
“ಬಂಧನ ಆದೇಶ ಮತ್ತು ಬಂಧನ ಆದೇಶಕ್ಕಾಗಿ ಸಂಗ್ರಹಿಸಿದ ಎಲ್ಲಾ ದಾಖಲೆಗಳನ್ನು ಹಂಚಿಕೊಂಡ ನಂತರವೇ ಸೆಕ್ಷನ್ 5(ಎ) ಎನ್‌ಎಸ್‌ಎ ಅನ್ವಯಿಸಬಹುದು. ಅದು ನನ್ನ ಸಾಂವಿಧಾನಿಕ ಹಕ್ಕು. 25ನೇ ವಿಧಿಯು ಸೆಕ್ಷನ್ 5(ಎ) ಎನ್‌ಎಸ್‌ಎಗೆ ಒಳಪಡುವುದಿಲ್ಲ. ಸಂವಿಧಾನವನ್ನು ರಚಿಸಿದ ಕ್ಷಣದಿಂದಲೇ ಕಾನೂನನ್ನು ರೂಪಿಸಲಾಗಿದೆ. 5ಎ ಅನ್ವಯಿಸಬೇಕಾದರೆ, ಎಲ್ಲವನ್ನೂ ನನಗೆ ಪೂರೈಸಬೇಕು” ಎಂದು ಸೋನಮ್ ಪರವಾಗಿ ಸಿಬಲ್ ವಾದಿಸಿದ್ದಾರೆ.
ನ್ಯಾಯಾಲಯವು ಈ ಪ್ರಕರಣದ ವಿಚಾರಣೆಯನ್ನು ನಾಳೆ, ಅಂದರೆ ಜನವರಿ 13ರಂದು ಮುಂದುವರೆಸಲಿದೆ.





