ಜೈಲು ಬ್ಯಾರಕ್‌ಗಳನ್ನು ಸುಧಾರಿಸುವ ಪ್ರಯೋಗ ನಡೆಸಲು ಪರಿಸರವಾದಿ, ಸಾಮಾಜಿಕ ಹೋರಾಟಗಾರ ಸೋನಮ್ ವಾಂಗ್‌ಚುಕ್ ಅವರಿಗೆ ಜೈಲಿನಲ್ಲಿ ಥರ್ಮಾಮೀಟರ್ ಬೇಕಾಗಿದೆ ಎಂದು ಕೇಳಿರುವುದಾಗಿ ಪತ್ನಿ ಗೀತಾಂಜಲಿ ಜೆ ಆಂಗ್ಮೋ ಬುಧವಾರ ಹೇಳಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಆಂಗ್ಮೋ, “ವಾಂಗ್‌ಚುಕ್ ಅವರನ್ನು ಭೇಟಿಯಾದೆ. ಅಂತಿಮವಾಗಿ ಇರುವೆಯ ಬಗ್ಗೆ ಮತ್ತು ಹವಾಮಾನ ಬದಲಾವಣೆಯ ಬಗ್ಗೆ ಒಂದು ಪುಸ್ತಕವನ್ನು ನೀಡಲು ಸಾಧ್ಯವಾಯಿತು. ಈಗ ಬಂಧನದಲ್ಲಿದ್ದಾರೆ. 110 ದಿನಗಳಿಗೂ ಹೆಚ್ಚು ಕಾಲದಿಂದ ಜೈಲಿನಲ್ಲಿದ್ದಾರೆ” ಎಂದಿದ್ದಾರೆ.
ಇದನ್ನು ಓದಿದ್ದೀರಾ? ಸೋನಮ್ ವಾಂಗ್‌ಚುಕ್ ಜೈಲು ಸೇರಿ 100 ದಿನ: ಲಡಾಖ್ ಜನರಿಗಾಗಿ ಧ್ವನಿಯೆತ್ತಿ ಮೋದಿ ಶತ್ರುವಾದರೆ?
“ಜೈಲು ಬ್ಯಾರಕ್‌ಗಳನ್ನು ಉತ್ತಮಗೊಳಿಸಲು ಪ್ರಯೋಗಗಳನ್ನು ನಡೆಸಲು ಥರ್ಮಾಮೀಟರ್‌ಗಳಂತಹ ಉಪಕರಣಗಳನ್ನು ಪಡೆಯಬಹುದೇ ಎಂದು ಜೈಲು ಆಡಳಿತ ಮತ್ತು ಸುಪ್ರೀಂ ಕೋರ್ಟ್‌ನೊಂದಿಗೆ ಪರಿಶೀಲಿಸಲು ವಾಂಗ್‌ಚುಕ್ ನನ್ನನ್ನು ಕೇಳಿಕೊಂಡಿದ್ದಾರೆ” ಎಂದು ತಿಳಿಸಿದರು.
ಲಡಾಖ್ ರಾಜ್ಯ ಸ್ಥಾನಮಾನಕ್ಕಾಗಿ ಹೋರಾಟ ನಡೆಸುತ್ತಿದ್ದ ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ, ಶಿಕ್ಷಣತಜ್ಞ ವಾಂಗ್‌ಚುಕ್ ಅವರನ್ನು ಸೆಪ್ಟೆಂಬರ್‌ನಲ್ಲಿ ಎನ್‌ಎಸ್‌ಎ ಅಡಿಯಲ್ಲಿ ಬಂಧಿಸಲಾಗಿದೆ. ನಾಲ್ವರ ಸಾವಿಗೆ ಕಾರಣವಾದ ಲಡಾಖ್ ಹಿಂಸಾಚಾರಕ್ಕೆ ವಾಂಗ್‌ಚುಕ್ ಪ್ರಚೋದನಕಾರಿ ಭಾಷಣವೇ ಕಾರಣ ಎಂದು ಹೇಳಿ ಕೇಂದ್ರ ಸರ್ಕಾರ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿಸಿದೆ. ಸದ್ಯ ವಾಂಗ್‌ಚುಕ್ 100ಕ್ಕೂ ಅಧಿಕ ದಿನಗಳಿಂದ ಜೋಧಪುರದ ಕೇಂದ್ರ ಕಾರಾಗೃಹದಲ್ಲಿದ್ದು ಸದ್ಯ ಸೋನಮ್ ಪತ್ನಿ ಎನ್‌ಎಸ್‌ಎ ಆಂಗ್ಮೋ ಬಂಧನ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ.





